More

    ಸೊರಬ ಜೆಡಿಎಸ್ ಭಿನ್ನಮತ ಶಮನ ಯತ್ನ; ಜಿಲ್ಲಾ ಪ್ರಮುಖರಿಂದ ಎರಡೂ ಬಣದ ಪ್ರತ್ಯೇಕ ಸಭೆ

    ಸೊರಬ: ಜೆಡಿಎಸ್ ತಾಲೂಕು ಘಟಕದಲ್ಲಿ ಉಲ್ಬಣಗೊಂಡಿರುವ ಭಿನ್ನಮತ ಶಮನಕ್ಕೆ ಪಕ್ಷದ ಜಿಲ್ಲಾ ಪ್ರಮುಖರು ಪ್ರಯತ್ನ ನಡೆಸಿದ್ದು, ಶುಕ್ರವಾರ ಸೊರಬದಲ್ಲಿ ಉಭಯ ಬಣಗಳ ಪ್ರತ್ಯೇಕ ಸಭೆ ನಡೆಸಿದರು. ಎರಡೂ ಬಣಗಳಿಂದ ಅಹವಾಲು ಆಲಿಸಿ ಜನವರಿ 7ರಂದು ಜಿಲ್ಲೆಗೆ ಆಗಮಿಸುತ್ತಿರುವ ಪಕ್ಷದ ರಾಜ್ಯಾಧ್ಯಕ್ಷರು ಹಾಗೂ ವರಿಷ್ಠರಿಗೆ ಮಾಹಿತಿ ನೀಡಲು ನಿರ್ಧರಿಸಿದ್ದಾರೆ.
    ಸೊರಬಕ್ಕೆ ಆಗಮಿಸಿದ್ದ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಗೀತಾ ಸತೀಶ್, ಜಿಲ್ಲಾ ಕಾರ್ಯಾಧ್ಯಕ್ಷ ರಾಮಕೃಷ್ಣ ನೇತೃತ್ವದಲ್ಲಿ ವಿವಿಧ ಪದಾಧಿಕಾರಿಗಳು ಮೊದಲಿಗೆ ನೂತನ ಜೆಡಿಎಸ್ ಅಧ್ಯಕ್ಷ ಹುಚ್ಚಪ್ಪ ಚಿಮಣೂರು ಬಣವನ್ನು ಪ್ರವಾಸಿ ಮಂದಿರದಲ್ಲಿ ಭೇಟಿ ಮಾಡಿ ಅಹವಾಲು ಸ್ವೀಕರಿಸಿದರು. ನಂತರ ಪಟ್ಟಣದ ಜೆಡಿಎಸ್ ಕಾರ್ಯಾಲಯದಲ್ಲಿ ಎಂ.ಶಿವಪ್ಪ ದ್ವಾರಹಳ್ಳಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಅಹವಾಲು ಸ್ವೀಕರಿಸಿದರು.
    ತಾಲೂಕಿನ ಜೆಡಿಎಸ್‌ನಲ್ಲಿ ಕಾರ್ಯಕರ್ತರ ನಡುವೆ ಭಿನ್ನಾಬಿಪ್ರಾಯ ಇದೆಯೇ ಹೊರತು ಭಿನ್ನಮತವಿಲ್ಲ. ಇದು ಶೀಘ್ರದಲ್ಲಿಯೇ ಶಮನಗೊಳ್ಳಲಿದೆ. ಹುಚ್ಚಪ್ಪ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿಯೂ ಕೆ.ಅಜ್ಜಪ್ಪ ಅವರು ಹಾಗೂ ಹುಚ್ಚಪ್ಪ ಪಕ್ಷ ಸಂಘಟನೆಗೆ ಹೆಚ್ಚಿನ ಒತ್ತು ನೀಡಬೇಕೆಂದು ಹೇಳಿದ್ದಲ್ಲದೇ ಬಾಸೂರು ಚಂದ್ರೇಗೌಡ ಅವರನ್ನು ಅಭ್ಯರ್ಥಿಯನ್ನಾಗಿ ಮಾಡಿದರೆ ತಮ್ಮ ಅಭ್ಯಂತರವಿಲ್ಲ ಎಂದಿದ್ದಾರೆ. ಯಾರೂ ಕೂಡ ಗೊಂದಲಕ್ಕೊಳಗಾಗದೆ ಇಲ್ಲಿನ ಭಿನ್ನಾಭಿಪ್ರಾಯದ ಬಗ್ಗೆ ವರಿಷ್ಠರಿಗೆ ಲಭ್ಯವಾಗಿರುವ ಮಾಹಿತಿ ನೀಡಲಾಗುವುದು ಎಂದು ರಾಮಕೃಷ್ಣ ಹೇಳಿದರು.
    ಅತಿ ಹೆಚ್ಚು ಸದಸ್ಯತ್ವ ನೋಂದಣಿ: ಮಧು ಬಂಗಾರಪ್ಪ ಅವರು ಜೆಡಿಎಸ್ ತೊರೆಯುವ ಸಂದರ್ಭದಲ್ಲಿ ಎಲ್ಲಾ ಕಾರ್ಯಕರ್ತರನ್ನು ತಮ್ಮೊಂದಿಗೆ ಬಳಿ ಕರೆದುಕೊಂಡು ಹೋಗಿದ್ದರು. ನಂತರದಲ್ಲಿ ನಾವು ತಾಲೂಕಿನಲ್ಲಿ ಪ್ರವಾಹ, ಬೆಳೆವಿಮೆ, ಬೆಳೆ ಪರಿಹಾರ ಹೀಗೆ ಹತ್ತು ಹಲವು ಜನಪರ ಕಾರ್ಯಕ್ರಮಗಳನ್ನು ಹಾಕಿಕೊಂಡು ಹೋರಾಟ ಮಾಡಿ ಪಕ್ಷ ಸಂಘಟನೆ ಮಾಡಿದ್ದೇವೆ. ಜತೆಗೆ ಪಕ್ಷದ ಸದಸ್ಯತ್ವ ನೋಂದಣಿ ಕೂಡ ಹೆಚ್ಚು ಮಾಡಿದ್ದೇವೆ. ರಾಜ್ಯದಲ್ಲಿ ಮಿಷನ್ 123 ಮಿಷನ್ ಅಡಿಯಲ್ಲಿ ಸೊರಬ ಕ್ಷೇತ್ರಕ್ಕೆ ನನ್ನ ಹೆಸರು ಮೊದಲ ಸುತ್ತಿನಲ್ಲಿತ್ತು ಎಂದು ತಾಲೂಕು ಮುಖಂಡ ಬಾಸೂರು ಚಂದ್ರೇಗೌಡ ಹೇಳಿದರು.
    ಶೂನ್ಯದಿಂದ ಸಂಘಟನೆ: ಬಾಸೂರು ಚಂದ್ರೇಗೌಡ್ರು ಹಾಗೂ ನಾನು ಎಲ್ಲ ಜನಾಂಗದವರನ್ನು ಒಗ್ಗೂಡಿಸಿಕೊಂಡು ಪಕ್ಷ ಸಂಘಟನೆ ಮಾಡುತ್ತ ಶೂನ್ಯದಲ್ಲಿದ್ದ ಜೆಡಿಎಸ್ ಪಕ್ಷವನ್ನು ತಾಲೂಕಿನಲ್ಲಿ ಗಟ್ಟಿಯಾಗಿ ನಿಲ್ಲಿಸಿದ್ದೇವೆ. ನಾವೆಂದಿಗೂ ಅಧಿಕಾರ ಬಯಸಿದವರಲ್ಲ. ಪಕ್ಷದ ವರಿಷ್ಠರೇ ನಮ್ಮನ್ನು ಆಯ್ಕೆ ಮಾಡಿದ್ದಾರೆ. ಆದರೆ ದಿಢೀರನೆ ನಮಗೆ ಯಾವುದೇ ಮಾಹಿತಿ ನೀಡದೆ ಹೊಸ ಅಧ್ಯಕ್ಷರನ್ನು ಆಯ್ಕೆ ಮಾಡಿದ್ದಾರೆ. ನಾನೂ ಸಹ ಅಧ್ಯಕ್ಷರಾಗಿ ಪಕ್ಷ ಸಂಘಟನೆಯಲ್ಲಿ ಈಗಲೂ ಕಾರ್ಯಪ್ರವೃತ್ತನಾಗುತ್ತೇನೆ ಎಂದು ತಾಲೂಕು ಅಧ್ಯಕ್ಷ ಎಂ.ಶಿವಪ್ಪ ದ್ವಾರಹಳ್ಳಿ ಹೇಳಿದರು.
    ಎರಡು ಸಭೆ ಮಾಡಿದ್ದಕ್ಕೆ ಕಿಡಿ: ಬಿನ್ನಾಭಿಪ್ರಾಯ ಸರಿಪಡಿಸಲು ಬಂದಿರುವ ತಾವು, ಎಲ್ಲರನ್ನು ಒಟ್ಟಾಗಿ ಕೂರಿಸಿ ಒಂದು ಸಭೆ ಮಾಡುವ ಬದಲು ಎರಡೆರೆಡು ಸಭೆ ಮಾಡಿದ್ದೀರಿ ಎಂದು ಸಭೆಯಲ್ಲಿದ್ದ ಅಲ್ಪಸಂಖ್ಯಾತ ಘಟಕ ಅಧ್ಯಕ್ಷ ಅಬ್ದುಲ್ ಅಜೀಜ್, ಆನಂದ ದ್ಯಾವಾಸ ಅವರು ಜಿಲ್ಲಾ ಸಮಿತಿ ಮುಖಂಡರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts