More

    ಸೋಂಕು ಮುಕ್ತವಾದರೂ ಇರಲಿ ಎಚ್ಚರ

    ಮುಂಡರಗಿ: ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ. ಪಾಟೀಲ, ಜಿಲ್ಲಾಧಿಕಾರಿ, ವೈದ್ಯರು, ಆಶಾ ಕಾರ್ಯಕರ್ತೆಯರು ಹಾಗೂ ಎಲ್ಲ ಅಧಿಕಾರಿಗಳ ಪರಿಶ್ರಮದಿಂದ ಮತ್ತು ಸಾರ್ವಜನಿಕರ ಸಹಕಾರದಿಂದ ಗದಗ ಜಿಲ್ಲೆಯು ಕರೊನಾ ಸೋಂಕಿನಿಂದ ಮುಕ್ತವಾಗಿದೆ. ಆದರೂ ಪ್ರತಿಯೊಬ್ಬರೂ ಮುಂಜಾಗ್ರತೆ ವಹಿಸಬೇಕು ಎಂದು ಮಾಜಿ ಸಚಿವ ಎಸ್.ಎಸ್. ಪಾಟೀಲ ಹೇಳಿದರು.

    ತಾಲೂಕಿನ ಶಿಂಗಟಾಲೂರ ಗ್ರಾಮದಲ್ಲಿ ಮಾಜಿ ಸಚಿವ ಎಸ್.ಎಸ್.ಪಾಟೀಲ ಅಭಿಮಾನಿ ಬಳಗದ ವತಿಯಿಂದ ಶ್ರೀ ಹೇಮರಡ್ಡಿ ಮಲ್ಲಮ್ಮ ಜಯಂತಿ ಮತ್ತು ವಿಶ್ವ ತಾಯಂದಿರ ದಿನಾಚರಣೆ ನಿಮಿತ್ತ ಭಾನುವಾರ ಆಯೋಜಿಸಿದ್ದ ಆಶಾ ಕಾರ್ಯಕರ್ತರಿಗೆ ಸನ್ಮಾನ ಮತ್ತು ಉಡಿ ತುಂಬುವುದು, ಮನೆಮನೆಗೆ ಆಹಾರಧಾನ್ಯ, ತರಕಾರಿ ಕಿಟ್ ವಿತರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಹೆಣ್ಣು ಕುಲಕ್ಕೆ ಶ್ರೀ ಹೇಮರಡ್ಡಿ ಮಲ್ಲಮ್ಮ ಮಾದರಿಯಾಗಿದ್ದಾರೆ. ಆ ತಾಯಿಯ ಆದರ್ಶಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

    ಶ್ರೀ ಮುದುಕೇಶ್ವರ ಸ್ವಾಮೀಜಿ ಮಾತನಾಡಿ, ತಾಯಿ ಎನ್ನುವುದು ಈ ಜಗತ್ತಿನ ಅದ್ಭುತ. ತಾಯಿಯನ್ನು ಗೌರವದಿಂದ ದೈವ ಸ್ವರೂಪವಾಗಿ ಕಾಣಬೇಕು ಎಂದರು.

    ಆಶಾ ಕಾರ್ಯಕರ್ತೆಯರಿಗೆ ಸನ್ಮಾನಿಸಿ, ಉಡಿ ತುಂಬಲಾಯಿತು. ನಂತರ ಎಪಿಎಂಸಿ ಅಧ್ಯಕ್ಷ ಶಿವಕುಮಾರಗೌಡ ಪಾಟೀಲ ಆಶಾ ಕಾರ್ಯಕರ್ತರಿಗೆ 1 ಸಾವಿರ ರೂ.ಚೆಕ್ ವಿತರಿಸಿದರು. ಎಲ್ಲ ಮನೆಗಳಿಗೆ ಆಹಾರ ಧಾನ್ಯ, ತರಕಾರಿ ಕಿಟ್ ವಿತರಿಸಲಾಯಿತು. ಇದಕ್ಕೂ ಮುನ್ನ ಹಾರೋಗೇರಿ ಗ್ರಾಮದಲ್ಲಿ ಜಯಂತಿ ಹಾಗೂ ಕಿಟ್ ವಿತರಣೆ ಕಾರ್ಯಕ್ರಮವನ್ನು ನಡೆಸಿದರು. ಮಂಜುನಾಥ ಮುಂಡವಾಡ, ಶಂಶಾದಬಿ ವಡ್ಡಟ್ಟಿ, ಕೊಟ್ರೇಶ ಅಂಗಡಿ, ತಿಮ್ಮರಡ್ಡೆಪ್ಪ ಮೇಟಿ, ಪುಲಿಕೇಶಗೌಡ ಪಾಟೀಲ, ಫಕೀರಡ್ಡಿ ನೀರಲಗಿ, ವಿ.ಎಸ್. ಪಾಟೀಲ, ಶ್ರೀಕಂಠಯ್ಯ ಹಿರೇಮಠ, ಈರಪ್ಪ ತಳವಾರ, ಬಸೀರ್ ವಡ್ಡಟ್ಟಿ, ಬಿ.ಎಸ್. ಕಣವಿ, ಈರಪ್ಪ ಮುಂಡವಾಡ, ಹನುಮಂತ ಚೌಟನವರ, ಹನುಮಂತಪ್ಪ ಹರಿಜನ, ರಾಮಪ್ಪ ಮಲ್ಲಾಪುರ ಇತರರು ಇದ್ದರು.

    ಜಯಂತ್ಯುತ್ಸವ: ಪಟ್ಟಣದ ತಹಸೀಲ್ದಾರ್ ಕಚೇರಿಯಲ್ಲಿ ತಾಲೂಕು ಆಡಳಿತದ ವತಿಯಿಂದ ಭಾನುವಾರ ಶ್ರೀ ಹೇಮರಡ್ಡಿ ಮಲ್ಲಮ್ಮ ಜಯಂತಿಯನ್ನು ಸಾಂಕೇತಿಕವಾಗಿ ಆಚರಿಸಲಾಯಿತು. ತಹಸೀಲ್ದಾರ್ ಡಾ. ವೆಂಕಟೇಶ ನಾಯಕ, ಡಾ. ಬಸವರಾಜ ಮೇಟಿ, ಶಿವಪ್ಪ ಚಿಕ್ಕಣ್ಣವರ, ರಾಜಾಬಕ್ಷಿ ಬೆಟಗೇರಿ, ಸಂತೋಷ ಹಿರೇಮನಿ, ನಾಗರಾಜ ಹೊಂಬಳಗಟ್ಟಿ, ಮಂಜುನಾಥ ಮುಧೋಳ, ವೀರಣ್ಣ ಮೇಟಿ, ಬಾಬಣ್ಣ ಚೆನ್ನಳ್ಳಿ, ಅಡಿವೆಪ್ಪ ಚಲವಾದಿ, ಎಸ್.ಎಸ್.ಬಿಚ್ಚಾಲಿ ಇತರರಿದ್ದರು.

    ಶಿವಶರಣೆಯ ತತ್ತ್ವ, ಆದರ್ಶ ಅಳವಡಿಸಿಕೊಳ್ಳಿ

    ಡಂಬಳ: ಗ್ರಾಮದ ಕಪ್ಪತ್ತ ಮಲ್ಲೇಶ್ವರ ಸೇವಾ ಸಮಿತಿ ವತಿಯಿಂದ ಭಾನುವಾರ ಕಪ್ಪತ್ತಮಲ್ಲೇಶ್ವರ ದೇವಾಸ್ಥಾನದಲ್ಲಿ ಪರಸ್ಪರ ಅಂತರ ಕಾಪಾಡಿಕೊಂಡು, ಮಾಸ್ಕ್ ಧರಿಸಿ ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಜಯಂತಿ ಆಚರಿಸಲಾಯಿತು.

    ಸೇವಾ ಸಮಿತಿ ಸದಸ್ಯ ಮಲ್ಲಣ್ಣ ಗಡಗಿ ಮಾತನಾಡಿ, ಇಂದಿನ ಯುವ ಪೀಳಿಗೆ ಹೇಮರಡ್ಡಿ ಮಲ್ಲಮ್ಮನ ತತ್ತ್ವ, ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

    ಸೇವಾ ಸಮಿತಿ ಅಧ್ಯಕ್ಷ ಮುತ್ತಣ್ಣ ಕೊಂತಿಕಲ್ಲ, ಬಸವರಡ್ಡಿ ಬಂಡಿಹಾಳ, ಸಿ.ಟಿ. ಪ್ಯಾಟಿ, ವಿ.ಎಸ್.ಯರಾಶಿ, ವಿ.ಟಿ.ಮೇಟಿ, ಗವಿಸಿದ್ದಪ್ಪ ಬಂಡಿಹಾಳ, ನಿಂಗರಡ್ಡಿ ಕೆಂಚರಡ್ಡಿ, ಶೇಕಪ್ಪ ಗಡಗಿ, ಶರಣು ಬಂಡಿಹಾಳ, ಶ್ರೀಕಾಂತ ಕವಲೂರು ಇತರರು ಇದ್ದರು.

    ಮಲ್ಲಮ್ಮ ಮನುಕುಲಕ್ಕೆ ಆದರ್ಶ

    ಶಿರಹಟ್ಟಿ: ತಾಲೂಕಿನ ಬೆಳ್ಳಟ್ಟಿ ಗ್ರಾಮದ ಮಾರುತಿ ದೇವಸ್ಥಾನದಲ್ಲಿ ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಜಯಂತಿ ಆಚರಿಸಲಾಯಿತು.

    ಗ್ರಾಪಂ ಸದಸ್ಯ ತಿಮ್ಮರಡ್ಡಿ ಮರಡ್ಡಿ ಮಾತನಾಡಿ, ‘ಸಂಸಾರದಲ್ಲಿದ್ದುಕೊಂಡೇ ಸಾಧನೆಯ ಉತ್ತುಂಗಕ್ಕೇರಿದ ಮಹಾ ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಅವರು ಮನುಕುಲಕ್ಕೆ ಆದರ್ಶಪ್ರಾಯ’ ಎಂದರು.

    ಗ್ರಾಪಂ ಅಧ್ಯಕ್ಷ ರಮೇಶ ನಿರ್ವಾಣಿಶೆಟ್ಟರ, ಗಿರೀಶರಡ್ಡಿ ಮೇಕಳಿ, ಬಸವರಡ್ಡಿ ಹ್ಯಾಟಿ, ಸಂಜೀವರಡ್ಡಿ ಮೇಕಳಿ, ಅಶೋಕ ರಡ್ಡಿ, ಬಸವರಡ್ಡಿ, ಕೊಟ್ರೇಶ ಸಜ್ಜನರ, ವಿನಾಯಕ ಅಳವಂಡಿ, ಮಕ್ಕೀರಡ್ಡಿ ಮೇಕಳಿ, ದೇವರಡ್ಡಿ ಅಳವಂಡಿ ಇತರರು ಇದ್ದರು.

    ಉತ್ತಮ ಸಮಾಜ ನಿರ್ವಣಕ್ಕೆ ಮುಂದಾಗಿ

    ಲಕ್ಷ್ಮೇಶ್ವರ: ಪಟ್ಟಣದ ತಹಸೀಲ್ದಾರ್ ಕಚೇರಿಯಲ್ಲಿ ಭಾನುವಾರ ಶಿವಶರಣೆ ಹೆಮರಡ್ಡಿ ಮಲ್ಲಮ್ಮನ ಜಯಂತಿಯನ್ನು ಸರಳವಾಗಿ ಆಚರಿಸಲಾಯಿತು. ರಡ್ಡಿ ಸಮಾಜದ ಶಂಕ್ರಣ್ಣ ಗೊರವರ ಮಾತನಾಡಿ, ಹೇಮರಡ್ಡಿ ಮಲ್ಲಮ್ಮನ ಧರ್ಮ ನಿಷ್ಠೆ, ಸೇವಾ ಮನೋಭಾವ, ಧಾರ್ವಿುಕ ಭಾವನೆಯನ್ನು ಎಲ್ಲರೂ ಅಳವಡಿಸಿಕೊಳ್ಳುವುದು ಅಗತ್ಯವಾಗಿದೆ. ಶಿವಶರಣ, ಶರಣೆಯರ ಆದರ್ಶ, ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಉತ್ತಮ ಸಮಾಜ ನಿರ್ವಣಕ್ಕೆ ಮುಂದಾಗಬೇಕು ಎಂದರು.

    ಸಮಾಜದ ಈಶ್ವರ ಭೂತರಡ್ಡಿ, ಬಾಬು ಅಳವಂಡಿ, ಬಸವರಾಜ ದಾನಿ, ಮಹೇಶ ಹಾದಿಮನಿ, ವೆಂಕಟೇಶ ಪಾಟೀಲ, ಸಮಾಜದ ಮುಖಂಡರು, ತಹಸೀಲ್ದಾರ್ ಕಚೇರಿ ಸಿಬ್ಬಂದಿ ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts