More

    ಸೋರುತ್ತಿದೆ ಐತಿಹಾಸಿಕ ಕಮಲ ಬಸದಿ

    ಬೆಳಗಾವಿ: ನಗರದ ಐತಿಹಾಸಿಕ ಕಿರೀಟದಂತಿರುವ ಕೋಟೆಯ ಆವರಣದ ‘ಕಮಲ ಬಸದಿ’ಗೆ ಈಗಷ್ಟೇ ಪ್ರವಾಸಿಗರ ಪ್ರವೇಶಕ್ಕೆ ಅನುಮತಿ ನೀಡಲಾಗಿದೆ. ಕರೊನಾ ಲಾಕ್‌ಡೌನ್‌ನಿಂದ ಬಿಕೋ ಎನ್ನುತ್ತಿದ್ದ ಬಸದಿಯ ಆವರಣದಲ್ಲಿ ಜನರು ಓಡಾಡುತ್ತಿದ್ದಾರೆ. ಆದರೆ, ಮಳೆಯಿಂದಾಗಿ ಬಸದಿಯು ಸೋರುತ್ತಿದ್ದು, ಪ್ರವಾಸಿಗರು ಕಿರಿಕಿರಿ ಅನುಭವಿಸುವಂತಾಗಿದೆ.

    ಸೋರುತ್ತಿದೆ ಐತಿಹಾಸಿಕ ಕಮಲ ಬಸದಿ

    ತನ್ನ ಶಿಲ್ಪಕಲೆಯಿಂದ ಶ್ರೀಮಂತವಾಗಿರುವ ಈ ಸ್ಮಾರಕದ ಸೊಬಗು ಕಣ್ತುಂಬಿ ಕೊಳ್ಳಲು ರಾಜ್ಯದ ವಿವಿಧ ಜಿಲ್ಲೆಗಳಿಂದ ಪ್ರವಾಸಿಗರು, ಸಂಶೋಧನಾ ವಿದ್ಯಾರ್ಥಿಗಳು ಆಗಮಿಸುತ್ತಾರೆ. ಕರೊನಾ ಹಾವಳಿ ತಗ್ಗಿದ ನಂತರ ನೆರೆ ರಾಜ್ಯಗಳಿಂದಲೂ ಪ್ರವಾಸಿಗರು ಬರಲಿದ್ದಾರೆ. ಇಂತಹ ಐತಿಹಾಸಿಕ ಸ್ಮಾರಕದ ಗೋಪುರದ ಮೇಲಿಂದ ಗರ್ಭಗುಡಿ, ರಂಗಮಂಟಪ ಹಾಗೂ ನವರಂಗದ ಮೇಲೆ ಮಳೆ ನೀರು ಸೋರುತ್ತಿದೆ. ಬಸದಿಯ ಒಳಭಾಗದಲ್ಲಿ ನೀರು ನಿಂತಿದ್ದರಿಂದ ಪ್ರವಾಸಿಗರ ಜತೆಗೆ, ಅರ್ಚಕರೂ ತೊಂದರೆ ಅನುಭವಿಸುತ್ತಿದ್ದಾರೆ.

    ಬೇಕಿದೆ ಇನ್ನಷ್ಟು ಮೂಲ ಸೌಕರ್ಯ: ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ವ್ಯಾಪ್ತಿಗೆ ಒಳಪಟ್ಟಿರುವ ಬಸದಿ ಮುಂಭಾಗದ ರಸ್ತೆ ಕೆಸರುಮಯವಾಗಿದೆ. ದಂಡು ಮಂಡಳಿಗೆ ಸೇರಿದ ಬಸದಿ ಸುತ್ತಲಿನ ಜಾಗದಲ್ಲಿ ಹೇರಳವಾಗಿ ಗಿಡ-ಗಂಟಿಗಳು ಬೆಳೆದಿವೆ. ಹಾಗಾಗಿ, ಬಸದಿ ಸುತ್ತಲಿನ ಪರಿಸರ ಸ್ವಚ್ಛಗೊಳಿಸುವ ಜತೆಗೆ ಬರುವವರಿಗೆ ಇನ್ನಷ್ಟು ಮೂಲ ಸೌಕರ್ಯ ಒದಗಿಸಬೇಕಿದೆ. ಪಕ್ಕದಲ್ಲಿರುವ ಜೈನ ಬಸದಿಗೂ ಮೂಲ ಸೌಕರ್ಯ ಕಲ್ಪಿಸಬೇಕು ಎಂದು ಜೈನ ಸಮುದಾಯದ ಕುಂತಿನಾಥ ಕಲಮನಿ, ಚಂದ್ರಕಾಂತ ಪಾಟೀಲ ಒತ್ತಾಯಿಸಿದ್ದಾರೆ.

    ಪ್ರವಾಸಿಗರ ಒತ್ತಾಯ: 8 ಶತಮಾನಗಳ ಇತಿಹಾಸ ಹೊಂದಿರುವ ಈ ಬಸದಿಯ ಮಂಟಪವನ್ನು ಸುಮಾರು 25 ವರ್ಷದ ಹಿಂದೆ ಪುರಾತತ್ವ ಸರ್ವೇಕ್ಷಣಾ ಇಲಾಖೆ ಜೀರ್ಣೋದ್ಧಾರಗೊಳಿಸಿತ್ತು. ಆದರೂ, ಪ್ರತಿವರ್ಷ ಮಳೆಗಾಲದಲ್ಲಿ ಸೋರುತ್ತಿದೆ. ಈಚೆಗಿನ ವರ್ಷಗಳಲ್ಲಿ ಸೋರಿಕೆ ಪ್ರಮಾಣ ಹೆಚ್ಚಾಗಿದ್ದು, ಅದಕ್ಕೊಂದು ಶಾಶ್ವತ ಪರಿಹಾರ ಕಂಡುಕೊಳ್ಳಬೇಕು ಎನ್ನುವುದು ಪ್ರವಾಸಿಗರ ಒತ್ತಾಸೆಯಾಗಿದೆ.

    ಸೋರುತ್ತಿದೆ ಐತಿಹಾಸಿಕ ಕಮಲ ಬಸದಿ

    ಇತಿಹಾಸ ತಿಳಿಸುವ ಕಂದರ್ಪಬಾಳಚಂದ್ರನ ಶಾಸನ: ನಾಲ್ವಡಿ ಕಾರ್ತವೀರ್ಯನ ಮಹಾಮಂತ್ರಿ ಕರುಣಾಗ್ರಹಣ್ಯ ಬೀಚಿ ರಾಜನು ಕ್ರಿ.ಶ. 1,204ರಲ್ಲಿ ಕಮಲ ಬಸದಿ ಕಟ್ಟಿಸಿದ್ದಾನೆ. ಈ ಬಸದಿಯು ಮೂಲತಃ ಶಾಂತಿನಾಥ ತೀರ್ಥಂಕರರದ್ದಾಗಿದ್ದು, ಈಗ ನೇಮಿನಾಥನ ಮೂರ್ತಿ ಹೊಂದಿದೆ. ಕಂದರ್ಪಬಾಳಚಂದ್ರ ರಚಿಸಿದ ಶಾಸನ ಈ ಬಸದಿ ಕುರಿತಾಗಿ ಹೆಚ್ಚಿನ ಮಾಹಿತಿ ಒದಗಿಸುತ್ತದೆ. ರಟ್ಟರು ಇದನ್ನು ಕಟ್ಟಿದ್ದರಿಂದ ‘ರಟ್ಟರ ಜಿನಾಲಯ’ ಎಂದೂ ಕರೆಯುತ್ತಾರೆ. ಬಸದಿಯು ಕಮಲದ ಆಕಾರದಲ್ಲಿರುವುದರಿಂದ ಹಾಗೂ ರಂಗಮಂಟಪದ ಮೇಲ್ಛಾವಣಿ ಕಮಲ ದಳಗಳನ್ನು ಹೋಲುವಂತಿರುವುದರಿಂದ ‘ಕಮಲ ಬಸದಿ’ ಎಂದೇ ಖ್ಯಾತಿ ಗಳಿಸಿದೆ. ಬಸದಿ ಉತ್ತರಾಭಿಮುಖವಾಗಿದ್ದು, ತಲ ವಿನ್ಯಾಸದಲ್ಲಿ ಗರ್ಭಗುಡಿ, ಸುಖನಾಸಿ, ನವರಂಗ ಹಾಗೂ ರಂಗಮಂಟಪವಿದೆ. ಗರ್ಭಗುಡಿಯ ಪ್ರವೇಶದ್ವಾರ ಸುಂದರ ಸುರುಳಿಯಾಕಾರದ ಕೆತ್ತನೆಯಿಂದ ಕೂಡಿದೆ. ಗರ್ಭಗುಡಿ ಚೌಕಾಕಾರವಾಗಿದ್ದು, ಮಧ್ಯದಲ್ಲಿ ಧ್ಯಾನ ಮುದ್ರೆಯ ಸಿದ್ಧಾಸನ ಸ್ಥಿತಿಯಲ್ಲಿರುವ 22ನೇ ತೀರ್ಥಂಕರನಾದ ನೇಮಿನಾಥನ ಮೂರ್ತಿ ಇದೆ. ಈ ಮೂರ್ತಿ ಹಿಂದೆ ಕಲಾಪೂರ್ಣ ಪ್ರಭಾವಳಿ ಇದೆ.

    ಕಮಲ ಬಸದಿಯ ಶಿಲ್ಪಕಲೆಗೆ ಧಕ್ಕೆಯಾಗದಂತೆ ಈಗಾಗಲೇ ಸಂರಕ್ಷಣಾ ಕಾರ್ಯ ಮಾಡಲಾಗಿದೆ. ಗೋಪುರ ಮೇಲಿಂದ ಮಳೆ ನೀರು ಒಳ ಬೀಳದಂತೆ ತಡೆಯಲು ವೈಜ್ಞಾನಿಕ ಕ್ರಮ ಕೈಗೊಳ್ಳಲಾಗುವುದು. ಮಳೆ ನಿಂತ ಬಳಿಕ ಕಾಮಗಾರಿ ಆರಂಭಿಸಲಾಗುವುದು. ಸ್ಮಾರಕಗಳ ರಕ್ಷಣೆ ನಿಟ್ಟಿನಲ್ಲಿ ಇತ್ತೀಚೆಗೆ ಕ್ಯಾಮರಾ ಅಳವಡಿಸಲಾಗಿದ್ದು, ಇಲ್ಲಿಗೆ ಬರುವ ಪ್ರವಾಸಿಗರಿಗೆ ಇನ್ನೂ ಹೆಚ್ಚಿನ ಸೌಲಭ್ಯ ಒದಗಿಸಲಾಗುವುದು.
    | ಡಾ.ವಿ.ಎಸ್.ಬಡಿಗೇರ ಸೂಪರಿಂಟೆಂಡೆಂಟ್ ಅರ್ಕಿಯಾಲಾಜಿಸ್ಟ್ , ಪುರಾತತ್ವ ಇಲಾಖೆ, ಧಾರವಾಡ

    ಕಮಲ ಬಸದಿ ಸುತ್ತಲಿನ ಪರಿಸರ ಸ್ವಚ್ಛಗೊಳಿಸಲಾಗುವುದು. ಪ್ರವಾಸಿಗರಿಗೆ ಆರೋಗ್ಯಕರ ವಾತಾವರಣ ನಿರ್ಮಿಸಲಾಗುವುದು.
    | ಬರ್ಚಸ್ವ, ಸಿಇಒ, ದಂಡು ಮಂಡಳಿ

    ಬಸದಿ ವೀಕ್ಷಣೆಗೆ ಬಂದವರಿಗೆ ಸಮಗ್ರ ಇತಿಹಾಸ ದೊರೆಯುತ್ತಿಲ್ಲ. ಹಾಗಾಗಿ, ಸ್ಮಾರಕದ ಇತಿಹಾಸವನ್ನು ಸವಿಸ್ತಾರವಾಗಿ ತೆರೆದಿಡುವ ಲಕ ಅಳವಡಿಸಬೇಕು. ಪ್ರವಾಸಿಗರನ್ನು ಆಕರ್ಷಿಸುವ ಸಲುವಾಗಿ ನಿತ್ಯವೂ ರಾತ್ರಿ ವೇಳೆ ಬಸದಿಗೆ ದೀಪಾಲಂಕಾರದ ವ್ಯವಸ್ಥೆ ಮಾಡಬೇಕು. ಬಸದಿ ಸುತ್ತಲಿನ ಪ್ರದೇಶದಲ್ಲಿ ಮಕ್ಕಳಿಗಾಗಿ ಉದ್ಯಾನ ನಿರ್ಮಿಸಬೇಕು. ತಂಡೋಪತಂಡವಾಗಿ ಬಸದಿ ಆವರಣಕ್ಕೆ ಲಗ್ಗೆ ಇಡುವ ಪ್ರೇಮಿಗಳ ಅಸಭ್ಯ ವರ್ತನೆಗೂ ಕಡಿವಾಣ ಹಾಕಬೇಕು.
    | ಸಂಜಯ ಬಾವಿ, ಸುರೇಖಾ ಬಾವಿ ಪ್ರವಾಸಿಗರು

    | ಇಮಾಮ್‌ಹುಸೇನ್ ಗೂಡುನವರ

    Array

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts