More

    ಸೋಂಕಿತರನ್ನು ಅವಮಾನಿಸಬೇಡಿ

    ಶಿಗ್ಗಾಂವಿ: ಕರೊನಾಕ್ಕೆ ಯಾರೂ ಭಯ ಪಡುವ ಅವಶ್ಯಕತೆಯಿಲ್ಲ. ಅದು ನೆಗಡಿಗಿಂತ ಸಣ್ಣ ಕಾಯಿಲೆ. ಯಾರೋ ಹೇಳಿದ ಮಾತುಗಳನ್ನು ನಂಬಿ ಸೋಂಕಿತರನ್ನು ಅವಮಾನಗೊಳಿಸಬೇಡಿ… ಇದು ಕರೊನಾದ ವಿರುದ್ಧ ಹೋರಾಡಿ ಗೆದ್ದು ಬಂದ ಶಿಗ್ಗಾಂವಿ ಪಟ್ಟಣದ ಪಿಗ್ಮಿ ಏಜೆಂಟ್ ಬಾಹುಬಲಿ ಬಳಿಗಾರ ಅವರ ಮಾತು.
    ಕರೊನಾ ವೈರಾಣು ವಿರುದ್ಧ ಹೋರಾಟ ಮಾಡಿ ಗೆದ್ದ ತಮ್ಮ ಅನುಭವವನ್ನು ಅವರು ‘ವಿಜಯವಾಣಿ’ ಜತೆ ಹಂಚಿಕೊಂಡಿದ್ದಾರೆ. ಕರೊನಾಕ್ಕೆ ಜಿಲ್ಲಾಸ್ಪತ್ರೆಯಲ್ಲಿ ಉತ್ತಮ ಚಿಕಿತ್ಸೆ ಸಿಗುತ್ತಿದೆ. ಯಾರೂ ಕರೊನಾ ಬಂದ್ರೆ ನಾವು ಬದುಕಲ್ಲ. ಅದೊಂದು ಬಹುದೊಡ್ಡ ವೈರಸ್ ಎಂಬ ಗೊಂದಲವನ್ನು ಮನಸ್ಸಿನಿಂದ ತೆಗೆದುಹಾಕಬೇಕು. ನನ್ನ ಸಹೋದರನಿಗೆ ಸೋಂಕು ಬಂದ ಹಿನ್ನೆಲೆಯಲ್ಲಿ ನನ್ನನ್ನು ಜೂ. 23ರಂದು ಜೇಕಿನಕಟ್ಟಿ ವಸತಿ ನಿಲಯದಲ್ಲಿ ಕ್ವಾರಂಟೈನ್ ಮಾಡಲಾಗಿತ್ತು. ಜು. 3ರಂದು ಪಾಸಿಟಿವ್ ಬಂದಿದ್ದರಿಂದ ಜಿಲ್ಲಾಸ್ಪತ್ರೆಗೆ ಸಾಗಿಸಿದರು. ನನಗೆ ಕರೊನಾದ ಯಾವುದೇ ಲಕ್ಷಣಗಳು ಇರಲಿಲ್ಲ. ಆದರೂ ಆರು ದಿನಗಳ ಕಾಲ ಆಸ್ಪತ್ರೆಯಲ್ಲಿದ್ದೆ. ಅಲ್ಲಿ ಉತ್ತಮ ಊಟ, ವಿಟಾಮಿನ್ ಮಾತ್ರೆಗಳನ್ನು ಕೊಟ್ಟರು. ಆರು ದಿನಗಳ ನಂತರ ನೆಗೆಟಿವ್ ವರದಿ ಬಂತು. ಆಸ್ಪತ್ರೆಯಿಂದ ಬಿಡುಗಡೆಗೊಂಡೆ. ಜೇಕಿನಕಟ್ಟಿ ಕ್ವಾರಂಟೈನ್ ಕೇಂದ್ರದಲ್ಲಿರುವವರಿಗೆ ಊಟ ಹಾಗೂ ಬಿಸಿನೀರಿನ ವ್ಯವಸ್ಥೆ ಸರಿಯಿಲ್ಲ. ಅದನ್ನು ಜಿಲ್ಲಾಡಳಿತ ಸರಿಪಡಿಸಬೇಕು.

    ಅನಾವಶ್ಯಕ ವದಂತಿಗೆ ಬೇಸರ: ನನ್ನ ಪ್ರಕಾರ ಕರೊನಾ ಎಂಬುದು ಬಹುದೊಡ್ಡ ಕಾಯಿಲೆಯೇ ಅಲ್ಲ. ನನಗೆ ಯಾವುದೇ ತೊಂದರೆಯನ್ನು ಕರೊನಾ ಮಾಡಿಲ್ಲ. ಆದರೆ, ಪಾಸಿಟಿವ್ ಬಂದಿದೆ ಎಂಬ ಕಾರಣಕ್ಕೆ ಅನಾವಶ್ಯಕ ವದಂತಿಗಳನ್ನು ಅನೇಕರು ಹಬ್ಬಿಸಿದರು. ಮನಸ್ಸಿಗೆ ನೋವಾಗುವ ರೀತಿ ಮಾತನಾಡಿದರು. ನಾನು ಕ್ವಾರಂಟೈನ್ ಹಾಗೂ ಆಸ್ಪತ್ರೆಯಲ್ಲಿದ್ದಾಗ ನನ್ನ ಬಗ್ಗೆ ಏನೇನೋ ಮಾತನಾಡಿಕೊಂಡರು. ಕರೊನಾಕ್ಕಿಂತ ಅದೇ ನನಗೆ ಹೆಚ್ಚಿನ ನೋವು ಕೊಟ್ಟಿತು. ಎಷ್ಟೇ ಜಾಗೃತಿ ವಹಿಸಿದರೂ ಯಾವುದೋ ಮೂಲದಿಂದ ಕರೊನಾ ಬರಬಹುದು. ಅದಕ್ಕೆ ಸೋಂಕು ಬಂದವರು ಕಾರಣವಾಗುವುದಿಲ್ಲ. ದೃಶ್ಯ ಮಾಧ್ಯಮಗಳಲ್ಲಿ ಕರೊನಾ ಕುರಿತು ಜಾಗೃತಿ ಮೂಡಿಸುವ ಸುದ್ದಿ ಪ್ರಸಾರ ಮಾಡಬೇಕು. ಭಯ ಮೂಡಿಸುವ ಸುದ್ದಿಗಳಿಗೆ ಬ್ರೇಕ್ ಹಾಕಬೇಕು ಎಂದು ಸರ್ಕಾರವನ್ನು ವಿನಂತಿಸುತ್ತೇನೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts