More

    ಸೋಲಿಗೆ ಧೃತಿಗೆಟ್ಟು ಓಡಿಹೋಗುವವನಲ್ಲ

    ಅರಸೀಕೆರೆ: ಚುನಾವಣಾ ರಾಜಕಾರಣದಲ್ಲಿ ಎದುರಾಗುವ ಸೋಲಿಗೆ ಧೃತಿಗೆಟ್ಟು ಓಡಿಹೋಗುವ ಜಾಯಮಾನ ನನ್ನದಲ್ಲ ಎಂದು ಮುಖಂಡ ಎನ್.ಆರ್.ಸಂತೋಷ್ ಹೇಳಿದರು.

    ತಾಲೂಕಿನ ರಾಂಪುರ ಗ್ರಾಮದಲ್ಲಿ ಭಾನುವಾರ ಕಾರ್ಯಕರ್ತರು ಹಾಗೂ ಮುಖಂಡರನ್ನು ಉದ್ದೇಶಿಸಿ ಮಾತನಾಡಿದ ಅವರು, ಪ್ರಸಕ್ತ ಚುನಾವಣೆಯಲ್ಲಿ ಮತದಾರರು ನೀಡಿದ ತೀರ್ಪನ್ನು ಗೌರವದಿಂದ ಸ್ವೀಕರಿಸಿದ್ದೇನೆ. ಸೋಲಿನ ಭೀತಿಯಿಂದ ಹೆದರಿ ಓಡಿ ಹೋಗುವ ಜಾಯಮಾನ ನನ್ನದಲ್ಲ. ಮುಗಿದು ಹೋದ ಅಧ್ಯಾಯ ಕುರಿತು ಪದೇ ಪದೆ ಪ್ರಸ್ತಾಪಿಸುವ ಬದಲು ಮುಂದೇನು ಮಾಡಬೇಕಿದೆ ಎನ್ನುವ ಕಡೆಗೆ ಒತ್ತು ನೀಡೋಣ ಎಂದರು.

    ಚುನಾವಣೆಯಲ್ಲಿ ಸೋತಿರುವ ಕೆಲವರು ಬೇಸರದಿಂದ ಮನೆಯಿಂದ ಹೊರಗೆ ಬಂದಿಲ್ಲ. ಆದರೆ ನಾನು ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳದೆ ಕಾರ್ಯರ್ತರ ಮನೆಯಲ್ಲಿ ನಡೆಯುತ್ತಿರುವ ಮದುವೆ ಸೇರಿ ಇತರ ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದು, ಕಾರ್ಯಕರ್ತರೂ ಆತಂಕಗೊಳ್ಳುವ ಅಗತ್ಯವಿಲ್ಲ. ಬೂತ್ ಹಂತದಲ್ಲಿ ಆಗಿರುವ ಲೋಪಗಳನ್ನು ಸರಿಪಡಿಸಿಕೊಂಡು ಮುನ್ನಡೆಯೋಣ ಎಂದು ಸಲಹೆ ನೀಡಿದರು.

    ರಾಜ್ಯವೇ ತಿರುಗಿ ನೋಡುವ ರೀತಿಯಲ್ಲಿ ಅರಸೀಕೆರೆ ವಿಧಾನಸಭಾ ಕ್ಷೇತ್ರದ ಚುನಾವಣೆಯನ್ನು ಎದುರಿಸಿದ್ದೇನೆ. ಕ್ಷೇತ್ರದ ಇತಿಹಾಸದಲ್ಲಿ ಇಂತಹ ಭರಾಟೆ ಮತದಾನ ನಡೆದಿರಲಿಲ್ಲವೆಂದು ಮತದಾರರೇ ಮಾತನಾಡಿಕೊಳ್ಳುತ್ತಿದ್ದಾರೆ. ಕಳೆದ ಮೂರೂವರೆ ವರ್ಷದಿಂದ ಬೆನ್ನಿಗೆ ನಿಂತು ಸಹಕಾರ ನೀಡಿದ ಅಭಿಮಾನಿಗಳು, ಕಾರ್ಯಕರ್ತರು ಹಾಗೂ ಮುಖಂಡರಿಗೆ ಋಣಿಯಾಗಿದ್ದೇನೆ. ಆದರೆ ಕೆಲವರು ಕ್ಷೇತ್ರಬಿಟ್ಟು ಹೋಗಲಿದ್ದೇನೆ ಎಂದು ಮತ್ತೊಂದು ರೀತಿಯ ಅಪಪ್ರಚಾರದಲ್ಲಿ ತೊಡಗಿದ್ದು, ಇಂತಹ ಮಾತುಗಳಿಗೆ ಕಿವಿಗೊಡಬೇಡಿ ಎಂದರು.

    ಮುಖಂಡರಾದ ಶೇಖರಪ್ಪ, ಮಹಾಲಿಂಗಪ್ಪ, ಮಲ್ಲಿಕಾರ್ಜುನ್, ಹೊಳಲ್ಕರೆ ಮೂರ್ತಿ, ದಿನೇಶ್ ಇತರರು ಇದ್ದರು. ಎನ್.ಆರ್.ಸಂತೋಷ್ ಆಗಮನದ ಸುದ್ದಿ ತಿಳಿದ ರಾಂಪುರ ಸುತ್ತಮುತ್ತಲ ಹಳ್ಳಿಗಳ ನೂರಾರು ಕಾರ್ಯಕರ್ತರು ಹಾಗೂ ಮುಖಂಡರು ಸ್ಥಳಕ್ಕೆ ದೌಡಾಯಿಸಿದರು. ಅಲ್ಲದೆ ಪ್ರತಿ ಹಂತದಲ್ಲಿಯೂ ರಾಜಕೀಯ ವಿರೋಧಿಗಳು ಸೋಲಿಗೆ ನಡೆಸಿದ ಕುತಂತ್ರ ಕುರಿತು ಹಲವು ವಿಚಾರಗಳನ್ನು ಪ್ರಸ್ತಾಪಿಸಿ ಕಣ್ಣೀರಿಟ್ಟರು. ಎಲ್ಲವನ್ನೂ ಸಮಾಧಾನದಿಂದಲೇ ಆಲಿಸಿದ ಸಂತೋಷ್ ಯಾರೊಬ್ಬರೂ ಎದೆಗುಂದಬಾರದು ಎಂದು ಸಲಹೆ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts