More

    ಸೋಂಕು ನಿಯಂತ್ರಕ ಸುರಂಗ ನಿರ್ಮಾಣ

    ಮುಂಡರಗಿ: ಪಟ್ಟಣದ ಹಳೇ ಎಪಿಎಂಸಿ ಪ್ರಾಂಗಣದಲ್ಲಿ ತರಕಾರಿ ಮಾರುಕಟೆಯ ಮುಖ್ಯಗೇಟ್​ಗೆ ಕೃಷಿ ಉತ್ಪನ್ನ ಮಾರುಕಟ್ಟೆಯ ವತಿಯಿಂದ ಸೋಂಕು ನಿಯಂತ್ರಿಸುವ ಸುರಂಗ ಮಾರ್ಗವನ್ನು ಪ್ರಾರಂಭಿಸುವ ಮೂಲಕ ಕರೊನಾ ಸೋಂಕು ಹರಡದಂತೆ ಮುಂಜಾಗ್ರತಾ ಕ್ರಮಕ್ಕೆ ಮುಂದಾಗಿದೆ.

    ತರಕಾರಿ ಮಾರುಕಟ್ಟೆಗೆ ಸಂಪರ್ಕ ಕಲ್ಪಿಸುವ ಎಲ್ಲ ಮಾರ್ಗಗಳನ್ನು ಬಂದ್ ಮಾಡಿ ಮುಖ್ಯ ಮಾರ್ಗದ ಸುರಂಗದ ಮೂಲಕ ಎಲ್ಲ ರೈತರು ಹಾಗೂ ವ್ಯಾಪಾರಸ್ಥರು ಒಳಗೆ ಬರುವಂತೆ ವ್ಯವಸ್ಥೆ ಮಾಡಲಾಗಿದೆ. ಸುರಂಗ ಮಾರ್ಗವನ್ನು ಪ್ರವೇಶಿಸುವುದಕ್ಕಿಂತ ಪೂರ್ವದಲ್ಲಿ ಕೈತೊಳೆಯುವುದಕ್ಕೆ ವ್ಯವಸ್ಥೆ ಮಾಡಿದ್ದಾರೆ.

    ತರಕಾರಿ ಮಾರುಕಟೆಯಲ್ಲಿ ನೂತನವಾಗಿ ನಿರ್ವಣಗೊಂಡ ತರಕಾರಿ ಹರಾಜು ಪ್ರಾಂಗಣವನ್ನು ಸೋಮವಾರ ಪ್ರಾರಂಭಿಸಲಾಯಿತು. ರೈತರು, ಖರೀದಿದಾರರು ಹಾಗೂ ದಲಾಲರು ಸಾಮಾಜಿಕ ಅಂತರ ಕಾಯ್ದುಕೊಂಡು ತರಕಾರಿ ವ್ಯಾಪಾರ ವಹಿವಾಟು ಮಾಡುವುದಕ್ಕೆ ಪ್ರಾಂಗಣದ ನೆಲದ ಮೇಲೆ ಬಾಕ್ಸ್ ಆಕಾರದಲ್ಲಿ ಜಾಗವನ್ನು ಗುರುತಿಸಲಾಗಿದೆ.

    ಅಂದಾಜು 40 ಸಾವಿರ ರೂ.ವೆಚ್ಚದಲ್ಲಿ ಸೋಂಕು ನಿಯಂತ್ರಿಸುವ ಸುರಂಗ ಮಾರ್ಗ ಮಾಡಲಾಗಿದೆ. ಸುರಂಗ ಮಾರ್ಗದ ಪಕ್ಕದಲ್ಲಿ 500 ಲೀಟರ್ ನೀರಿನ ಸಿಂಟೆಕ್ಸ್ ಟ್ಯಾಂಕ್ ಇಡಲಾಗಿದೆ. ಅದರೊಳಗೆ ಬ್ಲೀಚಿಂಗ್ ಹಾಗೂ ಹೈಪೋಕ್ಲೋರೈಡ್ ಪೌಡರ್ ಅನ್ನು ಮಿಶ್ರಣ ಮಾಡಲಾಗುತ್ತದೆ. ಸಿಂಟೆಕ್ಸ್ ಪಕ್ಕದಲ್ಲಿ ಮೋಟರ್ ಅಳವಡಿಸಲಾಗಿದ್ದು, ಆ ಮೂಲಕವಾಗಿ ಸುರಂಗದೊಳಗೆ ಔಷಧಯುಕ್ತವು ಮಂಜಿನ ಹನಿಗಳ ಮೂಲಕ ಸಿಂಪಡಿಸುತ್ತದೆ.

    ಹೊಸ ಎಪಿಎಂಸಿಯ ಎರಡು ಮುಖ್ಯಗೇಟ್​ಗಳಿಗೆ ಸೋಂಕು ನಿಯಂತ್ರಿಸುವ ಸುರಂಗ ಮಾರ್ಗ ಪ್ರಾರಂಭಿಸಲು ಸಿದ್ಧತೆ ನಡೆಸಲಾಗುತ್ತಿದೆ. ಅದರಂತೆ ಜಿಲ್ಲಾಡಳಿತ ಪ್ರಮುಖ ಜನಸಂದಣಿ ಇರುವಂಥ ಪ್ರಮುಖ ಕಚೇರಿಗಳ ಮುಖ್ಯಗೇಟ್​ಗೆ ಇಂತಹ ಔಷಧಯುಕ್ತ ಸುರಂಗಮಾರ್ಗ ಪ್ರಾರಂಭಿಸಿದರೆ ಸೋಂಕು ಹರಡದಂತೆ ನಿಯಂತ್ರಿಸಲು ಸಾಧ್ಯವಾಗುತ್ತದೆ.

    ಸೋಂಕು ನಿಯಂತ್ರಿಸುವ ಸುರಂಗ ಮಾರ್ಗ ಹಾಗೂ ತರಕಾರಿ ಹರಾಜು ಪ್ರಾಂಗಣದ ಕಾರ್ಯ ಚಟುವಟಿಕೆಯ ಪ್ರಾರಂಭೋತ್ಸವದಲ್ಲಿ ಪುರಸಭೆ ಮುಖ್ಯಾಧಿಕಾರಿ ಎಸ್.ಎಚ್. ನಾಯ್ಕರ, ಎಪಿಎಂಸಿ ಕಾರ್ಯದರ್ಶಿ ದೀಪಾ ಪಾಟೀಲ, ಫರೀದ್ ಲೈನದ, ವಿಜಯಕುಮಾರ ಅಕ್ಕಿ, ಯಲ್ಲಪ್ಪ ಹೊಂಬಳಗಟ್ಟಿ, ರಫೀಕ್ ಮುಲ್ಲಾ, ರಾಘವೇಂದ್ರ ಕುರಿ, ಮಂಜುನಾಥ ನವಲಿ ಉಪಸ್ಥಿತರಿದ್ದರು.

    ಕರೊನಾ ಸೋಂಕು ಹರಡದಂತೆ ಎಪಿಎಂಸಿಯಿಂದ ತರಕಾರಿ ಮಾರುಕಟ್ಟೆಯಲ್ಲಿ ಔಷಧಯುಕ್ತ ಸುರಂಗ ಮಾರ್ಗ ಪ್ರಾರಂಭಿಸಿದ್ದೇವೆ. ಇನ್ನೆರಡು ದಿನದಲ್ಲಿ ಹೊಸ ಎಪಿಎಂಸಿ ಎರಡು ಮುಖ್ಯಗೇಟ್​ಗೆ ಕರೊನಾ ಸೋಂಕು ನಿಯಂತ್ರಿಸುವ ಸುರಂಗ ಮಾರ್ಗ ಪ್ರಾರಂಭಿಸುತ್ತೇವೆ. ರೈತರು, ವ್ಯಾಪಾರಸ್ಥರು ಮತ್ತು ದಲಾಲರು ಸಾಮಾಜಿಕ ಅಂತರ ಕಾಯ್ದುಕೊಂಡು ವ್ಯಾಪಾರ ವಹಿವಾಟು ನಡೆಸಲು ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗುತ್ತಿದೆ.

    | ಶಿವಕುಮಾರಗೌಡ ಪಾಟೀಲ, ಎಪಿಎಂಸಿ ಅಧ್ಯಕ್ಷ

    ತರಕಾರಿ ಮಾರುಕಟ್ಟೆಯಲ್ಲಿ ಕರೊನಾ ಸೋಂಕು ನಿಯಂತ್ರಿಸುವ ಸುರಂಗ ಮಾರ್ಗ ಪ್ರಾರಂಭಿಸಿದಂತೆ ತಹಸೀಲ್ದಾರ್ ಕಚೇರಿ, ಪುರಸಭೆ, ಸರ್ಕಾರಿ ಆಸ್ಪತ್ರೆ, ಪೊಲೀಸ್ ಠಾಣೆ, ಪ್ರಮುಖ ಜನಸಂದಣಿ ಪ್ರದೇಶದಲ್ಲಿ ಇಂತಹ ಔಷಧಯುಕ್ತ ಸುರಂಗ ಮಾರ್ಗ ಮಾಡುವುದರಿಂದ ಕರೊನಾ ವೈರಸ್ ಹರಡದಂತೆ ನಿಯಂತ್ರಿಸಲು ಸಹಕಾರಿಯಾಗುತ್ತದೆ. ಜಿಲ್ಲಾಡಳಿತ ಈ ಬಗ್ಗೆ ಕ್ರಮಕ್ಕೆ ಮುಂದಾಗಬೇಕು.

    | ರಾಮಕೃಷ್ಣ ದೊಡ್ಡಮನಿ, ಮಾಜಿ ಶಾಸಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts