More

    ಸೈಬರ್ ವಂಚಕರ ಬಗ್ಗೆ ಇರಲಿ ಎಚ್ಚರ- ಡಿವೈಎಸ್ಪಿ ಮಲ್ಲೇಶ್ ದೊಡ್ಡಮನಿ ಸಲಹೆ

    ದಾವಣಗೆರೆ: ನಾವು ಎಷ್ಟೇ ಉನ್ನತ ವ್ಯಾಸಂಗ ಮಾಡಿದರೂ ಸೈಬರ್ ವಂಚಕರ ವಿಚಾರದಲ್ಲಿ ಜಾಗರೂಕರಾಗಿರಬೇಕು ಎಂದು ನಗರ ಡಿವೈಎಸ್ಪಿ ಮಲ್ಲೇಶ್ ದೊಡ್ಡಮನಿ ಸಲಹೆ ನೀಡಿದರು.
    ಜಯದೇವ ವೃತ್ತದಲ್ಲಿ ಕರ್ಣಾಟಕ ಬ್ಯಾಂಕ್ ಶಾಖೆಯಿಂದ ಶುಕ್ರವಾರ ಹಮ್ಮಿಕೊಂಡಿದ್ದ ಆರ್ಥಿಕ ಸಾಕ್ಷರತೆ ಮತ್ತು ಸೈಬರ್ ಅಪರಾಧದ ಅರಿವು ಕುರಿತ ಜಾಗೃತಿ ಜಾಥಾ ಉದ್ಘಾಟಿಸಿ ಮಾತನಾಡಿದರು.
    ಎಷ್ಟೇ ವಿದ್ಯಾವಂತರಾಗಿದ್ದರೂ ಕೆಲ ವಿಷಯಗಳ ಬಗ್ಗೆ ಅರಿವು ಇಲ್ಲವಾದಲ್ಲಿ ಬದುಕಿನಲ್ಲಿ ಸಮಸ್ಯೆ ಎದುರಿಸಬೇಕಾಗುತ್ತದೆ. ಎಸ್ಸೆಸ್ಸೆಲ್ಸಿ ಅನುತ್ತೀರ್ಣನಾದವನೊಬ್ಬ ಉತ್ತರ ಭಾರತ ಅಥವಾ ದೇಶದ ಯಾವುದೋ ಮೂಲೆಯಲ್ಲಿ ಕುಳಿತು ನಮ್ಮನ್ನು ಆನ್‌ಲೈನ್‌ನಲ್ಲಿ ವಂಚಿಸಬಹುದು. ಹಾಗಾಗಿ ಸೈಬರ್ ಅಪರಾಧ ವಿಚಾರದಲ್ಲಿ ಅರಿವು ಮುಖ್ಯ ಎಂದು ಸಲಹೆ ನೀಡಿದರು.
    ಜಾಗೃತಿ ಕೊರತೆಯಿಂದಾಗಿ ವಂಚನೆಗೆ ಒಳಗಾಗುವ ಸಾಧ್ಯತೆ ಇದೆ. ಕರ್ಣಾಟಕ ಬ್ಯಾಂಕ್ ಈ ಸಂಬಂಧ ಜಾಗೃತಿ ಜಾಥಾ ಹಮ್ಮಿಕೊಂಡಿರುವುದು ಗಮನಾರ್ಹ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
    ಬೆಂಗಳೂರು ಸಿಸಿಬಿ ವಿಭಾಗದಲ್ಲಿ ಕರ್ತವ್ಯ ನಿರ್ವಹಣೆ ಅವಧಿಯಲ್ಲಿ ನಡೆದಿದ್ದ ಪ್ರಕರಣವೊಂದನ್ನು ಉದಾಹರಿಸಿದರು. ಬ್ಯಾಂಕ್ ಎಟಿಎಂಗೆ ಬೆಳಗ್ಗೆ ಹಾಕಿದ್ದ 10 ಲಕ್ಷ ರೂ. ಕಳವಾಗಿತ್ತು. ಬ್ಯಾಂಕ್ ವ್ಯವಸ್ಥಾಪಕ, ಉಪ ವ್ಯವಸ್ಥಾಪಕ, ಕ್ಯಾಷಿಯರ್, ಭದ್ರತಾ ಸಿಬ್ಬಂದಿ ಮೇಲೆ ಅನುಮಾನವಿತ್ತು. ಭದ್ರತಾ ಸಿಬ್ಬಂದಿ, ಬ್ಯಾಂಕ್ ವ್ಯವಸ್ಥಾಪಕರು ಪುಸ್ತಕದಲ್ಲಿ ಎಟಿಎಂ ಪಾಸ್‌ವರ್ಡ್ ಬರೆದಿಟ್ಟುಕೊಂಡಿದ್ದನ್ನು ಕಂಡು ಕಳವು ಮಾಡಿದ್ದು ಒಂದೂವರೆ ವರ್ಷದ ಬಳಿಕ ತನಿಖೆಯಿಂದ ದೃಢವಾಯಿತು. ಎಚ್ಚರಿಕೆ ವಹಿಸಿದ್ದರೆ ಇದು ಆಗುತ್ತಿರಲಿಲ್ಲ. ಬ್ಯಾಂಕ್ ಸಿಬ್ಬಂದಿ ಸೇರಿ ಸಾರ್ವಜನಿಕರೂ ಜಾಗೃತರಾಗಿರುವುದು ಮುಖ್ಯ ಎಂದು ಹೇಳಿದರು.
    ಶಿವಮೊಗ್ಗ ಪ್ರಾದೇಶಿಕ ಕಚೇರಿಯ ಸಹಾಯಕ ಪ್ರಧಾನ ವ್ಯವಸ್ಥಾಪಕ ಬಿ.ವಿ. ಹಯವದನ ಉಪಾಧ್ಯಾಯ ಮಾತನಾಡಿ, ಕರ್ನಾಟಕ ಬ್ಯಾಂಕ್ 100 ವರ್ಷದ ಹೊಸ್ತಿಲಲ್ಲಿದೆ. ಬ್ಯಾಂಕಿನ ಲಾಭಾಂಶದಲ್ಲಿ ಶೇ 2 ರಷ್ಟನ್ನು ಸಮಾಜಮುಖಿ ಕಾರ್ಯಗಳಿಗೆ ಬಳಸುತ್ತಿದೆ ಎಂದು ತಿಳಿಸಿದರು.
    ಪ್ರಾಸ್ತಾವಿಕವಾಗಿ ಮಾತನಾಡಿದ ಬ್ಯಾಂಕ್‌ನ ಸಂಜೀವಕುಮಾರ್, ಇದು ತಂತ್ರಾಂಶದ ಜಗತ್ತು. ಮೊಬೈಲ್ ಬ್ಯಾಂಕಿಂಗ್, ಇಂಟರ್ನೆಟ್ ಬ್ಯಾಂಕಿಂಗ್ ಸೇರಿ ಎಲ್ಲೆಡೆ ತಂತ್ರಜ್ಞಾನ ಬಂದಿದೆ. ಹಾಗೆಯೇ ವಂಚನೆಯೂ ಹೆಚ್ಚಾಗುತ್ತಿದೆ. ಈ ಬಗ್ಗೆ ಜಾಗೃತಿ ಅಗತ್ಯ. ಹಾಗಾಗಿ ಬ್ಯಾಂಕ್‌ನಿಂದ ಆರ್ಥಿಕ ಸಾಕ್ಷರತೆ ಮತ್ತು ಸೈಬರ್ ಅಪರಾಧದ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ. ಶಾಲಾಕಾಲೇಜಗಳಲ್ಲಿ ಈಗಾಗಲೇ ಹಲವು ಜಾಗೃತಿ ಕಾರ್ಯಕ್ರಮ ನಡೆಸಲಾಗಿದೆ ಎಂದರು.
    ಬ್ಯಾಂಕ್‌ನ ವಿವಿಧ ಶಾಖೆಗಳ ಅಧಿಕಾರಿಗಳಾದ ಗಣೇಶ್ ಕುಮಾರ್, ನಾಗಭೂಷಣ್, ಜಯಂತ್, ಬ್ಯಾಂಕ್ ಸಿಬ್ಬಂದಿ ಹಾಗೂ ಪೊಲೀಸರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts