More

    ಹಂಜಿ ಕುಟುಂಬದ ಸಮಾಜಸೇವೆ ಸ್ಮರಣೀಯ

    ಬೆಳಗಾವಿ: ಗ್ರಾಮೀಣ ಪ್ರದೇಶಗಳಲ್ಲಿ ಜನರಿಗೆ ಗುಣಮಟ್ಟದ ಆರೋಗ್ಯ ಸೌಲಭ್ಯ ಕಲ್ಪಿಸುತ್ತಿರುವ ಹಂಜಿ ಕುಟುಂಬಕ್ಕೆ ಎಲ್ಲ ರೀತಿಯ ಸಹಕಾರ ನೀಡಲಾಗುವುದು ಎಂದು ಸಚಿವ ಉಮೇಶ ಕತ್ತಿ ಹೇಳಿದರು.

    ಹುಕ್ಕೇರಿ ತಾಲೂಕಿನ ಯಮಕನಮರಡಿಯ ವಿದ್ಯಾವರ್ಧಕ ಸಂಘದ ಶಾಲಾ ಆವರಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಹಂಜಿ ಹೈಟೆಕ್ ಆಸ್ಪತ್ರೆ ಉದ್ಘಾಟನೆ ಸಮಾರಂಭದಲ್ಲಿ ಮಾತನಾಡಿದ ಅವರು, 40 ವರ್ಷಗಳ ರಾಜಕೀಯದಲ್ಲಿ ಬಿ.ಬಿ.ಹಂಜಿ ಮತ್ತು ನಾವು ಒಟ್ಟಿಗೆ ಬೆಳೆದುಕೊಂಡು ಬಂದೆವು. ಹಂಜಿ ಅವರು ಯಮಕನಮರಡಿ ಕ್ಷೇತ್ರಕ್ಕಾಗಿ ನಿರಂತರ ಹೋರಾಟ ನಡೆಸಿದರು. ಯಮಕನಮರಡಿ ಕ್ಷೇತ್ರ ಎಸ್ಟಿ ಮೀಸಲು ಕ್ಷೇತ್ರದ ಸ್ಥಾನಮಾನ ಪಡೆದ ಕಾರಣ ಅವರು ಶಾಸಕರಾಗುವ ಕನಸು ನನಸಾಗಲಿಲ್ಲ ಎಂದರು.

    ಮುಜರಾಯಿ ಮತ್ತು ವಕ್ಫ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ ಮಾತನಾಡಿ, ಸಹಕಾರ ಕ್ಷೇತ್ರದ ಮೂಲಕ ಗ್ರಾಮೀಣ ಪ್ರದೇಶಗಳಲ್ಲಿ ಅಭಿವೃದ್ಧಿ ಕೆಲಸಗಳನ್ನು ಮಾಡಿರುವ ಹಂಜಿ ಕುಟುಂಬವು ಇದೀಗ ಆಸ್ಪತ್ರೆ ಆರಂಭಿಸುವ ಮೂಲಕ ಆರೋಗ್ಯ ಕ್ಷೇತ್ರಕ್ಕೆ ಪಾದರ್ಪಣೆ ಮಾಡಿದ್ದಾರೆ. ಭವಿಷ್ಯದ ದಿನಗಳಲ್ಲಿ ಹಂಚಿ ಆಸ್ಪತ್ರೆ ದೊಡ್ಡ ಮಟ್ಟದಲ್ಲಿ ಬೆಳೆಯಲಿದೆ ಎಂದು ತಿಳಿಸಿದರು.

    ವಿಧಾನ ಪರಿಷತ್‌ನ ಮಾಜಿ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ ಮಾತನಾಡಿ, ದಿ.ಬಿ.ಬಿ.ಹಂಜಿ ಅವರು ಸಾಮಾಜಿಕ, ಶೈಕ್ಷಣಿಕ, ಸಹಕಾರ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಸಹಕಾರಿ ಕ್ಷೇತ್ರದ ಮೂಲಕ ಅನೇಕ ಜನರಿಗೆ ಸಹಾಯ ಮಾಡಿದ್ದಾರೆ. ಸಾಮಾಜಿಕ ಚಟುವಟಿಕೆಗಳಲ್ಲಿ ನಿರಂತರ ಸೇವೆ ಸಲ್ಲಿಸುವ ಮೂಲಕ ಜನರ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸವನ್ನು ಹಂಜಿ ಕುಟುಂಬ ಮಾಡಿಕೊಂಡು ಬರುತ್ತಿದೆ ಎಂದರು.

    ಸಂಸದ ಅಣ್ಣಾಸಾಹೇಬ ಜೊಲ್ಲೆ ಮಾತನಾಡಿ, ಹಳ್ಳಿಯ ಜನರಿಗೆ ಗುಣಮಟ್ಟದ ಆರೋಗ್ಯ ಸೇವೆ ಕಲ್ಪಿಸುವ ನಿಟ್ಟಿನಲ್ಲಿ ಹಂಜಿ ಕುಟುಂಬವು ಆಸ್ಪತ್ರೆ ಆರಂಭಿಸುತ್ತಿರುವುದು ಸಂತೋಷದ ಸಂಗತಿಯಾಗಿದೆ. ಎಲ್ಲ ರೀತಿಯ ಹೋರಾಟ, ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡಿರುವ ಹಂಜಿ ಕುಟುಂಬಕ್ಕೆ ಎಲ್ಲ ರೀತಿಯ ನೆರವು ನೀಡಲಾಗುವುದು ಎಂದರು. ನಿಡಸೋಸಿ ಸಿದ್ಧಸಂಸ್ಥಾನ ಮಠದ ಜಗದ್ಗುರು ಶಿವಲಿಂಗೇಶ್ವರ ಸ್ವಾಮೀಜಿ, ಕಾರಂಜಿಮಠದ ಗುರುಸಿದ್ದ ಸ್ವಾಮೀಜಿ, ರವೀಂದ್ರ ಹಂಜಿ, ಡಾ.ವಿಜಯ ಹಂಜಿ, ಡಾ.ರಶ್ಮಿ ವಿಜಯ ಹಂಜಿ ಮತ್ತಿತರರು ಇದ್ದರು.

    ಬಿ.ಬಿ.ಹಂಜಿ ಅವರು ಬದುಕಿನ ಉದ್ದಕ್ಕೂ ಸಾಮಾಜಿಕ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು. ಸಹಕಾರಿ ಕ್ಷೇತ್ರದಲ್ಲಿ ಸಾಕಷ್ಟು ಕಾರ್ಯಗಳನ್ನು ಕೈಗೊಂಡಿದ್ದರು. ತಮ್ಮ ಸಮಾಜ ಸೇವೆಯ ಮೂಲಕ ಈ ಭಾಗದ ಜನರಿಗೆ ಚಿರಪರಿಚಿತರಾಗಿದ್ದರು. ಈ ಭಾಗದ ಬಡವರಿಗೆ ಅವರು ಗುಣಮಟ್ಟದ ಆರೋಗ್ಯ ಸೇವೆ ನೀಡುತ್ತಿದ್ದಾರೆ.
    | ಲಕ್ಷ್ಮಣ ಸವದಿ ವಿಧಾನ ಪರಿಷತ್ ಸದಸ್ಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts