More

    ಸೌಲಭ್ಯಗಳಿಲ್ಲದೇ ಸೊರಗುತ್ತಿದೆ ಶತಮಾನದ ಶಾಲೆ

    ಕಾರವಾರ: ಗಡಿನಾಡಲ್ಲಿ ಶತಮಾನ ಪೂರೈಸಿದ ಕನ್ನಡ ಶಾಲೆಯೊಂದು ಸೌಲಭ್ಯವಿಲ್ಲದೇ ಬಳಲುತ್ತಿದೆ. ಗೋವಾ ರಾಜ್ಯದ ಗಡಿಯಿಂದ ಐದು ಕಿ.ಮೀ. ದೂರದಲ್ಲಿರುವ ಸದಾಶಿವಗಡ ನಾಗಪೋಂಡ-1 ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಬಾಡಿಗೆ ಕಟ್ಟವೊಂದರ ಮೊದಲ ಮಹಡಿಯಲ್ಲಿ ಅತಿ ಕಡಿಮೆ ಸೌಲಭ್ಯಗಳ ನಡುವೆ ನಡೆಯುತ್ತಿದೆ.

    ಮಕ್ಕಳಿಗೆ ಆಡಲು ಮೈದಾನವಿಲ್ಲ. ಶೌಚಗೃಹವಿಲ್ಲ. ಅಡುಗೆ ಕೋಣೆ ಇಲ್ಲ. ಸುರಕ್ಷಿತ ಮೇಲ್ಛಾವಣಿ ಇಲ್ಲ. ಗೋಡೆಗಳಿಗೆ ಒಪ್ಪವಾದ ಗಾರೆಯೂ ಇಲ್ಲ. ಹತ್ತಿ ಇಳಿಯಲು ಸುರಕ್ಷಿತ ಮೆಟ್ಟಿಲುಗಳಿಲ್ಲ. ಒಟ್ಟಾರೆ ಇದನ್ನು ಒಂದು ಸರ್ಕಾರಿ ಶಾಲೆ ಎಂದು ಹೇಳಲು ಸಾಧ್ಯವೇ ಇಲ್ಲ. ಇಂಥ ದಯನೀಯ ಪರಿಸ್ಥಿತಿಯಲ್ಲಿ ಒಂದರಿಂದ ಐದನೇ ತರಗತಿಯ 28 ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ.

    ಇಬ್ಬರು ಶಿಕ್ಷಕರಿದ್ದಾರೆ. ಇಲ್ಲಿನ ಜಾಗದ ಕೊರತೆಯಿಂದ ಕೆಲ ಮಕ್ಕಳನ್ನು ವರ್ಷದ ಪ್ರಾರಂಭದಲ್ಲಿ ಬೇರೆ ಶಾಲೆಗೆ ಕಳಿಸಲಾಯಿತು ಎನ್ನುತ್ತಾರೆ ಶಿಕ್ಷಕರು. ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಇಳಿಕೆಯಾಗುತ್ತಿದೆ. ಇಲ್ಲಿ ಸಾಕಷ್ಟು ಮಕ್ಕಳಿದ್ದರೂ ಅವರಿಗೆ ಸೌಲಭ್ಯವೇ ಇಲ್ಲವಾಗಿದೆ.

    ಹೊರ ಜಿಲ್ಲೆಗಳಿಂದ ಬಂದ ಕೂಲಿಕಾರರ ಮಕ್ಕಳೇ ಇಲ್ಲಿ ಹೆಚ್ಚಿದ್ದಾರೆ. ಎಸ್​ಡಿಎಂಸಿ ಸದಸ್ಯರಾಗಿರುವ ಪಾಲಕರು ಧ್ವನಿ ಎತ್ತಿ ಸೌಲಭ್ಯ ಕೊಡಿಸುವ ಪರಿಸ್ಥಿತಿಯಲ್ಲಿಲ್ಲ. ಸುತ್ತಲೂ ಕೊಂಕಣಿ ಪ್ರಭಾವದ ಪ್ರದೇಶವಾಗಿದ್ದರಿಂದ ಕನ್ನಡ ಶಾಲೆಯೊಂದಕ್ಕಾಗಿ ಹೋರಾಟ ಮಾಡುವವರೂ ಇಲ್ಲ. ಇದರಿಂದ ಶಾಲೆ ಮಕ್ಕಳು ಬಳಲುತ್ತಿದ್ದಾರೆ.

    ಶತಮಾನದ ಶಾಲೆ: 1905ರಲ್ಲಿ ಈ ಶಾಲೆ ಪ್ರಾರಂಭವಾದ ಬಗ್ಗೆ ದಾಖಲೆಗಳಿವೆ. ಪಾಂಡುರಂಗ ವಿಠೋಬಾ ನಾಯ್ಕ ಎಂಬುವವರು ಇಲ್ಲಿ ಶಿಕ್ಷಕರಾಗಿದ್ದರು. ತಮ್ಮದೇ ಭೂಮಿಯಲ್ಲಿ ಶಾಲೆ ಆರಂಭಿಸಿದರು. ಸದ್ಯ ಅವರ ಸಂಬಂಧಿ ಎಸ್.ಕೆ. ರಾಣೆ ಕುಟುಂಬ ಈ ಕಟ್ಟಡವನ್ನು ಶಾಲೆಗೆ ಬಾಡಿಗೆ ನೀಡಿದೆ. ಇಲ್ಲಿ ಶೌಚಗೃಹ ನಿರ್ವಣಕ್ಕೆ ಜಾಗವಿಲ್ಲ. ಮಕ್ಕಳು ಬಯಲು ಶೌಚಕ್ಕೆ ಹೋಗುತ್ತಾರೆ. ಶಾಲೆಯಿಂದ ನಮಗೆ ತೊಂದರೆಯಾಗುತ್ತಿದೆ ಎಂದು ಎಸ್.ಕೆ. ರಾಣೆ ಅಸಮಾಧಾನ ವ್ಯಕ್ತಪಡಿಸುತ್ತಾರೆ.

    ನಾಗಪೊಂಡ ಶಾಲೆಗೆ ಶೀಘ್ರ ಭೇಟಿ ನೀಡಿ ಅಲ್ಲಿನ ಸಮಸ್ಯೆಗಳ ಬಗ್ಗೆ ಪರಿಶೀಲಿಸಲಾಗುವುದು. ಸರ್ಕಾರಿ ಜಾಗ ಸಿಕ್ಕಲ್ಲಿ ಹೊಸ ಕಟ್ಟಡ ನಿರ್ವಣಕ್ಕೆ ಯೋಜಿಸಲಾಗುವುದು. ಅಥವಾ ಸಮೀಪದ ಶಾಲೆಯೊಂದಿಗೆ ವಿಲೀನಗೊಳಿಸುವ ಬಗ್ಗೆ ಚಿಂತಿಸಲಾಗುವುದು.

    | ಶಾಂತೇಶ ನಾಯಕ ಬಿಇಒ, ಕಾರವಾರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts