More

    ಸೋಂಕು ಹರಡುವಿಕೆ ತಡೆಯುವಲ್ಲಿ ಯಶಸ್ವಿ

    ಕಾರವಾರ : ಹೊರಗಿನಿಂದ ಬಂದ ವ್ಯಕ್ತಿಗಳ ಹೋಂ ಕ್ವಾಂರಂಟೇನ್, ಸೋಂಕಿತರ ಕುಟುಂಬದವರನ್ನು ಪ್ರತ್ಯೇಕವಾಗಿಡುವ ವ್ಯವಸ್ಥೆಗಳ ಮೂಲಕ ಕರೊನಾ ಸೋಂಕು ಸಾರ್ವತ್ರಿಕವಾಗಿ ಹರಡದಂತೆ ತಡೆಯಲು ಜಿಲ್ಲಾಡಳಿತ ಯಶಸ್ವಿಯಾಗಿದೆ.

    ಉತ್ತರ ಕನ್ನಡದಲ್ಲಿ ಕಳೆದ ಒಂದು ವಾರದಿಂದ ಹೊಸದಾಗಿ ಸೋಂಕಿತರು ಪತ್ತೆಯಾಗಿಲ್ಲ. ಸೋಂಕಿತರು ಚೇತರಿಸಿಕೊಂಡಿದ್ದಾರೆ. 50 ಕ್ಕೂ ಅಧಿಕ ಶಂಕಿತರ ಗಂಟಲಿನ ದ್ರವದ ಮಾದರಿಗಳು ನೆಗೆಟಿವ್ ಬಂದಿದ್ದು, ಜನ ನಿಟ್ಟುಸಿರು ಬಿಡುವಂತಾಗಿದೆ.

    ದುಬೈನಿಂದ ಆಗಮಿಸಿದ ಭಟ್ಕಳದ ಐವರಲ್ಲಿ ಸೋಂಕು ಇರುವುದು ಮೊದಲ ಹಂತದಲ್ಲಿ ಖಚಿತವಾಗಿತ್ತು. ಅವರ ಪ್ರಾಥಮಿಕ ಸಂಪರ್ಕಕ್ಕೆ ಬಂದ ನಾಲ್ವರಿಗೆ ರೋಗ ಹರಡಿತ್ತು. ಇದರಿಂದ ತಕ್ಷಣ ಎಚ್ಚೆತ್ತುಕೊಂಡ ಜಿಲ್ಲಾಧಿಕಾರಿ ಡಾ.ಹರೀಶ ಕುಮಾರ ಕೆ., ಜಿಪಂ ಸಿಇಒ ಎಂ.ರೋಶನ್ ಅವರು ಎಸ್​ಪಿ ಶಿವ ಪ್ರಕಾಶ ದೇವರಾಜು ಅವರ ಸಹಕಾರದಿಂದ ಕಟ್ಟುನಿಟ್ಟಿನ ಕ್ವಾರಂಟೇನ್ ವ್ಯವಸ್ಥೆ ಕೈಗೊಂಡರು.

    ಹಲವು ಅಡೆತಡೆಗಳ ನಡುವೆಯೂ ಸೋಂಕಿತರು ಅವರ ಕುಟುಂಬದವರ ಸಂಪರ್ಕಕ್ಕೆ ಬರದಂತೆ ದೂರ ಇಟ್ಟರು. ಎಲ್ಲ ಸೋಂಕಿತರನ್ನು ಭಟ್ಕಳದಿಂದ ಕಾರವಾರದ ಪತಂಜಲಿ ನೌಕಾ ಆಸ್ಪತ್ರೆಗೆ ಸ್ಥಳಾಂತರಿಸಿದರು.

    ಸೋಂಕಿತರ ಸಂಪರ್ಕಕ್ಕೆ ಬಂದ ಎಲ್ಲರನ್ನೂ ಹೋಂ ಕ್ವಾರಂಟೇನ್ ಬದಲು ಮುರ್ಡೆಶ್ವರದ ಆರ್​ಎನ್​ಎಸ್ ಆಸ್ಪತ್ರೆ, ಅಂಜುಮನ್ ಕಾಲೇಜ್​ನಲ್ಲಿ ಪ್ರತ್ಯೇಕವಾಗಿರಿಸುವ ವ್ಯವಸ್ಥೆಯನ್ನು ಕೈಗೊಳ್ಳಲಾಯಿತು. ಇದು ರೋಗ ತಹಬಂದಿಗೆ ಬರುವಲ್ಲಿ ಮಹತ್ವದ ಪಾತ್ರ ವಹಿಸಿತು.

    ರೋಗಿ ಬಿಡುಗಡೆ: ಕರೊನಾಗೆ ತುತ್ತಾಗಿದ್ದ ದುಬೈನಿಂದ ಮಂಗಳೂರಿಗೆ ಆಗಮಿಸಿ, ಅಲ್ಲಿಯೇ ಚಿಕಿತ್ಸೆ ಪಡೆದ ಭಟ್ಕಳ ಮೂಲದ ವ್ಯಕ್ತಿ ಚೇತರಿಸಿಕೊಂಡಿದ್ದಾನೆ.

    ಆತನ ಗಂಟಲ ದ್ರವದ ಎರಡನೇ ಹಂತದ ಪರಿಶೀಲನೆಯಲ್ಲಿ ನೆಗೆಟಿವ್ ಬಂದಿದ್ದು, ಸೋಮವಾರ ಆತನನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. ಆದರೆ, ಜನರಲ್ಲಿ ಭಯ ಬೇಡ ಎಂಬ ಕಾರಣಕ್ಕೆ ಆತನನ್ನು ಭಟ್ಕಳದಲ್ಲಿ ಮತ್ತೆ ಕ್ವಾರಂಟೇನ್​ಗೆ ಒಳಪಡಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

    ರೋಗಿ ಚೇತರಿಗೆ: ಕಾರವಾರದ ನೌಕಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಎಂಟು ರೋಗಿಗಳ ಪೈಕಿ ಇಬ್ಬರು ಚೇತರಿಸಿಕೊಂಡಿದ್ದಾರೆ. ಒಬ್ಬನ ಎರಡನೇ ಹಂತದ ಗಂಟಲ ದ್ರವ ಪರಿಶೀಲನೆ ವೇಳೆ ನೆಗೆಟಿವ್ ಬಂದಿದೆ. ಶೀಘ್ರದಲ್ಲಿ ಆಸ್ಪತ್ರೆಯಿಂದ ಬಿಡುಗಡೆಯಾಗುವ ಸಾಧ್ಯತೆ ಇದೆ.

    ಪ್ರಯೋಗಾಲಯಕ್ಕೆ ರವಾನೆ: ಭಟ್ಕಳದ ಜಾಲಿ ಹಾಗೂ ಸುತ್ತಲಿನ ಭಾಗದಲ್ಲಿದ್ದ ಗುಜರಾತ್, ತಮಿಳುನಾಡು ಮುತಾದ ಹೊರ ರಾಜ್ಯದ 30 ಕಾರ್ವಿುಕರ ಗಂಟಲ ಮಾದರಿಯನ್ನು ಕರೊನಾ ಪ್ರಯೋಗಾಲಯಕ್ಕೆ ಪರಿಶೀಲನೆಗೆ ಕಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಹರೀಶ ಕುಮಾರ್ ತಿಳಿಸಿದ್ದಾರೆ. ಅಲ್ಲದೆ, ಭಟ್ಕಳಕ್ಕೆ ವಿದೇಶದಿಂದ ಆಗಮಿಸಿದ 8 ಹಾಗೂ ಹೊನ್ನಾವರಕ್ಕೆ ಆಗಮಿಸಿದ ಇಬ್ಬರು ಸೇರಿ 10 ಜನ, ಮೈಸೂರಿನಿಂದ ಆಗಮಿಸಿದ 14 ಜನ ಸೇರಿ ಒಟ್ಟಾರೆ 54 ಮಂದಿಯ ಕರೊನಾ ಪರೀಕ್ಷಾ ವರದಿ ಪ್ರಯೋಗಾಲಯದಲ್ಲಿ ಬಾಕಿ ಇದೆ ಎಂದು ಅವರು ವಿವರಿಸಿದ್ದಾರೆ.

    ಒಟಿಪಿ ವ್ಯವಸ್ಥೆ ಇಲ್ಲ: ಜಿಲ್ಲೆಯಲ್ಲಿ ಪಡಿತರ ವಿತರಣೆ ಪ್ರಾರಂಭವಾಗಿದೆ. ಕರೊನಾ ಲಾಕ್​ಡೌನ್ ಹಿನ್ನೆಲೆಯಲ್ಲಿ ತೊಂದರೆಯಾಗಬಾರದು ಎಂಬ ಕಾರಣಕ್ಕೆ ಒಟಿಪಿ ವ್ಯವಸ್ಥೆಯನ್ನು ಸರ್ಕಾರ ರದ್ದು ಮಾಡಿದೆ. ಜನ ಸಹಿ ಹಾಕಿ ಪಡಿತರ ಪಡೆಯಬಹುದು ಎಂದು ವಿಪತ್ತು ನಿರ್ವಹಣಾ ಪ್ರಾಧಿಕಾರದ ಕಾರ್ಯಕಾರಿ ಸಮಿತಿ ಸದಸ್ಯ ಕಾರ್ಯದರ್ಶಿ ಟಿ.ಕೆ.ಅನಿಲಕುಮಾರ್ ಆದೇಶ ಹೊರಡಿಸಿದ್ದಾರೆ.

    ಅನುಮಾನ ಬೇಡ ಎಂಬ ಕಾರಣಕ್ಕೆ ಹೊರಗಿನಿಂದ ಬಂದ ಹಲವರ ಗಂಟಲ ಮಾದರಿಗಳನ್ನು ಪ್ರಯೋಗಾಲಯಕ್ಕೆ ಕಳಿಸಲಾಗಿದೆ. ಜಿಲ್ಲೆಯಲ್ಲಿ ಕರೊನಾ ಸೋಂಕು ಹತೋಟಿಯಲ್ಲಿದೆ. ಆತಂಕ ಬೇಡ. ಹಾಗೆಂದು ನಿರ್ಲಕ್ಷ್ಯ ಮಾಡಿ, ಬೇಕಾಬಿಟ್ಟಿ ಓಡಾಡಿದರೆ ಮತ್ತೆ ಅಪಾಯವಾದೀತು.

    ಡಾ.ಹರೀಶ ಕುಮಾರ ಕೆ. , ಜಿಲ್ಲಾಧಿಕಾರಿ, ಉತ್ತರ ಕನ್ನಡ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts