More

    ಸೋಂಕಿತರ ಪ್ರಯಾಣ ಇತಿಹಾಸ

    ಧಾರವಾಡ: ಜಿಲ್ಲೆಯಲ್ಲಿ ಭಾನುವಾರ ದೃಢಪಟ್ಟಿರುವ ನಾಲ್ವರು ಕರೋನಾ ಸೋಂಕಿತ ವ್ಯಕ್ತಿಗಳ ಪ್ರಯಾಣ ವಿವರವನ್ನು ಜಿಲ್ಲಾಧಿಕಾರಿ ಸೋಮವಾರ ಬಿಡುಗಡೆ ಮಾಡಿದ್ದಾರೆ.

    ಪಿ- 1123 ಪ್ರಯಾಣ ವಿವರ: ಪಿ-1123 (39 ವರ್ಷ, ಪುರುಷ) ವ್ಯಕ್ತಿ ಮಹಾರಾಷ್ಟ್ರದ ಮುಂಬೈ ನಿವಾಸಿ. ಮೇ 11ರಂದು ಬಾಡಿಗೆ ವಾಹನದಲ್ಲಿ ಮಧ್ಯಾಹ್ನ 12 ಗಂಟೆಗೆ ಮುಂಬೈನಿಂದ ಹೊರಟು, ಮಧ್ಯಾಹ್ನ 2 ಗಂಟೆಗೆ ಪುಣೆ ಹೆದ್ದಾರಿ ಪಕ್ಕದ ಶಾಯಾಜಿ ಹೊಟೇಲ್ ಬಳಿ ತಮ್ಮ ಪರಿಚಿತರನ್ನು ಸಹ ಪ್ರಯಾಣಿಕರನ್ನಾಗಿ ಹತ್ತಿಸಿಕೊಂಡು ಸಂಜೆ ನಿಪ್ಪಾಣಿ ಚೆಕ್ ಪೋಸ್ಟ್ ತಲುಪಿದ್ದಾರೆ. ಮೇ 12ರ ಮಧ್ಯರಾತ್ರಿ 1.30ಕ್ಕೆ ಹುಬ್ಬಳ್ಳಿ ಬೈಪಾಸ್​ಗೆ ಆಗಮಿಸಿದ ಇವರು, ಅಲ್ಲಿಂದ ಸಹೋದರನ ಬೈಕ್​ನಲ್ಲಿ ಹಳೇಹುಬ್ಬಳ್ಳಿ ನವ ಅಯೋಧ್ಯಾನಗರದ ಸಹೋದರಿಯ ಮನೆಗೆ ತೆರಳಿದ್ದಾರೆ. ಅದೇ ದಿನ ಬೆಳಗ್ಗೆ 10.30ಕ್ಕೆ ಕಿಮ್ಸ್ ಆಸ್ಪತ್ರೆಗೆ ತೆರಳಿ ಮೂಗು ಮತ್ತು ಗಂಟಲ ದ್ರವ ಪರೀಕ್ಷೆಗೆ ಒಳಪಟ್ಟಿದ್ದು, ಮೇ 16ರಂದು ಕೋವಿಡ್-19 ದೃಢಪಟ್ಟಿದ್ದರಿಂದ ಕಿಮ್ಸ್ ದಾಖಲಾಗಿದ್ದಾರೆ.

    ಪಿ- 1124 ಪ್ರಯಾಣ ವಿವರ: 16 ವರ್ಷದ ಬಾಲಕ ಹುಬ್ಬಳ್ಳಿ ಕೇಶ್ವಾಪುರ ನಿವಾಸಿ. ಮೇ 1ರಂದು ಸೋಂಕು ದೃಢಪಟ್ಟ ಪಿ-589 ವ್ಯಕ್ತಿಯ ಮಗ. ಇವರು ಏಪ್ರಿಲ್ ತಿಂಗಳಲ್ಲಿ ಕೇಶ್ವಾಪುರದ ತಮ್ಮ ಮನೆ ಬಳಿಯ ಮಹಾವೀರನಗರ , ಶಾಂತಿನಗರ, ಬೆಂಗೇರಿ ಹಾಗೂ ಶಿರಡಿನಗರ ಸೇರಿ ಇತರ ಕಡೆಗಳಲ್ಲಿ ಸಂಚರಿಸಿದ್ದಾನೆ. ಮೇ 1ರಂದು ಸರ್ಕಾರಿ ಕ್ವಾರಂಟೈನ್​ನಲ್ಲಿ ಇರಿಸಲಾಗಿತ್ತು. ಮೇ 16ರಂದು ಸೋಂಕು ತಗುಲಿರುವುದು ದೃಢಪಟ್ಟಿದ್ದು, ಕಿಮ್ಸ್ಗೆ ದಾಖಲಿಸಲಾಗಿದೆ.

    ಪಿ- 1142 ಪ್ರಯಾಣ ವಿವರ: 28 ವರ್ಷದ ಮಹಿಳೆ. ಮುಂಬೈ ನಿವಾಸಿ. ಮೇ 14ರಂದು ಬೆಳಗ್ಗೆ ಸ್ವಂತ ವಾಹನದಲ್ಲಿ ಪತಿ, ಮಗಳು ಹಾಗೂ ಚಾಲಕ ಸೇರಿ ನಾಲ್ವರೊಂದಿಗೆ ಹೊರಟು ಮಧ್ಯರಾತ್ರಿ 12 ಗಂಟೆಗೆ ನಿಪ್ಪಾಣಿ ಚೆಕ್​ಪೋಸ್ಟ್ ತಲುಪಿದ್ದರು. ಮೇ 15ರ ಬೆಳಗಿನಜಾವ 2.30ಕ್ಕೆ ಬೆಳಗಾವಿ ಬಳಿಯ ಪೆಟ್ರೋಲ್ ಬಂಕ್​ನಲ್ಲಿ ವಾಹನ ನಿಲ್ಲಿಸಿ ಬೆಳಗ್ಗೆ 5ರವರೆಗೆ ವಿಶ್ರಾಂತಿ ಪಡೆದಿದ್ದಾರೆ. ಅಲ್ಲಿಂದ ಹೊರಟು ಬೆಳಗ್ಗೆ 9ಕ್ಕೆ ಹುಬ್ಬಳ್ಳಿಗೆ ಆಗಮಿಸಿದ್ದಾರೆ. 10 ಗಂಟೆಗೆ ಧಾರವಾಡ ಆಸ್ಪತ್ರೆಯಲ್ಲಿ ಗಂಟಲ ದ್ರವ ಪರೀಕ್ಷೆಗೆ ಒಳಪಟ್ಟು, ಮಧ್ಯಾಹ್ನ 12 ಗಂಟೆಗೆ ನವನಗರದಲ್ಲಿನ ತಮ್ಮ ತಂದೆ ನಿವಾಸಕ್ಕೆ ತೆರಳಿದ್ದಾರೆ. ಮೇ 17ರಂದು ಸೋಂಕು ದೃಢಪಟ್ಟಿದ್ದು, ಕಿಮ್ಸ್​ಗೆ ದಾಖಲಿಸಲಾಗಿದೆ.

    ಪಿ-1143 ವಿವರ: 25 ವರ್ಷದ ಪುರುಷ. ಹುಬ್ಬಳ್ಳಿ ತಾಲೂಕು ಬೆಳಗಲಿ ಗ್ರಾಮದ ನಿವಾಸಿ. ನಂತರ ಮಾ. 9ರ ರಾತ್ರಿ 12.30ಕ್ಕೆ ಮಿರಜ್ ಎಕ್ಸ್​ಪ್ರೆಸ್ ಮೂಲಕ ಇಚಲಕರಂಜಿ ತಲುಪಿ, ಬಸ್ ಮೂಲಕ ಬೆಳಗ್ಗೆ 9.30ಕ್ಕೆ ಮರಕಜ್ ಮಸೀದಿಗೆ ತೆರಳಿ ಅಲ್ಲೇ ಉಳಿದು, ಮಾ. 12ರಂದು ಇಚಲಕರಂಜಿಯ ಫಾತಿಮಾ ಮಸೀದಿಗೆ, ಮಾ. 15ರಂದು ಟೆಂಪೋ ಮೂಲಕ ಅನಸ್ ಮಸೀದಿಗೆ ತೆರಳಿ 40 ದಿನ ಜಮಾತ್​ನಲ್ಲಿ ಭಾಗವಹಿಸಿದ್ದನು. ಲಾಕ್​ಡೌನ್ ಕಾರಣಕ್ಕೆ ಮೇ 15ರವರೆಗೂ ಅಲ್ಲೇ ವಾಸವಾಗಿದ್ದನು. ಮಸೀದಿಯವರು ವ್ಯವಸ್ಥೆ ಮಾಡಿದ್ದ ಟೆಂಪೋದಲ್ಲಿ ಇತರ 7 ಮಂದಿಯೊಂದಿಗೆ ಮೇ 16ರಂದು ಬೆಳಗ್ಗೆ ಹೊರಟು ಮಧ್ಯಾಹ್ನ ಧಾರವಾಡಕ್ಕೆ ಬಂದಿದ್ದಾನೆ. ಆತನನ್ನು ಕ್ವಾರಂಟೈನ್​ಗೆ ಒಳಪಡಿಸಿ ಮೂಗು ಮತ್ತು ಗಂಟಲ ದ್ರವ ಪರೀಕ್ಷೆಗೆ ಒಳಪಡಿಸಲಾಗಿತ್ತು. ಮೇ 17ರಂದು ಸೋಂಕು ದೃಢಪಟ್ಟಿದ್ದು, ಕಿಮ್ಸ್​ಗೆ ದಾಖಲಿಸಲಾಗಿದೆ.

    ಈ ವ್ಯಕ್ತಿಗಳ ಸಂಪರ್ಕಕ್ಕೆ ಬಂದ ಜನರಿಗೂ ಸೋಂಕು ತಗಲುವ ಸಾಧ್ಯತೆ ಇದೆ. ಅಂತಹ ವ್ಯಕ್ತಿಗಳು ಕೂಡಲೆ, ಸಹಾಯವಾಣಿ (1077)ಗೆ ಕರೆಮಾಡಿ ತಮ್ಮ ವಿವರಗಳನ್ನು ನೀಡಬೇಕು. ಇದಲ್ಲದೆ, ಸಮೀಪದ ಸರ್ಕಾರಿ ಆಸ್ಪತ್ರೆಗೆ ತೆರಳಿ ಪರೀಕ್ಷೆಗೆ ಒಳಪಡಬೇಕು ಎಂದು ಜಿಲ್ಲಾಡಳಿತ ಮನವಿ ಮಾಡಿದೆ.

    ಸಡಿಲಿಕೆ ಮಧ್ಯೆಯೂ ಕಟ್ಟುನಿಟ್ಟಿನ ಕ್ರಮ

    ಧಾರವಾಡ: ಲಾಕ್​ಡೌನ್ ಮಧ್ಯೆಯೂ ಅಂತಾರಾಜ್ಯ ಕಾರ್ವಿುಕರು ಹೋಗಲು ಬರಲು ವ್ಯವಸ್ಥೆ ಮಾಡಲಾಗಿದೆ. ಅನುಮತಿ ಸಿಕ್ಕ ನಂತರ ಜಿಲ್ಲೆಗೆ 1,180 ಜನರು ಹಾಗೂ ಕಾರ್ವಿುಕರು ಬಂದಿದ್ದಾರೆ. ಮಹಾರಾಷ್ಟ್ರದಿಂದ 561 ಜನ, ಗೋವಾದಿಂದ 268 ಹಾಗೂ ರಾಜಸ್ಥಾನ, ತಮಿಳುನಾಡು, ಕೇರಳ ಸೇರಿದಂತೆ ವಿವಿಧ ರಾಜ್ಯಗಳಿಂದ ಬಂದಿದ್ದಾರೆ. ಈ ಪೈಕಿ ಮಹಾರಾಷ್ಟ್ರದಿಂದ ಬಂದವರಲ್ಲಿ ಹೆಚ್ಚಿನ ಕರೊನಾ ಪಾಸಿಟಿವ್ ಪ್ರಕರಣ ಪತ್ತೆಯಾಗಿವೆ. ಲಾಕ್​ಡೌನ್ ಸಡಿಲಿಕೆ ಮಧ್ಯೆಯೂ ಕೋವಿಡ್ ನಿಯಂತ್ರಣಕ್ಕೆ ಜಿಲ್ಲಾಡಳಿತದಿಂದ ಅಗತ್ಯ ಕ್ರಮ ಮುಂದುವರಿಸಲಾಗುವುದು ಎಂದು ಜಿಲ್ಲಾಧಿಕಾರಿ ಜಗದೀಶ ಶೆಟ್ಟರ್ ಹೇಳಿದರು.

    ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಏರ್ಪಡಿಸಿದ್ದ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆಯ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

    ಜಿಲ್ಲೆಯಲ್ಲಿ ಇದುವರೆಗೆ 26 ಕರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. 7 ಜನ ಗುಣಮುಖರಾಗಿದ್ದು, 19 ಜನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದರು.

    ಜಿಲ್ಲೆಯಲ್ಲಿ ಶೇ. 40- 45ರಷ್ಟು ಕೈಗಾರಿಕೆಗಳು ಆರಂಭವಾಗಿವೆ. ಸ್ಥಗಿತಗೊಂಡಿದ್ದ ಕಾಮಗಾರಿಗಳನ್ನೂ ಮತ್ತೆ ಆರಂಭಿಸಲಾಗಿದೆ ಎಂದರು.

    ನಗರದ ರ್ಸಟ್ ಹೌಸ್​ನಲ್ಲಿ ಕೆಲವರು ಮದ್ಯದ ಪಾರ್ಟಿ ಮಾಡಿದ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಈ ಬಗ್ಗೆ ಅಧಿಕಾರಿಗಳಿಂದ ಪರಿಶೀಲಿಸಿ ಸೂಕ್ರ ಕ್ರಮ ಕೈಗೊಳ್ಳಲಾಗುವುದು ಎಂದರು.

    885 ಶಂಕಿತರು ಪತ್ತೆ

    ಧಾರವಾಡ: ನಗರದಲ್ಲಿ ನಿಗಾ ವಹಿಸುತ್ತಿರುವ ಜನರ ಸಂಖ್ಯೆಯ ಜತೆಗೆ ಕರೊನಾ ಸೋಂಕು ಶಂಕಿತರ ಸಂಖ್ಯೆಯೂ ದಿನದಿಂದ ದಿನಕ್ಕೆ ಹೆಚ್ಚುತ್ತಿರುವುದು ಆತಂಕಕಾರಿಯಾಗಿದೆ.

    ಜಿಲ್ಲೆಯಲ್ಲಿ ಸೋಮವಾರ ಸಂಜೆವರೆಗಿನ 24 ಗಂಟೆ ಅವಧಿಯಲ್ಲಿ 885 ಶಂಕಿತರು ಪತ್ತೆಯಾಗಿದ್ದು, ಅವರ ಗಂಟಲ ದ್ರವ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಭಾನುವಾರ ಇದ್ದ 9,187 ನಿಗಾ ವಹಿಸಿದವರ ಸಂಖ್ಯೆ ಸೋಮವಾರ 10,088ಕ್ಕೆ ಏರಿಕೆಯಾಗಿದೆ.

    ಈವರೆಗೆ ಜಿಲ್ಲೆಯಲ್ಲಿ 9,418 ಶಂಕಿತ ವ್ಯಕ್ತಿಗಳ ಗಂಟಲ ದ್ರವ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಿದ್ದು, 7,550 ಜನರ ವರದಿ ನೆಗೆಟಿವ್ ಬಂದಿವೆ. 26 ಪ್ರಕರಣದಲ್ಲಿ ಪಾಸಿಟಿವ್ ಬಂದಿದ್ದು, 19 ಜನರಿಗೆ ಕಿಮ್್ಸ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನೂ 1,849 ಜನರ ವರದಿ ಬರಬೇಕಿದೆ. ಭಾನುವಾರ ಬಾಕಿ ಇದ್ದ 1,193 ವರದಿಗಳ ಪೈಕಿ 656 ವರದಿಗಳು ನೆಗೆಟಿವ್ ಬಂದಿವೆ.

    ವೈರಸ್ ಭೀತಿ ಹಿನ್ನೆಲೆಯಲ್ಲಿ ಜಿಲ್ಲೆಯ ಆರೋಗ್ಯ ಇಲಾಖೆಯು ವಿದೇಶದಿಂದ ಆಗಮಿಸಿರುವ ಹಾಗೂ ಅವರ ಸಂಪರ್ಕಕ್ಕೆ ಒಳಗಾದ 10,088 ಜನರ ಮೇಲೆ ನಿಗಾ ಇಟ್ಟಿದೆ. ಈ ಪೈಕಿ 5,504 ಜನರು ಮನೆಯಲ್ಲೇ ಪ್ರತ್ಯೇಕವಾಗಿ (14 ದಿನ) ವಾಸವಾಗಿದ್ದಾರೆ. ಆಸ್ಪತ್ರೆ ಪ್ರತ್ಯೇಕ ವಾರ್ಡ್​ಗಳಲ್ಲಿ 20 ಜನ ದಾಖಲಾಗಿದ್ದಾರೆ. 2,783 ಜನರು 14 ದಿನಗಳ ಪ್ರತ್ಯೇಕ ವಾಸ ಪೂರ್ಣಗೊಳಿಸಿದ್ದರೆ, 1,781 ಜನರು 28 ದಿನಗಳ ಪ್ರತ್ಯೇಕ ವಾಸ ಪೂರ್ಣಗೊಳಿಸಿದ್ದಾರೆ ಎಂದು ಆರೋಗ್ಯ ಇಲಾಖೆ ಪ್ರಕಟಣೆ ತಿಳಿಸಿದೆ.

    ಹೋಂ ಕ್ವಾರಂಟೈನ್ ಉಲ್ಲಂಘಿಸಿದರೆ ಕಠಿಣ ಕ್ರಮ

    ಧಾರವಾಡ: ಕರೊನಾ ಸೋಂಕಿತರೊಂದಿಗೆ ದ್ವಿತೀಯ ಹಂತದ ಸಂಪರ್ಕ ಹೊಂದಿರುವ ಹಾಗೂ ರಾಜ್ಯದ ಇತರ ಜಿಲ್ಲೆಗಳಿಂದ ಆಗಮಿಸಿರುವ ಜನರನ್ನು ಹೋಂ ಕ್ವಾರಂಟೈನ್​ಗೆ ಒಳಪಡಿಸಲಾಗಿದೆ. ಆಧುನಿಕ ತಂತ್ರಜ್ಞಾನದ ಜಿಯೋ ಫೆನ್ಸಿಂಗ್ ಅಳವಡಿಸಿ ಈ ಜನರ ಮೇಲೆ ಕಣ್ಗಾವಲು ಇರಿಸಲಾಗಿದೆ. ಹೋಂ ಕ್ವಾರಂಟೈನ್ ನಿಯಮ ಉಲ್ಲಂಘಿಸಿ ಹೊರಬಂದರೆ ತಕ್ಷಣ ಮಾಹಿತಿ ಲಭ್ಯವಾಗುತ್ತಿದೆ. ಅಂತಹ ವ್ಯಕ್ತಿಗಳ ವಿರುದ್ಧ ಕ್ರಮ ಕೈಗೊಂಡು ಕಡ್ಡಾಯವಾಗಿ ಸರ್ಕಾರಿ ಸಾಂಸ್ಥಿಕ ಕ್ವಾರಂಟೈನ್​ಗೆ ಒಳಪಡಿಸಲಾಗುವುದು ಎಂದು ಜಿಲ್ಲಾಧಿಕಾರಿ ದೀಪಾ ಚೋಳನ್ ಎಚ್ಚರಿಕೆ ನೀಡಿದ್ದಾರೆ.

    ಹೋಂ ಕ್ವಾರಂಟೈನ್​ಗೆ ಒಳಪಟ್ಟಿರುವವರಲ್ಲಿ ಮೇ 14 ರಂದು 76, 15 ರಂದು 63, 16ರಂದು 65, 17ರಂದು 75 ಹಾಗೂ 18ರಂದು 74 ಸೇರಿ ಒಟ್ಟು 353 ಜನರು ಹೋಂ ಕ್ವಾರಂಟೈನ್ ಉಲ್ಲಂಘಿಸಿರುವುದು ದಾಖಲಾಗಿದೆ. ಅಂತಹ ವ್ಯಕ್ತಿಗಳನ್ನು ಪುನಃ ಸರ್ಕಾರದ 14 ದಿನಗಳ ಕ್ವಾರಂಟೈನ್​ಗೆ ಒಳಪಡಿಸಲಾಗುವುದು. ಕ್ವಾರಂಟೈನ್​ನಲ್ಲಿನ ವ್ಯಕ್ತಿಗಳು ಮನೆಗಳಿಂದ ಹೊರಬಂದರೆ ಸುತ್ತಮುತ್ತಲಿನ ಜನರು ಜಿಲ್ಲಾಡಳಿತದ ಸಹಾಯವಾಣಿ ಸಂಖ್ಯೆ 1,077ಕ್ಕೆ ಕರೆ ಮಾಡಿ ಮಾಹಿತಿ ನೀಡಬಹುದು.

    ಹೊರ ರಾಜ್ಯಗಳಿಂದ ಆಗಮಿಸುವ ಎಲ್ಲರೂ ಕಡ್ಡಾಯವಾಗಿ ಕೃಷಿ ವಿಶ್ವವಿದ್ಯಾಲಯ ಆವರಣದಲ್ಲಿ ಸ್ಥಾಪಿಸಿರುವ ನೋಂದಣಿ ಮತ್ತು ವೈದ್ಯಕೀಯ ತಪಾಸಣೆ ಕೇಂದ್ರಕ್ಕೆ ಭೇಟಿ ನೀಡಿ ಸರ್ಕಾರದ ಸಾಂಸ್ಥಿಕ ಕ್ವಾರಂಟೈನ್ ಅಥವಾ ಸ್ವಂತ ವೆಚ್ಚದಲ್ಲಿ ಹೋಟೆಲ್ ಕ್ವಾರಂಟೈನ್ ಆಯ್ದುಕೊಳ್ಳಬಹುದು. ಇದನ್ನು ಉಲ್ಲಂಘಿಸುವವರ ವಿರುದ್ಧ ಸಾಂಕ್ರಾಮಿಕ ರೋಗಗಳ ತಡೆ ಕಾಯ್ದೆಯಡಿ ಕ್ರಮ ಜರುಗಿಸಲಾಗುವುದು. ಜಿಲ್ಲೆಯ ಜನರು ತಮ್ಮ ಊರು, ಬಡಾವಣೆ, ಅಕ್ಕಪಕ್ಕದ ಮನೆಗಳಿಗೆ ಬೇರೆ ರಾಜ್ಯಗಳಿಂದ ಜನರು ಆಗಮಿಸಿದ್ದರೆ ಸಹಾಯವಾಣಿ ಅಥವಾ ವಾಟ್ಸ್​ಆಪ್ ಸಂಖ್ಯೆಗಳಾದ 9449847641/46 ಗೆ ಮಾಹಿತಿ ನೀಡಿ ಸಹಕರಿಸಬೇಕು. ಮಾಹಿತಿ ನೀಡುವವರ ಹೆಸರನ್ನು ಗೌಪ್ಯವಾಗಿ ಇಡಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

    ಸೀಲ್​ಡೌನ್ ಘೊಷಣೆ

    ಹುಬ್ಬಳ್ಳಿ: ಧಾರವಾಡ ಜಿಲ್ಲೆಯಲ್ಲಿ ಕರೊನಾ ಪತ್ತೆಯಾಗಿರುವ ವ್ಯಕ್ತಿಗಳ ಮನೆಯ 100 ಮೀ. ಸುತ್ತಳತೆ ಪ್ರದೇಶವನ್ನು ಸೀಲ್​ಡೌನ್ (ನಿಯಂತ್ರಿತ ವಲಯ) ಎಂದು ಘೊಷಿಸಿ ಅಪರ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ. 5 ಕಿ.ಮೀ. ವ್ಯಾಪ್ತಿಯನ್ನು ಬಫರ್ ಜೋನ್ ಮಾಡಲಾಗಿದೆ. ಅದರಲ್ಲಿ 1 ಕಿ.ಮೀ. ಸುತ್ತಳತೆ ಪ್ರದೇಶವನ್ನು ತೀವ್ರ ಬಫರ್ ಜೋನ್ ಎಂದು ಘೊಷಿಸಲಾಗಿದೆ. ಸ್ಥಳದಲ್ಲಿ ಕಮಾಂಡ್ ಕೇಂದ್ರ ಸ್ಥಾಪಿಸಿ, 24 ಗಂಟೆಯೂ ಲಾಕ್​ಡೌನ್ ಜಾರಿಯಲ್ಲಿಡಬೇಕು. ಅಲ್ಲಿಯ ಜನರ ನ್ಯಾಯೋಚಿತ ಅವಶ್ಯಕತೆಗಳನ್ನು ಈಡೇರಿಸಲು ಕ್ರಮ ಕೈಗೊಳ್ಳಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.

    ನವನಗರದ ಸೀಲ್​ಡೌನ್ ಪ್ರದೇಶಕ್ಕೆ ಆರ್.ಡಿ. ಕೊಕ್ಕಲಕಿ, ಹುಬ್ಬಳ್ಳಿ ಅಯೋಧ್ಯಾ ನಗರಕ್ಕೆ ಬಸವರಾಜ ಲಮಾಣಿ ಅವರನ್ನು ಘಟನಾ ಕಮಾಂಡರ್ ಎಂದು ನೇಮಿಸಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts