More

    ಸ್ಮಶಾನಗಳ ಅಭಿವೃದ್ಧಿಗೆ 30 ಲಕ್ಷ ರೂ. ಮಂಜೂರು

    ನರಗುಂದ: ಪಟ್ಟಣದ ವಿವಿಧ ಸ್ಮಶಾನಗಳ ಅಭಿವೃದ್ಧಿಗೆ ರಾಜ್ಯ ಸರ್ಕಾರದಿಂದ 30 ಲಕ್ಷ ರೂ. ಅನುದಾನ ಮಂಜೂರಾಗಿದೆ. ಮುಂಬರುವ ದಿನಗಳಲ್ಲಿ ಮಹತ್ವದ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ. ಪಾಟೀಲ ಹೇಳಿದರು.

    ಇತ್ತೀಚೆಗೆ ನರೇಗಾ ಕೂಲಿ ಕೆಲಸಕ್ಕೆ ತೆರಳಿದ್ದಾಗ ಹೃದಯಾಘಾತದಿಂದ ಮೃತಪಟ್ಟ ತಾಲೂಕಿನ ಬೆನಕನಕೊಪ್ಪ ಗ್ರಾಮದ ಹನುಮಪ್ಪ ಗುಡಿಸಲಮನಿ ಅವರ ಪತ್ನಿ ನೀಲವ್ವ ಗುಡಿಸಲಮನಿ ಅವರಿಗೆ 75 ಸಾವಿರ ರೂ. ಮೊತ್ತದ ಪರಿಹಾರದ ಆದೇಶ ಪ್ರತಿ ನೀಡಿ ಅವರು ಮಾತನಾಡಿದರು.

    ಲಕ್ಕುಂಡಿ ಮತ್ತು ಹೊಳೆಆಲೂರಿನಲ್ಲಿ ಎರಡು ಕರೊನಾ ಪಾಸಿಟಿವ್ ಕೇಸ್​ಗಳು ಹೊಸದಾಗಿ ಪತ್ತೆಯಾಗಿದ್ದು, ಅಲ್ಲಿನ 100 ಮೀಟರ್ ವ್ಯಾಪ್ತಿ ಪ್ರದೇಶವನ್ನು ಕಂಟೇನ್ಮೆಂಟ್ ಜೋನ್ ಎಂದು ಘೊಷಿಸಲಾಗಿದೆ. ಈ ಎರಡು ಕಂಟೇನ್ಮೆಂಟ್ ಪ್ರದೇಶದ ಜನರಿಗೆ ಹಟ್ಟಿ ಚಿನ್ನದ ಗಣಿ ನಿಗಮದಿಂದ ಕಿಟ್​ಗಳನ್ನು ವಿತರಿಸುವಂತೆ ಇಲಾಖೆಯ ಎಂಡಿ ಸಲ್ಮಾ ಹಾಗೂ ಚೇರ್ಮನ್ ಮಹೇಶ್ವರಯ್ಯ ಅವರಿಗೆ ವೈಯಕ್ತಿಕವಾಗಿ ಮನವಿ ಮಾಡಿದ್ದೆ. ಅದಕ್ಕೆ ಸ್ಪಂದಿಸಿರುವ ಅಧಿಕಾರಿಗಳು ಅಡುಗೆ ಎಣ್ಣೆ, ತೊಗರಿ ಬೇಳೆ, ಅಕ್ಕಿ, ಸಕ್ಕರೆ, ಚಹಾಪುಡಿ ಸೇರಿ ವಿವಿಧ ಆಹಾರ ಸಾಮಗ್ರಿ ಒಳಗೊಂಡ 750 ರೂ. ಮೌಲ್ಯದ 1000 ಕಿಟ್​ಗಳನ್ನು ಗದಗ ಜಿಲ್ಲಾಡಳಿತಕ್ಕೆ ನೀಡಿದ್ದಾರೆ. ಭಾರತೀಯ ರೆಡ್​ಕ್ರಾಸ್ ಸಂಸ್ಥೆ ವತಿಯಿಂದ 100 ಕಿಟ್​ಗಳು ಬಂದಿದ್ದು, ಅವುಗಳನ್ನು ಸೋಮವಾರದಿಂದ ವಿತರಿಸಲಾಗುವುದು ಎಂದು ತಿಳಿಸಿದರು.

    ತಹಸೀಲ್ದಾರ್ ಎ.ಎಚ್. ಮಹೇಂದ್ರ, ತಾ.ಪಂ. ಇಒ ಸಿ.ಆರ್. ಕುರ್ತಕೋಟಿ, ಬೆನಕನಕೊಪ್ಪ ಗ್ರಾಪಂ ಪಿಡಿಒ ಎಸ್.ಎನ್. ಹರನಟ್ಟಿ, ಶಿರಸ್ತೇದಾರ್ ರಾಜಶೇಖರ ಸಾತಿಹಾಳ, ಪಿ. ಸುನಂದ, ಜಿ.ಎಸ್. ಅದೆಪ್ಪನವರ, ಸಿದ್ದೇಶ ಹೂಗಾರ, ನಾಗರಾಜ ನೆಗಳೂರ, ಎಸ್.ಎಲ್.ಪಾಟೀಲ, ಶಿವುಕುಮಾರ ಶೆಟ್ಟರ್ ಇತರರಿದ್ದರು.

    ಇಬ್ಬರು ಗುತ್ತಿಗೆದಾರರು ಕಪ್ಪುಪಟ್ಟಿಗೆ

    ಮರಳು ಪಾಸ್ ದುರುಪಯೋಗಕ್ಕೆ ಸಂಬಂಧಪಟ್ಟಂತೆ ಮುಂಡರಗಿಯಿಂದ ಚಾಮರಾಜನಗರ ಹಾಗೂ ರಾಮದುರ್ಗಕ್ಕೆ ಮರಳು ಸಾಗಿಸಲು ಪಾಸ್​ಗಳನ್ನು ಪಡೆದಿರುವ ಇಬ್ಬರು ಮರಳು ಗುತ್ತಿಗೆದಾರನ್ನು ಕಪ್ಪುಪಟ್ಟಿಗೆ ಸೇರಿಸುವಂತೆ ಭೂ ಮತ್ತು ಗಣಿ ವಿಜ್ಞಾನ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಅಲ್ಲದೆ, ಇದಕ್ಕೆ ಕುಮ್ಮಕ್ಕು ನೀಡಿರುವ ಅಧಿಕಾರಿಗಳ ಮೇಲೆಯೂ ಸೂಕ್ತ ಕ್ರಮ ಕೈಗೊಳ್ಳುವಂತೆ ಎಚ್ಚರಿಕೆ ನೀಡಿದ್ದೇನೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ. ಪಾಟೀಲ ತಿಳಿಸಿದ್ದಾರೆ.

    ರಾಜ್ಯದಲ್ಲಿ ಇನ್ನು ಮುಂದೆ 200 ಕಿ.ಮೀ.ಗಿಂತಲೂ ಅಧಿಕ ದೂರ ಮರಳು ಸಾಗಿಸುವ ವಾಹನಕ್ಕೆ ಗಣಿ, ಭೂವಿಜ್ಞಾನ ಇಲಾಖೆ ಅಧಿಕಾರಿಗಳ ಅನುಮತಿ ಕಡ್ಡಾಯ. 400 ಕಿ.ಮೀ. ದೂರದ ಊರುಗಳಿಗೆ ಸಾಗಿಸಬೇಕಾದರೆ ಮರಳು ಗುತ್ತಿಗೆದಾರರು ಅಥವಾ ಲಾರಿ ಚಾಲಕ, ಮಾಲೀಕರು, ಅಲ್ಲಿನ ಮನೆಯ ಮಾಲೀಕರು ಹಾಗೂ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಂದ ಒಪ್ಪಿಗೆ ಪತ್ರ ತೆಗೆದುಕೊಂಡು ಬಂದಿರಬೇಕು. ಇಲ್ಲದಿದ್ದರೆ ಅಕ್ರಮ ಮರಳು ಸಾಗಾಟದ ಪ್ರಕರಣದಡಿ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ತಿಳಿಸಲಾಗಿದೆ ಎಂದು ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts