More

    ಹಳಿಯಾಳ ಮಾರುಕಟ್ಟೆಯಲ್ಲಿ ಜನಸಂದಣಿ

    ಹಳಿಯಾಳ: ತಾಲೂಕಿನ ಜನರು ಲಾಕ್​ಡೌನ್ ಸಡಿಲಿಕೆಯನ್ನು ಅತ್ಯಂತ ಹಗುರುವಾಗಿ ಪರಿಗಣಿಸಿರುವಂತೆ ಕಂಡು ಬರುತ್ತಿದೆ. ಪಟ್ಟಣದ ಮಾರುಕಟ್ಟೆಗೆ ಎಲ್ಲೆಡೆಯಿಂದ ಆಗಮಿಸಿದ್ದ ಜನರ ಪ್ರಮಾಣ ನೋಡಿದರೆ ಭಾನುವಾರದ ಸಂತೆಯನ್ನು ನೆನಪಿಸಿತು.

    ಪಟ್ಟಣದಲ್ಲಿ ಪ್ರತಿ ಭಾನುವಾರ ವಾರದ ಸಂತೆಯ ದಿನವಾಗಿರುತ್ತದೆ. ಲಾಕ್​ಡೌನ್ ಸಡಿಲಿಕೆಯಿಂದ ವಾರದ ಸಂತೆ ನಡೆಯಬಹುದೆಂದು ತಪ್ಪಾಗಿ ಊಹಿಸಿ ಗ್ರಾಮೀಣ ಭಾಗದ ಜನ ಪಟ್ಟಣಕ್ಕೆ ಬಂದಿದ್ದರು. ಇದರ ಪರಿಣಾಮ ಪಟ್ಟಣದಲ್ಲಿ ಎಲ್ಲಿ ನೋಡಿದಲ್ಲಿ ಜನಸಂದಣಿ ಕಂಡು ಬಂತು.

    ಗ್ರಾಮೀಣ ಭಾಗದ ಜನರು ಪರಸ್ಪರ ಅಂತರ ಕಾಯ್ದುಕೊಳ್ಳದೇ ಗೂಡ್ಸ್ ಟ್ರ್ಯಾಕ್ಸ್​ಗಳಲ್ಲಿ ತುಂಬಿಕೊಂಡು ಮಾರುಕಟ್ಟೆಗೆ ಆಗಮಿಸಿದ್ದರು. ಮಾರುಕಟ್ಟೆಯಲ್ಲಿ ಜನರ ಸಂಚಾರ ಹೆಚ್ಚಾಗುತ್ತಿದನ್ನು ಕಂಡು ಪೋಲಿಸರು, ಗೃಹ ರಕ್ಷಕದಳದವರು, ಪುರಸಭೆ ಮುಖ್ಯಾಧಿಕಾರಿ ಹಾಗೂ ತಂಡದವರು ಮಾರುಕಟ್ಟೆಯಲ್ಲಿ ಸಂಚರಿಸಿ ಪರಸ್ಪರ ಅಂತರ ಕಾಪಾಡುವಂತೆ ಮನವಿ ಮಾಡಿದರು.

    ಮೊದಲ ಬಾರಿಗೆ ಮಾರುಕಟ್ಟೆಗೆ ಮಾವು ಮಾರಾಟಕ್ಕೆ ಬಂದಿದ್ದರಿಂದ ಜನ ಮಾವು ಖರೀದಿಗೂ ಮುಗಿಬಿದ್ದಿದ್ದು ಕಂಡು ಬಂದಿತು. ಮುಖ್ಯ ರಸ್ತೆಗಳಲ್ಲಿ ಮಾಸ್ಕ್ ಧರಿಸದೇ ಬೈಕ್ ಓಡಿಸುತ್ತಿದ್ದವರನ್ನು ಪೋಲಿಸರು ಹಿಡಿದು ಮಾಸ್ಕ್ ವಿತರಿಸಿದರು.

    ವ್ಯಾಪಾರಸ್ಥರಿಂದ ಮನವಿ: ಭಾನುವಾರ ಮಾರುಕಟ್ಟೆಯಲ್ಲಿ ಜನಸಂಚಾರ ಹಾಗೂ ಗ್ರಾಹಕರ ಆಗಮನ ಹೆಚ್ಚಾದ ಹಿನ್ನೆಲೆಯಲ್ಲಿ ಹಳಿಯಾಳ ವ್ಯಾಪಾರಸ್ಥರ ಒಕ್ಕೂಟದವರು ಮಾರುಕಟ್ಟೆಯಲ್ಲಿ ಜಾಗೃತಿ ಪಾದಯಾತ್ರೆ ನಡೆಸಿ ವರ್ತಕರಲ್ಲಿ ಕರೊನಾ ಜಾಗೃತಿ ಮೂಡಿಸಿದರು. ಹಳಿಯಾಳ ವ್ಯಾಪಾರಸ್ಥರ ಒಕ್ಕೂಟದ ಅಧ್ಯಕ್ಷ ಸಚಿನ ಹಳ್ಳಿಕೇರಿ, ಶ್ರೀಧರ ದೊಡ್ಮನಿ, ಅರುಣ ಮಹೇಂದ್ರಕರ, ಇಮ್ತಿಯಾಜ್ ಶೇಖ್, ಚೇತನ ದೇಸಾಯಿ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts