More

    ಹಂದಿ ನಿಯಂತ್ರಣಕ್ಕಿಲ್ಲ ಕಡಿವಾಣ

    ಸವಣೂರ: ಪಟ್ಟಣದ ಪ್ರಮುಖ ಸ್ಥಳಗಳಲ್ಲಿ ಹಂದಿ ಹಾಗೂ ಬಿಡಾಡಿ ದನಗಳ ಹಾವಳಿ ಹೆಚ್ಚಾಗಿದ್ದು, ಪುರಸಭೆ ಇವುಗಳ ನಿಯಂತ್ರಣಕ್ಕೆ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

    ಪಟ್ಟಣದ ಎಪಿಎಂಸಿ, ಬಸ್ ನಿಲ್ದಾಣ ಹಾಗೂ ಸಮಗಾರ ಓಣಿ, ಉಪ್ಪಾರ ಓಣಿ, ಶುಕ್ರವಾರ ಪೇಟೆ ಸೇರಿ ವಿವಿಧ ಸ್ಥಳಗಳಲ್ಲಿ ಬಿಡುಬಿಟ್ಟಿರುವ ಹಂದಿಗಳ ಗುಂಪು ಆಹಾರಕ್ಕಾಗಿ ಮನೆಗೂ ನುಗ್ಗುತ್ತಿವೆ. ಕೆಲ ಜನರು ರಸ್ತೆಬದಿಯಲ್ಲಿ ಹಾಕುವ ತ್ಯಾಜ್ಯಕ್ಕಾಗಿ ಮುಗಿಬೀಳುವ ಹಂದಿಗಳು ತ್ಯಾಜ್ಯವನ್ನು ರಸ್ತೆಯಲ್ಲಿ ಹರಡಿ ಪರಿಸರವನ್ನು ಸಂಪೂರ್ಣ ಮಲಿನಗೊಳಿಸುತ್ತಿವೆ. ಪೌರ ಕಾರ್ವಿುಕರು ನಿಷ್ಠೆಯಿಂದ ಕೈಗೊಳ್ಳುವ ಕಾರ್ಯ ಹಂದಿಗಳ ಹಾವಳಿಂದ ವ್ಯರ್ಥವಾಗುತ್ತಿದೆ. ಈ ಕುರಿತು ಪುರಸಭೆ ಮುಖ್ಯಾಧಿಕಾರಿಗೆ ದೂರು ನೀಡಿದರೂ ಕ್ರಮ ಕೈಗೊಂಡಿಲ್ಲ ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕರೊನಾ ವೈರಸ್ ಹರಡುತ್ತಿರುವ ಈ ಸಂದರ್ಭದಲ್ಲಿ ಹಾಗೂ ಸದ್ಯವೇ ಮುಂಗಾರು ಶುರುವಾಗುವುದರಿಂದ ಸಾಂಕ್ರಾಮಿಕ ರೋಗ ಹರಡುವ ಭೀತಿ ಇದೆ.

    ಬಿಡಾಡಿ ದನಗಳ ಹಾವಳಿ: ಹಂದಿಗಳೊಂದಿಗೆ ಪಟ್ಟಣದಲ್ಲಿ ಬಿಡಾಡಿ ದನಗಳ ಹಾವಳಿಯೂ ಹೆಚ್ಚಾಗಿರುವುದು ಸಾರ್ವಜನಿಕರ ಹಾಗೂ ವ್ಯಾಪಾರಸ್ಥರಿಗೆ ತೀವ್ರ ತೊಂದರೆಯುಂಟಾಗಿದೆ.

    ಲಾಕ್​ಡೌನ್ ಹಿನ್ನೆಲೆಯಲ್ಲಿ ಮೇವು ದೊರೆಯದ ಕಾರಣ ಬಿಡಾಡಿ ದನಗಳು ತರಕಾರಿ ಹಾಗೂ ಕಿರಾಣಿ ವ್ಯಾಪಾರಸ್ಥರು ಸಂಗ್ರಹಿಸಿರುವ ವಸ್ತುಗಳನ್ನು ತಿಂದು ಹಾಕುತ್ತಿವೆ. ಹಂದಿ ಹಿಡಿಯಬೇಕು ಹಾಗೂ ಬಿಡಾಡಿ ದನಗಳಿಗೆ ಮೇವಿನ ವ್ಯವಸ್ಥೆಯನ್ನು ಕಲ್ಪಿಸಿದಲ್ಲಿ ಮಾತ್ರ ಸ್ಥಳೀಯರು ನೆಮ್ಮದಿಯಿಂದ ಇರಲು ಸಾಧ್ಯವಾಗಲಿದೆ.

    ಹಂದಿಗಳ ಹಾವಳಿಯಿಂದ ಬಸ್ ನಿಲ್ದಾಣದ ಸುತ್ತಲಿನ ಕುಮಾರಸ್ವಾಮಿ ನಗರ ಸೇರಿ ವಿವಿಧ ಸ್ಥಳಗಳಲ್ಲಿ ಪರಿಸರ ಹಾಳಾಗುತ್ತಿದೆ. ಕೂಡಲೆ ಸೂಕ್ತ ಕ್ರಮ ಕೈಗೊಂಡು ಸಾಂಕ್ರಾಮಿಕ ರೋಗ ತಡೆಗಟ್ಟಲು ಮುಂದಾಗಬೇಕು.

    | ಶಿವಾನಂದ ಬಂಡಿವಾಡ, ಸ್ಥಳೀಯ ನಿವಾಸಿ

    ಹಂದಿಗಳ ಮಾಲೀಕರಿಗೆ ಈಗಾಲೇ ನೋಟಿಸ್ ನೀಡಿ ಸಮಯಾವಕಾಶ ನೀಡಲಾಗಿದೆ. ಗಡುವು ನೀಡಿದ ಅವಧಿಯಲ್ಲಿ ಹಂದಿಗಳನ್ನು ಹಿಡಿಯಲು ಮುಂದಾಗದಿದ್ದಲ್ಲಿ ಪುರಸಭೆ ವತಿಯಿಂದ ಹಂದಿಗಳನ್ನು ಹಿಡಿದು ಸಾಗಿಸಲಾಗುವುದು. ಬಿಡಾಡಿ ದನಗಳ ಬಗ್ಗೆ ಪರಿಶೀಲನೆ ಕೈಗೊಂಡು ಸೂಕ್ತ ಕ್ರಮಕ್ಕೆ ಮುಂದಾಗಲು ಆದೇಶ ನೀಡಲಾಗಿದೆ.

    | ಕೃಷ್ಣ ಕಟ್ಟಿಮನಿ, ಪುರಸಭೆ ಮುಖ್ಯಾಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts