More

    ಹರಡಿದೆ ಜಲ್ಲಿ, ಸಂಚಾರಕ್ಕೆ ಕಿರಿಕಿರಿ!

    ಸಿದ್ದಾಪುರ: ತಾಲೂಕಿನ ಕ್ಯಾದಗಿ ಹಾಗೂ ದೊಡ್ಮನೆ ಗ್ರಾಪಂನ ಸಂಪರ್ಕ ಕೊಂಡಿಯಾಗಿರುವ ಅಲ್ಕೊಣಿ-ಮಲ್ಲಳ್ಳಿ ರಸ್ತೆ ಸುಧಾರಣೆಗೆ ಜಲ್ಲಿಗಳನ್ನು ಹಾಕಿ ಮೂರು ತಿಂಗಳಾದರೂ ರಸ್ತೆ ಸುಧಾರಣೆ ಮಾಡದಿರುವುದರಿಂದ ಸಂಚಾರಕ್ಕೆ ಜನ ಪರದಾಡುವಂತಾಗಿದೆ.

    ಕರೊನಾ ಲಾಕ್​ಡೌನ್​ನಿಂದ ಎಲ್ಲ ಅಭಿವೃದ್ಧಿ ಕಾಮಗಾರಿಗಳು ಸ್ಥಗಿತಗೊಂಡಿದೆ ಎನ್ನುವುದು ಮೇಲ್ನೋಟಕ್ಕೆ ಕಂಡುಬಂದರೂ ಈ ಕಾಮಗಾರಿ ಲಾಕ್​ಡೌನ್ ಆಗುವ ಪೂರ್ವದಲ್ಲಿಯೇ ಆರಂಭವಾಗಿ ರಸ್ತೆಗೆ ಜಲ್ಲಿಗಳನ್ನು ಹಾಕಲಾಗಿದೆ. ಅಂದಿನಿಂದ ಇಂದಿನವರೆಗೂ ಇದರಲ್ಲಿಯೇ ಜನತೆ ಓಡಾಡುತ್ತಿದ್ದಾರೆ.

    ಅಲ್ಕೊಣಿ, ಕಡಖಂಡ, ನೈಗಾರ,ಮಲ್ಲಳ್ಳಿ ಮತ್ತಿತರ ಹತ್ತಕ್ಕೂ ಹೆಚ್ಚು ಗ್ರಾಮೀಣ ಊರುಗಳ ಜನರು ಈ ರಸ್ತೆಯನ್ನು ಬಳಸುತ್ತಾರೆ. ರಸ್ತೆ ಅವ್ಯವಸ್ಥೆಯಿಂದ ಇವರೆಲ್ಲರೂ ನಿತ್ಯ ಪರದಾಡುವಂತಾಗಿದೆ. ಅನಾರೋಗ್ಯದಲ್ಲಿರುವವರನ್ನು ಮುಖ್ಯ ರಸ್ತೆಗೆ ತರಬೇಕೆಂದರೆ ಜೀವವೇ ಹೋದಂತಾಗುತ್ತದೆ. ಈ ಕುರಿತು ರಸ್ತೆ ನಿರ್ವಹಣೆ ಮಾಡುತ್ತಿರುವ ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಹಾಗೂ ಗುತ್ತಿಗೆದಾರರಿರಗೆ ರಸ್ತೆ ಕಾಮಗಾರಿ ಶೀಘ್ರ ಮಾಡಿಕೊಡುವಂತೆ ಕೇಳಿಕೊಂಡಿದ್ದರೂ ಇತ್ತ ಗಮನ ನೀಡುತ್ತಿಲ್ಲ. ನಿತ್ಯ ದ್ವಿಚಕ್ರವಾಹನ ಸೇರಿದಂತೆ ವಿವಿಧ ವಾಹನಗಳು ಸಂಚರಿಸುವುದರಿಂದ ರಸ್ತೆಗೆ ಹಾಕಿರುವ ಕಲ್ಲಿನ ಜಲ್ಲಿ ಚಲ್ಲಾಪಿಲ್ಲಿಯಾಗಿ ಪಾದಾಚಾರಿಗಳಿಗೂ ತೊಂದರೆ ಉಂಟಾಗಿದೆ ಎಂದು ಸ್ಥಳೀಯರು ದೂರಿದ್ದಾರೆ.

    96 ಲಕ್ಷ ರೂಪಾಯಿಯ ಕಾಮಗಾರಿ: ಅಲ್ಕೊಣಿ-ಮಲ್ಲಳ್ಳಿ ಊರ ನಡುವಿನ 2.1 ಕಿ.ಮೀ. ರಸ್ತೆ ಸುಧಾರಣೆ ಮಾಡಲು 96.97 ಲಕ್ಷ ರೂ. ಮೊತ್ತದ ಟೆಂಡರ್ ಆಗಿದೆ. ಈ ಕಾಮಗಾರಿಯ ಗುತ್ತಿಗೆಯನ್ನು ಕುಮಟಾದ ಎನ್.ಎಸ್.ನಾಯ್ಕ ಆಂಡ್ ಕಂಪನಿಯು ಪಡೆದಿದೆ. ಮಾರ್ಚ್ 2020 ರಿಂದ ಕಾಮಗಾರಿ ಆರಂಭವಾಗಿದ್ದು, ಒಂಬತ್ತು ತಿಂಗಳಲ್ಲಿ ಪೂರ್ಣ ಕೆಲಸವನ್ನು ಮುಗಿಸುವ ಷರತ್ತು ವಿಧಿಸಲಾಗಿದೆ.

    2.1ಕಿ.ಮೀ. ರಸ್ತೆ ಸುಧಾರಣೆಯನ್ನು ಲೋಕೋಪಯೋಗಿ ಇಲಾಖೆ ಮಾಡುತ್ತಿದೆ. ಕರೊನಾ ಲಾಕ್ ಡೌನ್ ಆಗುವ ಪೂರ್ವದಲ್ಲಿಯೇ ರಸ್ತೆಗೆ ಕಲ್ಲಿನ ಖಡಿಗಳನ್ನು ಹಾಕಲಾಗಿದೆ. ಅಧಿಕಾರಿಗಳು ಹಾಗೂ ಗುತ್ತಿಗೆದಾರರು ಗಮನ ನೀಡುತ್ತಿಲ್ಲ. ಜನತೆಯ ಸಮಸ್ಯೆಯನ್ನು ಕೇಳುವವರಿಲ್ಲದಂತಾಗಿದ್ದು, ಸಂಬಂಧಪಟ್ಟ ಇಲಾಖೆ ಕೂಡಲೇ ರಸ್ತೆ ಸುಧಾರಣೆ ಮಾಡುವುದಕ್ಕೆ ಮುಂದಾಗಬೇಕು. – ಶಿವಾನಂದ ಹೆಗಡೆ ನೈಗಾರ ಹಾಗೂ ಸ್ಥಳೀಯ ಗ್ರಾಮಸ್ಥರು.

    ರಸ್ತೆ ಸುಧಾರಣೆ ಮಾಡುವುದಕ್ಕೆ ಕೂಲಿಕಾರರ ತೊಂದರೆ ಉಂಟಾಗಿದೆ. ಕುಮಟಾ ತಾಲೂಕಿನಿಂದ ಕೆಲಸಗಾರರು ಬರಬೇಕಾಗಿದ್ದು ಅವರು ಇಲ್ಲಿ ಬರಲಿಕ್ಕೆ ಪಾಸ್ ಪಡೆಯಬೇಕಾಗಿದೆ. ಒಂದೆರಡು ದಿನದಲ್ಲಿ ಕೂಲಿಕಾರರು ಪಾಸ್ ಪಡೆದು ಬರುತ್ತಾರೆ. ಈ ವರ್ಷ ಮೆಟ್ಲಿಂಗ್ ಕಾಮಗಾರಿ ಮಾಡಿ ರಸ್ತೆಗೆ ಹೊಳೆಗೊಚ್ಚು ಹಾಕಿ ಸಂಚಾರಕ್ಕೆ ಅನುಕೂಲಮಾಡಿ ಕೊಡಲಾಗವುದು. ಮಳೆಗಾಲ ಮುಗಿದ ನಂತರ ಡಾಂಬರೀಕರಣ ಮಾಡಲಾಗವುದು. – ಶಿವಕುಮಾರ, ಲೋಕೋಪಯೋಗಿ ಇಂಜಿನಿಯರ್ ಸಿದ್ದಾಪುರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts