More

    ಸೊರಬದಲ್ಲಿ ಕೇತ್ರದಲ್ಲಿ ಅಭಿವೃದ್ಧಿ ಕೆಲಸ ಸಹಿಸಲಾಗದೆ ಗೊಂದಲ ಸೃಷ್ಟಿ; ಶಾಸಕರ ತೇಜೋವಧೆ ಮೂಲಕ ಪ್ರಧಾನಿ ಮೋದಿಗೆ ಅಗೌರವ: ಕುಮಾರ್ ಬಂಗಾರಪ್ಪ ಅಭಿಮಾನಿ ಬಳಗ ಬೇಸರ

    ಸೊರಬ: ಕ್ಷೇತ್ರದಲ್ಲಿ ಶಾಸಕ ಕುಮಾರ್ ಬಂಗಾರಪ್ಪ ಕೈಗೊಂಡ ಅಭಿವೃದ್ಧಿ ಕಾರ್ಯಗಳನ್ನು ಸಹಿಸದೆ ಗೊಂದಲ ಸೃಷ್ಟಿ ಮಾಡಲಾಗುತ್ತಿದೆ ಎಂದು ಪುರಸಭೆ ಸದಸ್ಯ ಹಾಗೂ ಕುಮಾರ್ ಬಂಗಾರಪ್ಪ ಅಭಿಮಾನಿ ಬಳಗದ ಮುಖಂಡ ಎಂ.ಡಿ.ಉಮೇಶ್ ಹೇಳಿದರು.
    ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮ ದಿನವನ್ನು ದೇಶಾದ್ಯಂತ ಸೇವಾ ಕಾರ್ಯಗಳನ್ನು ಕೈಗೊಳ್ಳುವ ಮೂಲಕ ಬಿಜೆಪಿ ಕಾರ್ಯಕರ್ತರು ಆಚರಿಸುತ್ತಿದ್ದಾರೆ. ಆದರೆ ಸೊರಬದಲ್ಲಿ ನಮೋ ವೇದಿಕೆಯನ್ನು ಸೃಷ್ಟಿಸಿಕೊಂಡು ಪ್ರಧಾನಿ ಜನ್ಮದಿನಾಚರಣೆ ಕಾರ್ಯಕ್ರಮವನ್ನು ಬಿಜೆಪಿಯವರೇ ಆದ ಶಾಸಕರ ವೈಯಕ್ತಿಕ ತೇಜೋವಧೆಗೆ ಬಳಕೆ ಮಾಡಿಕೊಳ್ಳುವ ಮೂಲಕ ಜಗತ್ತೇ ಮೆಚ್ಚಿದ ಪ್ರಧಾನಿ ಅವರಿಗೆ ಅಗೌರವ ಸೂಚಿಸುತ್ತಿದ್ದಾರೆ ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ಬೇಸರ ವ್ಯಕ್ತಪಡಿಸಿದರು.
    ಸ್ಥಳೀಯ ಸಂಸ್ಥೆ ಚುನಾವಣೆಯಲ್ಲೂ ಗೆಲ್ಲಲು ಸಾಧ್ಯವಾಗದೆ ಬಿ.ಎಸ್.ಯಡಿಯೂರಪ್ಪ ಅವರ ಆಶೀರ್ವಾದಿಂದ ಹಿಂಬಾಗಿಲ ಮೂಲಕ ಅಧಿಕಾರ ಹಿಡಿದ ಪದ್ಮನಾಭ್ ಭಟ್ ಅವರಿಗೆ ಜನರಿಂದ ನಾಲ್ಕು ಬಾರಿ ಆಯ್ಕೆಯಾದ ಶಾಸಕರ ಬಗ್ಗೆ ಮಾತನಾಡುವ ಯಾವುದೇ ನೈತಿಕತೆ ಇಲ್ಲ. ಹಿರಿಯರಾದವರು ಸಮಾಜಕ್ಕೆ ಉತ್ತಮ ಸಂದೇಶಗಳನ್ನು ನೀಡಬೇಕು. ವಯಸ್ಸಾದ ಮೇಲೆ ಅರಳು ಮರುಳು ಎನ್ನುವಂತೆ ಪದ್ಮನಾಭ್ ಅವರಿಗೆ ಜ್ಞಾಪಕ ಶಕ್ತಿ ಕೊರತೆ ಮತ್ತು ಕೆಲವರು ಹೇಳಿಕೊಟ್ಟಿದ್ದನ್ನು ಹೇಳಿದ್ದಾರೆ. ಅವರು ಮಾತುಗಳಲ್ಲಿ ಹಿಡಿತ ಸಾಧಿಸಬೇಕು. ಇಲ್ಲವಾದಲ್ಲಿ ಅವರ ಮನೆಗೆ ಮುತ್ತಿಗೆ ಹಾಕಿ ಪ್ರತಿಭಟಿಸಲಾಗುವುದು ಎಂದು ಎಚ್ಚರಿಸಿದರು.
    ನಮೋ ವೇದಿಕೆಯ ಪಾಣಿ ರಾಜಪ್ಪ ಅವರು ಜಿಪಂ ಉಪಾಧ್ಯಕ್ಷರಾದ ಸಂದರ್ಭದಲ್ಲಿ ಕಿಂಚಿತ್ತೂ ಅಭಿವೃದ್ಧಿ ಕಾರ್ಯಗಳನ್ನು ಮಾಡಲಿಲ್ಲ. ಸರ್ಕಾರದ ಅನುದಾನ ಬಳಸಿಕೊಳ್ಳದೆ ಅಧಿಕಾರವನ್ನು ಅನುಭವಿಸಿದ್ದು ಇಡೀ ತಾಲೂಕಿಗೆ ತಿಳಿದಿದೆ. ಚಂದ್ರಗುತ್ತಿ ಕ್ಷೇತ್ರದಲ್ಲಿ ಪಾಣಿ ರಾಜಪ್ಪ ಅವರ ಅಭಿವೃದ್ಧಿ ಕಾರ್ಯಗಳನ್ನು ಗಮನಿಸಬಹುದು ಎಂದು ವ್ಯಂಗ್ಯವಾಡಿದರು.
    ಕುಮಾರ್ ಬಂಗಾರಪ್ಪ ಅವರು ಕ್ಷೇತ್ರದಲ್ಲಿ 1,500 ಕೋಟಿ ರೂ. ಅನುದಾನದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದ್ದಾರೆ. ಹಿಂದುಳಿದ ವರ್ಗಗಳ ನಾಯಕರಾಗಿ ನಾರಾಯಣಗುರು ವಸತಿ ಶಾಲೆ, ಆರ್ಯ ಈಡಿಗ ಭವನಕ್ಕೆ 12 ಕೋಟಿ ರೂ. ಅನುದಾನ ಸೇರಿದಂತೆ ಎಲ್ಲ ಸಮುದಾಯಗಳ ನಾಯಕರಾಗಿದ್ದಾರೆ. ಕ್ಷೇತ್ರದಲ್ಲಿ ವಿವಿಧ ಸಮಿತಿಗಳಿಗೆ ಹುದ್ದೆ ದೊರೆಯದ ಕೆಲವರು ಕಟ್ಟಿಕೊಂಡ ತಂಡವೇ ನಮೋ ವೇದಿಕೆಯಾಗಿದೆ. ಈ ಹಿಂದಿನ ಬಿಜೆಪಿ ಶಾಸಕರಿಗೂ ಇದೇ ಗುಂಪು ತೊಂದರೆ ನೀಡಿರುವುದು ಕ್ಷೇತ್ರದ ಜನತೆಗೆ ಅರಿವಿದೆ. ಈ ಬಗ್ಗೆ ಪಕ್ಷದ ಜಿಲ್ಲಾ ಸಮಿತಿಯ ಗಮನಕ್ಕೆ ತರುವುದಾಗಿ ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts