More

    ಹಣ ಲೂಟಿ ಮಾಡುವುದೇ ಶರತ್ ಕಾಯಕ, ಸಚಿವ ಎಂಟಿಬಿ ನಾಗರಾಜ್ ಗಂಭೀರ ಆರೋಪ, ದೇಶದ ಸಂಪತ್ತು ಕೊಳ್ಳೆ ಹೊಡೆದಿದ್ದಾರೆ ಎಂದು ಆಕ್ರೋಶ

    ನಂದಗುಡಿ: ಶಾಸಕ ಶರತ್ ಬಚ್ಚೇಗೌಡ ಅವರು ತಾಲೂಕು ಅಭಿವೃದ್ಧಿ ಉದ್ದೇಶದಿಂದ ರಾಜಕೀಯಕ್ಕೆ ಬಂದಿಲ್ಲ. ಬದಲಿಗೆ ತಾಲೂಕನ್ನು ಲೂಟಿ ಹೊಡೆಯುವ ಉದ್ದೇಶದೊಂದಿಗೆ ರಾಜಕಾರಣಕ್ಕೆ ಬಂದಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಂಟಿಬಿ ನಾಗರಾಜ್ ಗಂಭೀರ ಆರೋಪ ಮಾಡಿದರು.

    ಹೊಸಕೋಟೆ ತಾಲೂಕು ಅನುಗೊಂಡನಹಳ್ಳಿ ಹೋಬಳಿಯ ತಿರುಮಲಶೆಟ್ಟಿಹಳ್ಳಿ ಹಾಗೂ ಸಮೇತನಹಳ್ಳಿಯಲ್ಲಿ ಕೆಆರ್‌ಐಡಿಎಲ್ ಮತ್ತು ಗ್ರಾಪಂ ಅನುದಾನದಲ್ಲಿ 1.06 ಕೋಟಿ ರೂ. ವೆಚ್ಚದಲ್ಲಿ ಕೈಗೊಂಡಿದ್ದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶುಕ್ರವಾರ ಚಾಲನೆ ನೀಡಿ ಮಾತನಾಡಿದರು.

    ಬ್ರಿಟಿಷರು ಹಿಂದೆ 200 ವರ್ಷ ಆಡಳಿತ ನಡೆಸಿ ದೇಶದ ಸಂಪತ್ತು ಲೂಟಿ ಹೊಡೆದಿದ್ದರು. ಅದರಂತೆ ಬಚ್ಚೇಗೌಡ ಕುಟುಂಬದವರೂ ಲೂಟಿ ಮಾಡಿದ್ದಾರೆ. ಅವರಿಗೆ ನೈತಿಕತೆ ಇದ್ದರೆ ಮೊದಲು ಅದನ್ನು ಅರಿತುಕೊಂಡು ಬಳಿಕ ನನ್ನ ಬಗ್ಗೆ ಮಾತನಾಡಲಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಕಾರ್ಯಕ್ರಮದ ಮಾಹಿತಿ ಕೊಡಲ್ಲ: ಕ್ಷೇತ್ರದಲ್ಲಿ ಆಯೋಜಿಸುವ ಯಾವುದೇ ಕಾರ್ಯಕ್ರಮದ ಬಗ್ಗೆ ಶರತ್ ಬಚ್ಚೇಗೌಡ, ಜಿಲ್ಲಾ ಉಸ್ತುವಾರಿ ಸಚಿವರಿಗೆ ಮಾಹಿತಿ ನೀಡುವುದಿಲ್ಲ. ಬಿಜೆಪಿ ಸರ್ಕಾರದಿಂದ ಅನುದಾನ ತಂದು, ಬಿಜೆಪಿ ನಾಯಕರ ಭಾವಚಿತ್ರವನ್ನೂ ಹಾಕದೆ ಕಾರ್ಯಕ್ರಮ ಮಾಡುತ್ತಾರೆ. ಸ್ವತಃ ಶಿಷ್ಟಾಚಾರ ಉಲ್ಲಂಸಿ, ನನ್ನ ವಿರುದ್ಧ ಶಿಷ್ಟಾಚಾರ ಉಲ್ಲಂಘನೆಯ ಆರೋಪ ಮಾಡುತ್ತಾರೆ ಎಂದು ಎಂಟಿಬಿ ನಾಗರಾಜ್ ಬೇಸರಿಸಿದರು.

    ಸಂಸದರ ವಿರುದ್ಧ ಆಕ್ರೋಶ: ಸರ್ಕಾರದಿಂದ ಹಣ ತಂದು ಶಾಸಕರು ಅಭಿವೃದ್ಧಿ ಮಾಡಲಿ. ಅದು ಬಿಟ್ಟು ರಾಜಕಾರಣ ಮಾಡಬಾರದು. ಸಂಸದ ಬಚ್ಚೇಗೌಡ ಅವರು 8 ತಾಲೂಕುಗಳ ಪ್ರತಿನಿಧಿ ಆಗಿದ್ದಾರೆ. ಆದರೆ ಇರುವ ಎಲ್ಲ ಅನುದಾನವನ್ನು ಹೊಸಕೋಟೆ ತಾಲೂಕಿಗೆ ಮಾತ್ರ ಕೊಡುತ್ತಿದ್ದಾರೆ. ಈ ವಿಷಯವಾಗಿ ಇತರ ತಾಲೂಕಿನ ಜನರು ಸಂಸದರ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ನಾನು ಹೊಸಕೋಟೆ ಅಥವಾ ರಾಜ್ಯದ ಯಾವುದೇ ಮೂಲೆಯಲ್ಲಿ ಇದ್ದರೂ ನನ್ನ ಕೆಲಸ ಮಾಡುತ್ತೇನೆ. ಅಭಿವೃದ್ಧಿ ಸಹಿಸಲಾಗದೆ ನನ್ನ ವಿರುದ್ಧ ಆರೋಪ ಮಾಡುತ್ತಿದ್ದಾರೆ ಎಂದು ಉಸ್ತುವಾರಿ ಸಚಿವರು ಆಕ್ರೋಶ ವ್ಯಕ್ತಪಡಿಸಿದರು.

    ತಪ್ಪಿತಸ್ಥರ ವಿರುದ್ಧ ಕ್ರಮ: ಕರೊನಾ ವಾರಿಯರ್ಸ್ ಆಗಿದ್ದ ಆಶಾ ಕಾರ್ಯಕರ್ತೆ ದೊಡ್ಡನಲ್ಲೂರಹಳ್ಳಿ ಶ್ರೀದೇವಿ ಮೇಲೆ ಹಲ್ಲೆ ಮಾಡಿದ ಪಕ್ಷದ ಗ್ರಾಪಂ ಸದಸ್ಯೆಯ ಪತಿಯನ್ನು ಶರತ್ ಬಚ್ಚೇಗೌಡ ಪಕ್ಕದಲ್ಲೇ ಇರಿಸಿಕೊಂಡಿದ್ದಾರೆ. ಹಲ್ಲೆಕೋರನ ವಿರುದ್ಧ ನಂದಗುಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆತನ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲು ಪೊಲೀಸರಿಗೆ ಸೂಚಿಸಿದ್ದೇನೆ ಎಂದು ಎಂಟಿಬಿ ನಾಗರಾಜ್ ಹೇಳಿದರು.
    ಮುಖಂಡರಾದ ಶಂಕರೇಗೌಡ, ಚಿಕ್ಕಣ್ಣ, ಮುನಿಯಪ್ಪ, ಗ್ರಾಪಂ ಅಧ್ಯಕ್ಷೆ ಸುಜಾತಾ, ಸದಸ್ಯ ಉಮೇಶ್, ಮಾಜಿ ತಾಪಂ ಸದಸ್ಯೆ ಅಮೃತಾ, ಪಿಡಿಒ ಶ್ರೀನಿವಾಸ್, ಗ್ರಾಪಂ ಸದಸ್ಯರಾದ ಪ್ರದೀಪ್, ಮಮತಾ, ಲಕ್ಷ್ಮೀ, ಗೋಪಾಲ್, ಕವಿತಾ, ದೀಪಕ್ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts