More

    ಹನೂರು ಕಾಂಗ್ರೆಸ್ ಭದ್ರಕೋಟೆ ಎಂಬುದನ್ನು ಸಾಬೀತುಪಡಿಸಲಿ

    ಹನೂರು : ಸುನೀಲ್ ಬೋಸ್ ಅವರಿಗೆ ಎಚ್.ಸಿ.ಮಹದೇವಪ್ಪ ಅವರ ಮಗ ಅಂಥ ಪಕ್ಷ ಟಿಕೆಟ್ ನೀಡಿಲ್ಲ. ಪಕ್ಷದಲ್ಲಿನ ಕರ್ತವ್ಯ ನಿಷ್ಠೆಯನ್ನು ಗಮನಿಸಿ ಅವರಿಗೆ ಟಿಕೆಟ್ ನೀಡಿದೆ ಎಂದು ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ.ಮಹದೇವಪ್ಪ ತಿಳಿಸಿದರು.

    ಪಟ್ಟಣದ ವಾಸವಿ ಮಹಲ್‌ನಲ್ಲಿ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಗುರುವಾರ ಆಯೋಜಿಸಿದ್ದ ಕಾಂಗ್ರೆಸ್ ಕಾರ್ಯಕರ್ತರ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.

    ಕಾಂಗ್ರೆಸ್ ಭದ್ರಕೋಟೆಯಾಗಿರುವ ಹನೂರು ರಾಜಕೀಯವಾಗಿ ಸವಾಲಿನ ಕ್ಷೇತ್ರ. ಇಲ್ಲಿನ ಕಾರ್ಯಕರ್ತರು ರಾಜಕೀಯವನ್ನು ಸವಾಲಾಗಿ ಸ್ವೀಕರಿಸುತ್ತಾರೆ. ಈ ಕ್ಷೇತ್ರದಲ್ಲಿ ಪ್ರತಿನಿಧಿಸಿದಂತಹ ದಿವಂಗತ ವೆಂಕಟೇಗೌಡ, ದಿ.ರಾಜುಗೌಡ ಹಾಗೂ ಮಾಜಿ ಶಾಸಕ ಆರ್.ನರೇಂದ್ರ ಅವರ ನೇತೃತ್ವದಲ್ಲಿ ಚುನಾವಣೆಗಳು ನಡೆದಿದ್ದು, 60 ವರ್ಷದಲ್ಲಿ ಜನತೆಗೆ ಉತ್ತಮ ಸೇವೆ ಸಲ್ಲಿಸಿದ್ದಾರೆ. ಹಾಗಾಗಿ ಹನೂರಿನಲ್ಲಿ ಕಾಂಗ್ರೆಸ್ ಪಕ್ಷ ಗಟ್ಟಿಯಾಗಿ ಬೇರೂರಿದೆ. ಆದರೆ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕೆಲವು ಕಾರಣಾಂತರದಿಂದ ಸೋಲು ಕಾಣಬೇಕಾಯಿತು. ಮುಂದೆ ಆರ್.ನರೇಂದ್ರ ಅವರು ಮತ್ತೆ ಎಂಎಲ್‌ಎ ಆಗಲಿದ್ದಾರೆ. ಹಾಗಾಗಿ ಕಾರ್ಯಕರ್ತರು ಹೆಚ್ಚು ಒತ್ತು ನೀಡುವುದರ ಮೂಲಕ ಹನೂರು ಕಾಂಗ್ರೆಸ್‌ನ ಭದ್ರಕೋಟೆ ಎಂಬುದನ್ನು ಈ ಲೋಕಸಭೆ ಚುನಾವಣೆಯಲ್ಲಿ ಸಾಬೀತು ಪಡಿಸಬೇಕು. ಈ ದಿಸೆಯಲ್ಲಿ ಹನೂರು ಕ್ಷೇತ್ರದಿಂದ ಹೆಚ್ಚು ಮತಗಳನ್ನು ನೀಡುವುದರ ಮೂಲಕ ಪಕ್ಷದ ಅಭ್ಯರ್ಥಿ ಸುನೀಲ್ ಬೋಸ್ ಅವರನ್ನು ಗೆಲ್ಲಿಸುವಂತೆ ಮನವಿ ಮಾಡಿದರು.

    ಕಾಂಗ್ರೆಸ್‌ನಿಂದ ಪ್ರಜಾಪ್ರಭುತ್ವ ಉಳಿವು: ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್ ಮಾತನಾಡಿ, ರಾಮಮಂದಿರ ಎಲ್ಲ ಕಡೆ ಇದೆ. ಆದರೆ ಬಿಜೆಪಿಯವರು ರಾಮಮಂದಿರವನ್ನು ನಿರ್ಮಿಸಿದೆವು ಎಂದು ಪ್ರಚಾರ ತೆಗೆದುಕೊಳ್ಳುತ್ತಿದ್ದಾರೆ. ಇದು ಎಷ್ಟರ ಮಟ್ಟಿಗೆ ಸರಿ? ಇತ್ತ ಲೋಕಸಭೆ ಚುನಾವಣೆಯಲ್ಲಿ 400 ಸ್ಥಾನವನ್ನು ಗೆಲ್ಲುತ್ತೇವೆ ಎಂದು ಬೀಗುತ್ತಿದ್ದಾರೆ. ಆದರೆ ಕಳೆದ 10 ವರ್ಷದ ಅವಧಿಯಲ್ಲಿ ಬಿಜೆಪಿ ಸರ್ಕಾರ ಬಡವರು, ಹಿಂದುಳಿದವರು ಹಾಗೂ ಅಲ್ಪಸಂಖ್ಯಾತರ ಪರ ಯಾವುದೇ ಯೋಜನೆಯನ್ನು ರೂಪಿಸಿಲ್ಲ. ಆದರೆ ಕಾಂಗ್ರೆಸ್ ಸರ್ಕಾರ ಉತ್ತಮ ಆಡಳಿತ ನೀಡುವುದರ ಜತೆಗೆ ಈ ಕೆಲಸ ಮಾಡಿ ತೋರಿಸಿದ್ದು, ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬಲಗೊಳಿಸಿದೆ. ಹಾಗಾಗಿ ಪ್ರಜಾಪ್ರಭುತ್ವ ಹಾಗೂ ದೇಶವನ್ನು ಉಳಿಸುವುದು ಕಾಂಗ್ರೆಸ್‌ನಿಂದ ಮಾತ್ರ ಸಾಧ್ಯ. ಆದ್ದರಿಂದ ಕಾರ್ಯಕರ್ತರು ಒಗ್ಗಟ್ಟಿನಿಂದ ಶ್ರಮಿಸಿ ಸುನೀಲ್ ಬೋಸ್ ಅವರನ್ನು ಹೆಚ್ಚಿನ ಮತದ ಅಂತರದಿಂದ ಗೆಲ್ಲಿಸುವಂತೆ ಮನವಿ ಮಾಡಿದರು.

    ಮಾಜಿ ಶಾಸಕ ಆರ್.ನರೇಂದ್ರ ಮಾತನಾಡಿ, ಹನೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಬಲಿಷ್ಠವಾಗಿದೆ ಎಂದು ತೋರಿಸುವ ನಿಟ್ಟಿನಲ್ಲಿ ಲೋಕಸಭೆ ಚುನಾವಣೆ ಸಾಕ್ಷಿಯಾಗಲಿದೆ. ಹಾಗಾಗಿ ಪಕ್ಷದ ಅಭ್ಯರ್ಥಿ ಸುನೀಲ್ ಬೋಸ್ ಅವರಿಗೆ ಹನೂರು ಕ್ಷೇತ್ರದಿಂದ 20-25 ಸಾವಿರ ಮತಗಳು ಲೀಡ್ ಸಿಗುವುದರ ಮೂಲಕ 2 ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಗೆಲ್ಲಲಿದ್ದಾರೆ. ಹಾಗಾಗಿ ಕಾರ್ಯಕರ್ತರು ಶ್ರಮಿಸಬೇಕು ಎಂದರು.

    ಮಾಜಿ ಶಾಸಕರಾದ ಡಾ.ಯತೀಂದ್ರ ಸಿದ್ದರಾಮಯ್ಯ, ನಂಜುಂಡಸ್ವಾಮಿ, ಎಂಎಲ್ಸಿ ಡಾ.ತಿಮ್ಮಯ್ಯ, ಸುನೀಲ್ ಬೋಸ್ ಮಾತನಾಡಿದರು. ಕೊಳ್ಳೇಗಾಲದ ಶಾಸಕ ಎ.ಆರ್. ಕೃಷ್ಣಮೂರ್ತಿ, ಕಾಡಾ ಅಧ್ಯಕ್ಷ ಪಿ. ಮರಿಸ್ವಾಮಿ, ಕೆಪಿಸಿಸಿ ಸದಸ್ಯ ಬಸವರಾಜು, ಚಾಮುಲ್ ನಿರ್ದೇಶಕ ಶಾಹುಲ್ ಅಹಮದ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಹನೂರಿನ ಮುಕುಂದವರ್ಮ, ರಾಮಾಪುರದ ಈಶ್ವರ್, ನರೇಂದ್ರ ಪುತ್ರ ನವನೀತ್‌ಗೌಡ ಹಾಗೂ ಇನ್ನಿತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts