More

    ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನಕ್ಕೂ ಪೈಪೋಟಿ

    ಮಂಜುನಾಥ ಕೋಳಿಗುಡ್ಡ, ಬೆಳಗಾವಿ: ಮಹಾನಗರ ಪಾಲಿಕೆ ಮೇಯರ್, ಉಪಮೇಯರ್ ಬಳಿಕ ಇದೀಗ ನಾಲ್ಕು ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿಗರಲ್ಲೇ ಪೈಪೋಟಿ ಏರ್ಪಟ್ಟಿದೆ. ಅಲ್ಲದೆ ಕಾಂಗ್ರೆಸ್, ಪಕ್ಷೇತರ ಸದಸ್ಯರೂ ಸ್ಪರ್ಧಿಸಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.

    ಮಹಾನಗರ ಪಾಲಿಕೆಯ 58 ವಾರ್ಡ್‌ಗಳಿಂದ ಚುನಾಯಿತಗೊಂಡು ಒಂದೂವರೆ ವರ್ಷದ ಬಳಿಕ ಅಧಿಕಾರ ಸ್ವೀಕರಿಸಿರುವ ಬಿಜೆಪಿ, ಕಾಂಗ್ರೆಸ್ ಹಾಗೂ ಪಕ್ಷೇತರ ಸದಸ್ಯರು, ಇದೀಗ ಯೋಜನಾ ಸ್ಥಾಯಿ ಸಮಿತಿ, ಹಣಕಾಸು ಸ್ಥಾಯಿ ಸಮಿತಿ, ಆರೋಗ್ಯ ಸ್ಥಾಯಿ ಸಮಿತಿ ಹಾಗೂ ಲೋಕೋಪಯೋಗಿ ಸ್ಥಾಯಿ ಸಮಿತಿಗಳ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ. ಅಲ್ಲದೆ, ಮೇಯರ್, ಉಪಮೇಯರ್ ಸ್ಥಾನದಿಂದ ವಂಚಿತರಾದ ಬಿಜೆಪಿ ಮಹಿಳಾ ಸದಸ್ಯರ ನಡುವೆ ಸಮಿತಿ ಅಧ್ಯಕ್ಷ ಸ್ಥಾನಕ್ಕಾಗಿ ಹಗ್ಗ-ಜಗ್ಗಾಟ ಜೋರಾಗಿದೆ.

    ಪೈಪೋಟಿ ಏಕೆ?: ಪಾಲಿಕೆಯಲ್ಲಿ ಪ್ರತಿಯೊಂದು ಕ್ರಿಯಾ ಯೋಜನೆ ಅನುಮೋದನೆ, ಅನುದಾನ ಬಿಡುಗಡೆ, ಕಟ್ಟಡ, ವಾಣಿಜ್ಯ ಮಳಿಗೆಗಳಿಗೆ ಪರವಾನಗಿ, ರಸ್ತೆ, ಚರಂಡಿ ದುರಸ್ತಿ, ತೆರಿಗೆ ದರ ನಿಗದಿ, ಸಿಬ್ಬಂದಿ ನೇಮಕಾತಿ ಸೇರಿ ವಿವಿಧ ಅಧಿಕಾರವನ್ನು ಸ್ಥಾಯಿ ಸಮಿತಿ ಅಧ್ಯಕ್ಷರು ಹೊಂದಿರುತ್ತಾರೆ. ಈ ಅಧ್ಯಕ್ಷರು ಒಪ್ಪಿಗೆ ಇಲ್ಲದೆ ಮೇಯರ್, ಆಯುಕ್ತರು ಕೂಡ ನಿರ್ಣಯ ಕೈಗೊಳ್ಳಲು ಬರುವುದಿಲ್ಲ. ಹಾಗಾಗಿಯೇ ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ಹೆಚ್ಚು ಮಹತ್ವವಿದೆ. ಈ ಹಿನ್ನೆಲೆಯಲ್ಲಿ ಪಾಲಿಕೆಯ ಕೆಲ ಸದಸ್ಯರು ಶಾಸಕರಾದ ಸತೀಶ ಜಾರಕಿಹೊಳಿ, ಅಭಯ ಪಾಟೀಲ, ಅನಿಲ ಬೆನಕೆ ಬೆನ್ನು ಬಿದ್ದರೆ, ಕೆಲವರು ಪಕ್ಷಭೇದ ಮರೆತು ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನ ಪಡೆದುಕೊಳ್ಳಲು ಯೋಜನೆ ರೂಪಿಸಿದ್ದಾರೆ.

    ಅಭಿವೃದ್ಧಿ ಕಾಮಗಾರಿಗಳ ಕ್ರಿಯಾ ಯೋಜನೆಗಳಿಗೆ ಸ್ಥಾಯಿ ಸಮಿತಿ ಅನುಮೋದನೆ ನೀಡಿದ ಬಳಿಕವೇ ಸಾಮಾನ್ಯ ಸಭೆಯಲ್ಲಿ ಮೇಯರ್ ಒಪ್ಪಿಗೆ ಸೂಚಿಸಬೇಕು. ರಾಜ್ಯ ಸರ್ಕಾರ 2023-24ನೇ ಸಾಲಿನ ಬಜೆಟ್ ಮಂಡನೆ ಬಳಿಕ ಪಾಲಿಕೆಯ ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷರು ಪಾಲಿಕೆ ಬಜೆಟ್ ಮಂಡನೆ ಮಾಡಲಿದ್ದಾರೆ. ಸದ್ಯ ಸ್ಥಾಯಿ ಸಮಿತಿ ರಚನೆಯಾಗುವವರೆಗೆ ಆಡಳಿತ ಮಂಡಳಿಯಿಂದ ಯಾವುದೇ ನಿರ್ಣಯ ಕೈಗೊಳ್ಳಲು ಬರುವುದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಶಾಸಕರ ನಿರ್ಧಾರದಂತೆ ಆಯ್ಕೆ: ಮಹಾನಗರ ಪಾಲಿಕೆಯ ನಾಲ್ಕು ಸ್ಥಾಮಿತಿಗಳು ಒಬ್ಬ ಅಧ್ಯಕ್ಷ ಮತ್ತು ಆರು ಜನ ಸದಸ್ಯರ ಬಲ ಹೊಂದಿದೆ. ಪಾಲಿಕೆಯಲ್ಲಿ ಆಡಳಿತ ಮತ್ತು ಪ್ರತಿಪಕ್ಷಗಳ ಸದಸ್ಯರ ಹೊಂದಾಣಿಕೆ ಮೇರೆಗೆ ಸ್ಥಾಯಿ ಸಮಿತಿ ಅಧ್ಯಕ್ಷ ಮತ್ತು ಸದಸ್ಯರನ್ನು ಅವಿರೋಧವಾಗಿ ಆಯ್ಕೆ ಮಾಡುವ ಸಂಪ್ರದಾಯವಿದೆ. ಹಾಗಾಗಿ ಮೂರು ಸ್ಥಾಯಿ ಸಮಿತಿ ಬಿಜೆಪಿ ಮತ್ತು ಒಂದು ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನ ಕಾಂಗ್ರೆಸ್‌ಗೆ ಬಿಟ್ಟುಕೊಡುವ ಮಾತುಕತೆ ನಡೆದಿದೆ. ಒಟ್ಟಿನಲ್ಲಿ ನಾಲ್ಕು ಜನ ಶಾಸಕರು ಕೈಗೊಳ್ಳುವ ನಿರ್ಧಾರದ ಮೇಲೆ ಸ್ಥಾಯಿ ಸಮಿತಿ ಅಧ್ಯಕ್ಷರು ಆಯ್ಕೆಯಾಗಲಿದ್ದಾರೆ.

    ಯೋಜನೆ, ಹಣಕಾಸು ಸಮಿತಿಗೆ ಬೇಡಿಕೆ: ಮಹಾನಗರ ಪಾಲಿಕೆಯ ನಾಲ್ಕು ಸಮಿತಿಗಳ ಪೈಕಿ ಹಣಕಾಸು ಮತ್ತು ಯೋಜನಾ ಸಮಿತಿ ಅಧ್ಯಕ್ಷ ಸ್ಥಾನಕ್ಕಾಗಿ ಬಿಜೆಪಿಯ ದೀಪಾಲಿ ಸಂತೋಷ ಟೋಪಗಿ, ಸಾರಿಕಾ ಪಾಟೀಲ, ಸವಿತಾ ಮುರುೇಂದ್ರಗೌಡ ಪಾಟೀಲ, ಪ್ರಿಯಾ ದೀಪಕ ಸಾತಗೌಡ, ವೀಣಾ ಶ್ರೀಶೈಲ ವಿಜಾಪುರೆ, ಹನುಮಂತ ಕೊಂಗಾಲಿ ಸೇರಿ 14 ಜನ ಸದಸ್ಯರು ತೆರೆಮರೆಯಲ್ಲಿ ಕಸರತ್ತು ನಡೆಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts