More

    ಹಬ್ಬಗಳ ಆಚರಣೆಯಿಂದ ಬದಲಾವಣೆ

    ಕೋಲಾರ: ಹಬ್ಬಗಳ ಆಚರಣೆ ಹಿಂದೆ ವೈಜ್ಞಾನಿಕ ಹಿನ್ನೆಲೆ, ಸಾಮಾಜಿಕ ಸಾಮರಸ್ಯವಿದ್ದು, ಆಚರಣೆ ಮೂಲಕ ಜೀವನದಲ್ಲಿ ಬದಲಾವಣೆ ತಂದುಕೊಳ್ಳಬೇಕು ಎಂದು ರಾಜೀವ್‌ಗಾಂಧಿ ಆರೋಗ್ಯ ವಿವಿ ವಿಶ್ರಾಂತ ನಿರ್ದೇಶಕರೂ ಆಗಿರುವ ವಿಜಯವಾಣಿ ಅಂಕಣಕಾರ ಡಾ.ಕೆ.ಪಿ.ಪುತ್ತೂರಾಯ ಹೇಳಿದರು.

    ನಗರದ ಲಯನ್ಸ್ ಭವನದಲ್ಲಿ ಭಾನುವಾರ ಜಿಲ್ಲಾ ಕನ್ನಡ ಸಿರಿ ಸಾಹಿತ್ಯ ಪರಿಷತ್, ಜಿಲ್ಲಾ ಸಿರಿಗನ್ನಡ ವೇದಿಕೆ, ಲಯನ್ಸ್ ಕ್ಲಬ್, ಕನ್ನಡ ಸಾಂಸ್ಕೃತಿಕ ವೇದಿಕೆ, ಮಾನವ ಅಭಿವೃದ್ಧಿ ಯೋಗ ಟ್ರಸ್ಟ್, ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಸಂಕ್ರಾಂತಿ ಸಿರಿ ಸಂಭ್ರಮ ಕಾರ್ಯಕ್ರಮದಲ್ಲಿ ಹಬ್ಬಗಳು, ಸಂಸ್ಕೃತಿ, ಆಹಾರ, ಆರೋಗ್ಯ ಕುರಿತು ಉಪನ್ಯಾಸ ನೀಡಿದರು.

    ಭಾರತ ಹಬ್ಬಗಳ ದೇಶ, ಪ್ರತಿ ಹಬ್ಬಗಳಿಗೂ ಒಂದೊಂದು ಅರ್ಥವಿದೆ. ಆಚರಣೆ ಹಿಂದೆ ಸಂದೇಶ, ಸಂಕಲ್ಪ, ಆಶಯವಿದೆ. ಮಕರ ಸಂಕ್ರಾಂತಿ ವರ್ಷದ ಮೊದಲ ಹಬ್ಬ. ವರ್ಷವಿಡೀ ದುಡಿಯುವ ಗ್ರಾಮಸ್ಥರಲ್ಲಿ ಬದಲಾವಣೆ, ಹೊಸ ಬಟ್ಟೆ, ಸೀರೆ, ಆಭರಣ ಧರಿಸಿ ತೋರಿಸುವ ಅವಕಾಶ, ಬಂಧು ಮಿತ್ರರು ನೆಂಟರಿಗೆ ಅತಿಥಿ ಸತ್ಕಾರಕ್ಕೆ, ಅನ್ಯ ಧರ್ಮೀಯರನ್ನು ಕರೆಯಲು ಹಬ್ಬಗಳು ಸದಾವಕಾಶ ಒದಗಿಸುತ್ತದೆ. ಆಗಲೇ ಸಾಮಾಜಿಕ ಸಾಮರಸ್ಯ, ದೇಶದ ಐಕ್ಯತೆ ಸಾಧ್ಯ ಎಂದರು.

    ಹಬ್ಬದ ಆಚರಣೆ ಸಂದರ್ಭದಲ್ಲಿ ಜೀವನದಲ್ಲಿ ಬದಲಾವಣೆ ತಂದುಕೊಳ್ಳಬೇಕು, ಕಳೆದ ವರ್ಷ ಏನು ಮಾಡಿದ್ದೇನೆ, ಸಂಕಲ್ಪ ಏನಾಗಿತ್ತು, ಎಡವಿದ್ದೆಲ್ಲಿ ಎಂಬ ಆತ್ಮಾವಲೋಕನ ಮಾಡಿಕೊಳ್ಳಬೇಕು. ಗುರಿ, ಕನಸುಗಳೊಂದಿಗೆ ಮುನ್ನಡೆಯಬೇಕು ಎಂದರು.
    ಡಿಸಿಸಿ ಬ್ಯಾಂಕ್ ಹಿರಿಯ ಪ್ರಬಂಧಕ ಡಾ. ಹುಸೇನ್ ಸಾಬ್ ಎಂ.ದೊಡ್ಡಮನೆ ಮಾತನಾಡಿ, ಕನ್ನಡ ಭಾಷೆ ಅನ್ಯ ಭಾಷಿಗರಿಗೆ ಅನಿವಾರ್ಯವಾದರೆ ರಾಜ್ಯದಲ್ಲಿ ಕನ್ನಡ ಭದ್ರವಾಗುತ್ತದೆ. ಬೆಂಗಳೂರಿನಲ್ಲಿ ಇಡೀ ಜಗತ್ತಿನ ಮೂಲೆ ಮೂಲೆಯವರು ಸೇರಿಕೊಂಡಿದ್ದಾರೆ, ನಮ್ಮ ಸಂಪತ್ತು ಮರಳಿ ಪಡೆಯಲು ಮತ್ತೆ ಗೋಕಾಕ್ ಮಾದರಿಯ ಚಳವಳಿ ನಡೆದರೆ ಕನ್ನಡದ ಸಿರಿ ಪ್ರಜ್ವಲಿಸಲು ಸಾಧ್ಯ ಎಂದರು.

    ಸಾಹಿತಿ ಎಚ್.ಎ.ಪುರುಷೋತ್ತಮರಾವ್ ಮಾತನಾಡಿ, ಹಬ್ಬ ಹರಿದಿನಗಳು ಸಂಸ್ಕೃತಿಯ ನೆಲೆ. ಸಂತೋಷ ಹಂಚುವುದು ಮಾನವ ಧರ್ಮ. ಕನ್ನಡ ಕಟ್ಟುವ ಕೆಲಸದಲ್ಲಿ ಅಹಂಕಾರ ಒಳ್ಳೆಯದಲ್ಲ ಎಂದು ಕಿವಿಮಾತು ಹೇಳಿದರು. ನಿವೃತ್ತ ಪ್ರಾಂಶುಪಾಲ ಎಚ್.ರಾಮಚಂದ್ರಪ್ಪ, ನಿವೃತ್ತ ಮುಖ್ಯಶಿಕ್ಷಕಿ ಚೌಡಮ್ಮ, ನಿವೃತ್ತ ಮುಖ್ಯಶಿಕ್ಷಕ ನರಸಿಂಹಯ್ಯ ಹಾಗೂ ರೈತ ಸಂಘದ ಉಪಾಧ್ಯಕ್ಷ ನಾರಾಯಣಗೌಡ ಅವರನ್ನು ಸನ್ಮಾನಿಸಲಾಯಿತು.

    ಜಿಲ್ಲಾ ಕಸಾಪ ಗೌರವಾಧ್ಯಕ್ಷ ಕೋ.ನಾ.ಪರಮೇಶ್ವರನ್, ಪಿಯು ಕನ್ನಡ ಉಪನ್ಯಾಸಕರ ಸಂಘದ ಅಧ್ಯಕ್ಷ ಜೆ.ಜಿ. ನಾಗರಾಜ್, ಲಯನ್ಸ್ ಕ್ಲಬ್ ಅಧ್ಯಕ್ಷ ಬಿ.ಡಿ.ವೆಂಕಟೇಶ್, ಜಿಲ್ಲಾ ಕನ್ನಡ ಸಿರಿ ಸಾಹಿತ್ಯ ಪರಿಷತ್ ಅಧ್ಯಕ್ಷ ಟಿ. ಸುಬ್ಬರಾಮಯ್ಯ, ಕನ್ನಡ ಸಾಂಸ್ಕೃತಿಕ ವೇದಿಕೆ ಅಧ್ಯಕ್ಷ ಎಸ್.ಸಿ.ವೆಂಕಟಕೃಷ್ಣ, ಮಾನವ ಅಭಿವೃದ್ಧಿ ಯೋಗ ಟ್ರಸ್ಟ್ ಅಧ್ಯಕ್ಷ ಡಾ. ಪೋಸ್ಟ್ ನಾರಾಯಣಸ್ವಾಮಿ, ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ ಪಿ. ನಾರಾಯಣಪ್ಪ, ರವೀಂದ್ರಸಿಂಗ್, ಬಿ.ಆರ್. ಸುಷ್ಮಾ, ಶರಣಪ್ಪ ಗಬ್ಬೂರ್, ಕೆ. ಸೋಮಶೇಖರ್ ಹಾಜರಿದ್ದರು.

    ಆರೋಗ್ಯ ಸಕಲ ಸೌಭಾಗ್ಯದಲ್ಲಿ ಶ್ರೇಷ್ಠವಾದುದು. ಉತ್ತಮ ಆರೋಗ್ಯಕ್ಕೆ ಆರೋಗ್ಯಕರ ಜೀವನ ಶೈಲಿ ಪಾಲಿಸಬೇಕು, ಮಿತ ಆಹಾರ, ವ್ಯಾಯಾಮ, ವಿಶ್ರಾಂತಿ, ಸ್ವಚ್ಛ ಪರಿಸರ, ಹವ್ಯಾಸ, ಅಭ್ಯಾಸ ಸೇರಿದರೆ ಆರೋಗ್ಯ. ಕಣ್ಣಿಗೆ ಕಾಣುವ ಆರೋಗ್ಯದ ಜತೆಗೆ ವಯಸ್ಸಿಗೆ ತಕ್ಕಂತಹ ಶಾರೀರಿಕ, ಮಾನಸಿಕ ಲವಲವಿಕೆ ಹೊಂದಿರುವುದೇ ಆರೋಗ್ಯ.
    ಡಾ.ಕೆ.ಪಿ. ಪುತ್ತೂರಾಯ, ವಿಜಯವಾಣಿ ಅಂಕಣಕಾರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts