More

    ಹಣದ ಹರಿವಿನ ಮಾಹಿತಿಗೆ ತಡಕಾಟ

    ಹುಬ್ಬಳ್ಳಿ: ಧಾರವಾಡ ಜಿಪಂ ಸದಸ್ಯನಾಗಿದ್ದ ಯೋಗೀಶಗೌಡ ಹತ್ಯೆ ಪ್ರಕರಣದಲ್ಲಿ ಸಿಬಿಐ ಅಧಿಕಾರಿಗಳು ವಿಚಾರಣೆ ಮುಂದುವರಿಸಿದ್ದು, ಪ್ರಕರಣದ ಮೊದಲ ಆರೋಪಿ ಬಸವರಾಜ ಮುತ್ತಗಿಯನ್ನು ಬುಧವಾರವೂ ಧಾರವಾಡ ಉಪನಗರ ಠಾಣೆಗೆ ಕರೆಯಿಸಿಕೊಂಡ ಹಲವಾರು ಪ್ರಶ್ನೆಗಳನ್ನು ಕೇಳಿದ್ದಾರೆ.

    ಹತ್ಯೆ ನಡೆದ ಸಂದರ್ಭದಲ್ಲಿ ಧಾರವಾಡ ಉಪನಗರ ಠಾಣೆ ಇನ್​ಸ್ಪೆಕ್ಟರ್ ಆಗಿದ್ದ ಚನ್ನಕೇಶವ ಟಿಂಗರಿಕರ, ಪ್ರಕರಣದ ತನಿಖಾಧಿಕಾರಿಯೂ ಆಗಿದ್ದರು. ಆ ಸಮಯದಲ್ಲಿ ಅವರಿಗೆ ಕೊಲೆ ಸಂಚುಕೋರರು ಮತ್ತು ಕೊಲೆಗಾರರಿಂದ ಹಣ ಸಂದಾಯವಾಗಿತ್ತು ಎಂದು ಸಿಬಿಐ ಶಂಕಿಸಿದೆ. ಬಸವರಾಜ ಮುತ್ತಗಿ ಈ ಬಗ್ಗೆ ಪೂರ್ಣ ಮಾಹಿತಿ ಅರಿತಿರುವ ಸಾಧ್ಯತೆಯನ್ನು ಅಧಿಕಾರಿಗಳು ರ್ತಸಿದ್ದಾರೆ.

    ಪ್ರಕರಣದಲ್ಲಿ 2ರಿಂದ 7ರವರೆಗಿನ ಆರೋಪಿಗಳಾದ ವಿನಾಯಕ ಕಟಗಿ, ಸಂದೀಪ ಸವದತ್ತಿ, ವಿಕ್ರಂ ಬಳ್ಳಾರಿ, ಕೀರ್ತಿ ಕುರಹಟ್ಟಿ, ಮಹಾಬಳೇಶ್ವರ ಹೊಂಗಲ, ಸಂತೋಷ ಸವದತ್ತಿಯನ್ನೂ ಕರೆಸಿಕೊಂಡು ಸಿಬಿಐ ಅಧಿಕಾರಿಗಳು ಪ್ರತ್ಯೇಕವಾಗಿ ವಿಚಾರಣೆ ನಡೆಸಿದರು. ಮಾಜಿ ಸಚಿವ ವಿನಯ ಕುಲಕರ್ಣಿ ಆಪ್ತ ಪ್ರಶಾಂತ ಕೇಕರೆಯನ್ನು ಸಂಜೆ ವೇಳೆಗೆ ಕರೆಸಿಕೊಂಡ ಅಧಿಕಾರಿಗಳು ಒಂದು ತಾಸು ಕಾಲ ವಿಚಾರಣೆ ನಡೆಸಿದರು.

    ಟಿಂಗರಿಕರಗೆ ಪಿತೃವಿಯೋಗ: ಯೋಗೀಶಗೌಡ ಹತ್ಯೆಯಾದಾಗ ತನಿಖಾಧಿಕಾರಿಯಾಗಿದ್ದ ಚನ್ನಕೇಶವ ಟಿಂಗರಿಕರ್ ಕೆಲ ದಿನಗಳಿಂದ ನಾಪತ್ತೆಯಾಗಿದ್ದು, ಅವರು ಧಾರವಾಡ ಹೈಕೋರ್ಟ್​ಗೆ ಸಲ್ಲಿಸಿರುವ ನಿರೀಕ್ಷಣಾ ಜಾಮೀನು ಅರ್ಜಿ ಬುಧವಾರ ನೋಂದಣಿಯಾಗಿದೆ. ಇದರ ನಡುವೆಯೇ ಚನ್ನಕೇಶವ ಟಿಂಗರಿಕರ್ ತಂದೆ ಬಸಪ್ಪ ಟಿಂಗರಿಕರ್ (71) ಬುಧವಾರ ಹೃದಯಾಘಾತದಿಂದ ನಿಧನ ಹೊಂದಿದ್ದಾರೆ. ಇಲ್ಲಿನ ಮಲಪ್ರಭಾನಗರ ಬಡಾವಣೆಯ ಮನೆಯಲ್ಲಿ ನಿಧನ ಹೊಂದಿದ ತಂದೆಯ ಅಂತ್ಯಸಂಸ್ಕಾರಕ್ಕೆ ಚನ್ನಕೇಶವ ಹಾಜರಾಗಿದ್ದರು ಎಂದು ತಿಳಿದುಬಂದಿದೆ.

    ಕುಲಕರ್ಣಿ ಅರ್ಜಿ ನೋಂದಣಿ: ಹತ್ಯೆ ಪ್ರಕರಣದಲ್ಲಿ ಬಂಧಿತರಾಗಿರುವ ವಿನಯ ಕುಲಕರ್ಣಿ ಪರ ವಕೀಲರು ಧಾರವಾಡದ 3ನೇ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯ ದಲ್ಲಿ ಸಲ್ಲಿಸಿರುವ ಜಾಮೀನು ಅರ್ಜಿ ಗುರುವಾರ ವಿಚಾರಣೆಗೆ ಬರುವ ಸಾಧ್ಯತೆ ಇದೆ.

    ಖಾಸಗಿ ಹೋಟೆಲ್​ನಲ್ಲಿ ಪರಿಶೀಲನೆ: ಕಾಂಗ್ರೆಸ್ ಮುಖಂಡ ನಾಗರಾಜ ಗೌರಿ ಅವರನ್ನು ಸಿಬಿಐ ಅಧಿಕಾರಿಗಳು ಮತ್ತೆ ವಿಚಾರಣೆಗೆ ಒಳಪಡಿಸಿದರು. ಯೋಗೀಶಗೌಡ ಪತ್ನಿ ಮಲ್ಲಮ್ಮನನ್ನು ಕಾಂಗ್ರೆಸ್ ಪಕ್ಷಕ್ಕೆ ಸೇರಿಸಿಕೊಳ್ಳುವ ವಿಚಾರದಲ್ಲಿ ಸಮಾಲೋಚನೆಗಾಗಿ ಖಾಸಗಿ ಹೋಟೆಲ್​ನಲ್ಲಿ ನಾಗರಾಜ ಗೌರಿ, ಬಸವರಾಜ ಮುತ್ತಗಿ ಮತ್ತಿತರರು ಸಭೆ ನಡೆಸಿದ್ದರು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ನಾಗರಾಜ ಗೌರಿಯನ್ನು ಹೋಟೆಲ್​ಗೆ ಕರೆದೊಯ್ದ ಸಿಬಿಐ ಅಧಿಕಾರಿಗಳ ತಂಡ, ಅಂದು ಸಭೆ ನಡೆಸಿದ್ದಾಗ ಏನೇನು ಚರ್ಚೆಯಾಗಿತ್ತು, ಮಲ್ಲಮ್ಮನಿಗೆ ಏನೇನು ವಾಗ್ದಾನ ಮಾಡಲಾಗಿತ್ತು, ಯಾರ ಸೂಚನೆ ಮೇಲೆ ಸಭೆ ಸೇರಲಾಗಿತ್ತು ಎಂಬಿತ್ಯಾದಿ ಪ್ರಶ್ನೆ ಕೇಳಿ ಮಾಹಿತಿ ಕಲೆಹಾಕಿದರು ಎಂದು ತಿಳಿದುಬಂದಿದೆ.

    ಮಠಾಧೀಶರು ದೇವರ ಸಮಾನ ಎಂದು ಪೂಜಿಸಿ ಪ್ರೀತಿಸುವ ಸಂಸ್ಕೃತಿ ನಮ್ಮದು. ಜಾತಿ ಮುಂದಿಟ್ಟುಕೊಂಡು ಬಂಧನಕ್ಕೆ ಒಳಗಾಗಿರುವ ವ್ಯಕ್ತಿಯ ಮನೆಗೆ ಭೇಟಿ ನೀಡುವುದು ತರವಲ್ಲ. ಸ್ವಾಮೀಜಿಗಳು ಕೇವಲ ಒಂದು ಜಾತಿಗೆ ಸೀಮಿತವಾಗಿ ಕೆಲಸ ಮಾಡಬಾರದು. | ಕೆ.ಎಸ್.ಈಶ್ವರಪ್ಪ ಸಚಿವ

    ಕುಲಕರ್ಣಿ ಬಂಧನ ರಾಜಕೀಯ ಪ್ರೇರಿತ. ಬಿಜೆಪಿಯವರು ಕಾನೂನು ಉಲ್ಲಂಘನೆ ಮಾಡುತ್ತಿದ್ದಾರೆ. ಬಿಜೆಪಿಯ ರಾಜಕೀಯ ಸಿದ್ಧಾಂತವೇ ಅಸೂಯೆ, ದ್ವೇಷವನ್ನು ಒಳಗೊಂಡಿದೆ. | ಬಿ.ಕೆ. ಹರಿಪ್ರಸಾದ್ ಪರಿಷತ್ ಸದಸ್ಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts