More

    ಹಕ್ಕು ಪತ್ರಕ್ಕಾಗಿ ಪ್ರತಿಭಟನೆ



    ರೋಣ: ತಾಲೂಕಿನ ಬಿ.ಎಸ್. ಬೇಲೇರಿ ಗ್ರಾಮದ 400 ಆಸರೆ ಮನೆಗಳ ಹಕ್ಕು ಪತ್ರಗಳನ್ನು ವಿತರಿಸುವಂತೆ ಆಗ್ರಹಿಸಿ ಸ್ಥಳೀಯ ನಿರಾಶ್ರಿತರು ಬುಧವಾರ ತಹಸೀಲ್ದಾರ್ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

    ಸ್ಥಳೀಯ ನಿವಾಸಿ ನಿಂಗಪ್ಪ ಬಾದಾಮಿ ಮಾತನಾಡಿ, 2007ರಲ್ಲಿ ಮಲಪ್ರಭೆ ಹಾಗೂ ಬೆಣ್ಣೆ ಹಳ್ಳದ ಪ್ರವಾಹಕ್ಕೆ ಸಿಲುಕಿ ತಾಲೂಕಿನ ಬಿ.ಎಸ್. ಬೇಲೇರಿ ಗ್ರಾಮಸ್ಥರು ಮನೆಗಳನ್ನು ಕಳೆದುಕೊಂಡು ನಿರಾಶ್ರಿತರಾಗಿದ್ದರು. ಆಗ ಸರ್ಕಾರ 400 ನಿರಾಶ್ರಿತರಿಗೆ ಆಸರೆ ಮನೆಗಳನ್ನು ನಿರ್ವಿುಸಿತ್ತು. ಆದರೆ, ಇಲ್ಲಿಯವರೆಗೂ ಫಲಾನುಭವಿಗಳ ಹೆಸರಿಗೆ ಹಕ್ಕು ಪತ್ರ ನೀಡಿಲ್ಲ. 12 ವರ್ಷಗಳಿಂದ ಜಿಲ್ಲಾಧಿಕಾರಿ, ಸಿಇಒ ಸೇರಿ ತಾಲೂಕು ಮಟ್ಟದ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ ಎಂದು ದೂರಿದರು.

    ವಿವಿಧ ಮಠಾಧೀಶರು ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳ ನೇತೃತ್ವದಲ್ಲಿ ಈ ಹಿಂದೆ ಆಯೋಜಿಸಿದ್ದ ಗ್ರಾಮ ಸಭೆಯಲ್ಲಿ 2020ರ ಜನವರಿ 1ರಂದು ಹಕ್ಕು ಪತ್ರ ವಿತರಿಸುವ ಮೂಲಕ ಹೊಸ ವರ್ಷದ ಕೊಡುಗೆ ನೀಡುವುದಾಗಿ ಭರವಸೆ ನೀಡಿದ್ದರು. ಆದರೆ, ಈವರೆಗೂ ಹಕ್ಕು ಪತ್ರಗಳನ್ನು ವಿತರಿಸಿಲ್ಲ ಎಂದು ಅಳಲು ತೊಡಿಕೊಂಡರು.

    ಹಣಮವ್ವ ಮಾದರ ಮಾತನಾಡಿ, ನಮ್ಮ ಗ್ರಾಮದಲ್ಲಿ ನಿರ್ವಿುಸಲಾದ ಆಸರೆ ಮನೆಗಳ ಕಿಡಕಿ, ಬಾಗಿಲಗಳು ಬಿದ್ದು ಹಾಳಾಗುತ್ತಿವೆ. ನಿಮ್ಮ ಕೈ ಮುಗಿದು ಬೇಡಿಕೊಳ್ಳುತ್ತೇವೆ. ನಮಗೆ ನಾವಿರುವ ಮನೆಗಳ ಹಕ್ಕು ಪತ್ರಗಳನ್ನು ನೀಡಿ, ಅವುಗಳನ್ನು ದುರಸ್ತಿ ಮಾಡಿಕೊಳ್ಳುತ್ತೇವೆ ಎಂದು ಮನವಿ ಮಾಡಿದರು.

    ಜಿಲ್ಲಾಧಿಕಾರಿ ಬರುವವರೆಗೂ ಯಾವುದೇ ಕಾರಣಕ್ಕೂ ಕದಲುವುದಿಲ್ಲ ಎಂದು ಪ್ರತಿಭಟನಾನಿರತರು ಪಟ್ಟು ಹಿಡಿದರು. ಆಗ ಗದಗ ಉಪವಿಭಾಗಾಧಿಕಾರಿ ರಾಯಪ್ಪ ಹಣಗಿ ಸ್ಥಳಕ್ಕೆ ಆಗಮಿಸಿ ಫೆ. 29ರೊಳಗೆ ಹಕ್ಕುಪತ್ರಗಳನ್ನು ವಿತರಿಸುವ ಭರವಸೆ ನೀಡಿದ ನಂತರ ಪ್ರತಿಭಟನೆ ಹಿಂಪಡೆಯಲಾಯಿತು.

    ಹೂವಪ್ಪ ಸಾಸ್ವಿಹಳ್ಳಿ, ಬಾಳಪ್ಪ ಖ್ಯಾಡದ, ಬಸಪ್ಪ ಕರಡಿ, ರಾಮಪ್ಪ ಗಡಗಿ, ಬಾಳಪ್ಪ ಕಳಸಣ್ಣವರ, ನಾಗಪ್ಪ ಬಾವಿ, ಪಾರವ್ವ ಖ್ಯಾಡದ, ಸುರೇಶ ಮಾದರ, ಪಡಿಯಪ್ಪ ಮಾದರ, ಸಿದ್ದನಗೌಡ ಮರಿಗೌಡ್ರ, ಮುತ್ತಣ್ಣ ತೋರಗಲ್ ಇತರರಿದ್ದರು.

    ಎತ್ತು ಚಕ್ಕಡಿಗಳೊಂದಿಗೆ ಮುತ್ತಿಗೆ

    ಫೆ. 29ರೊಳಗೆ ಹಕ್ಕಪತ್ರಗಳನ್ನು ವಿತರಿಸದಿದ್ದರೆ ಮಾರ್ಚ್ 1ರಿಂದ ತಹಸೀಲ್ದಾರ್ ಕಚೇರಿಗೆ ಎತ್ತು ಚಕ್ಕಡಿಗಳೊಂದಿಗೆ ಆಗಮಿಸಿ ಮುತ್ತಿಗೆ ಹಾಕಿ ಪ್ರತಿಭಟಿಸುತ್ತೇವೆ ಎಂದು ಪ್ರತಿಭಟನಾಕಾರರು ಎಚ್ಚರಿಕೆ ನೀಡಿದರು.



    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts