More

    ಸೇತುವೆ ಎತ್ತರವಾಗಿ ನಿರ್ಮಿಸಲು ಒತ್ತಾಯ

    ಹನೂರು: ಗ್ರಾಮದಿಂದ ಬಿ.ಎಂ ಹಳ್ಳಿ (ಗುಳ್ಯ) ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಮಾರ್ಗಮಧ್ಯೆಯ ತಟ್ಟೆಹಳ್ಳ ಕಿರು ಸೇತುವೆಯನ್ನು ಎತ್ತರವಾಗಿ ನಿರ್ಮಿಸುವಂತೆ ಒತ್ತಾಯಿಸಿ ಭಾನುವಾರ ತಾಲೂಕಿನ ಭೈರನತ್ತ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.
    ಗ್ರಾಮದಿಂದ ಗುಳ್ಯ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಮಾರ್ಗಮಧ್ಯೆ ತಟ್ಟೆಹಳ್ಳವಿದ್ದು, ಮಳೆಗಾಲದಲ್ಲಿ ಹೆಚ್ಚು ನೀರು ಹರಿಯುತ್ತಿತ್ತು. ಇದರಿಂದ ಸಂಚಾರಕ್ಕೆ ತೊಂದರೆಯಾಗಿತ್ತು. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತರಲಾಗಿತ್ತು. ಬಳಿಕ ತಟ್ಟೆಹಳ್ಳಕ್ಕೆ ಅಡ್ಡಲಾಗಿ ಕಿರು ಸೇತುವೆ ನಿರ್ಮಿಸಲಾಗಿತ್ತು. ಆದರೆ ಪೈಪ್ (ತೂಬು) ಅಳವಡಿಸಿಲ್ಲ. 2 ವರ್ಷದಿಂದ ಇತ್ತೀಚೆಗೆ ಸೇತುವೆ ಶಿಥಿಲಗೊಂಡಿದೆ. ಹಾಗಾಗಿ ನೀರು ಸರಾಗವಾಗಿ ಹರಿಯಲು ಸಾಧ್ಯವಾಗುತ್ತಿಲ್ಲ. ಪರಿಣಾಮ ಮಳೆಗಾಲದ ವೇಳೆ ನೀರು ಕಿರು ಸೇತುವೆಯ ಬಳಿ ಸಂಗ್ರಹಗೊಂಡು ಸಂಚರಿಸುವ ರಸ್ತೆಯ ಮೇಲೆ ಹರಿಯುತ್ತದೆ. ಇದರಿಂದ ಗ್ರಾಮಸ್ಥರು ನಿತ್ಯ ತೊಂದರೆ ಅನುಭವಿಸಬೇಕಿದೆ ಎಂದು ದೂರಿದರು.
    ಕಳೆದ 4 ತಿಂಗಳ ಅವಧಿಯಲ್ಲಿ ನಾಲ್ಕೈದು ಜನ ಬಿದ್ದು ಗಾಯಗೊಂಡಿದ್ದಾರೆ. ಸೇತುವೆ ದುರಸ್ತಿಗೆ ಸಂಬಂಧಪಟ್ಟ ಅಧಿಕಾರಿಗಳಿಗೆ 2 ವರ್ಷದಿಂದ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. 4 ತಿಂಗಳ ಹಿಂದೆ ನಡೆದ ಗ್ರಾಮ ವಾಸ್ತವ್ಯದ ವೇಳೆ ತಹಸೀಲ್ದಾರ್‌ಗೂ ಮನವಿ ಸಲ್ಲಿಸಲಾಗಿತ್ತು. ಈ ಬಗ್ಗೆ ಅಗತ್ಯ ಕ್ರಮಕೈಗೊಳ್ಳುವುದಾಗಿ ಭರವಸೆ ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಆರೋಪಿಸಿದರು.
    ಸಂಬಂಧಪಟ್ಟ ಅಧಿಕಾರಿಗಳು, ಜನಪ್ರತಿನಿಧಿಗಳು ಇನ್ನಾದರೂ ಗಮನಹರಿಸಿ ಸೇತುವೆ ಎತ್ತರವಾಗಿ ನಿರ್ಮಿಸಲು ಮುಂದಾಗಬೇಕು. ಇಲ್ಲವಾದಲ್ಲಿ ತಹಸೀಲ್ದಾರ್ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು. ಗ್ರಾಮಸ್ಥರಾದ ಮಾದಪ್ಪ, ಚಿಕ್ಕಣ್ಣ, ಗುರುಸ್ವಾಮಿ, ಕೃಷ್ಣಪ್ಪ, ಸಿದ್ದಯ್ಯ, ನಿಂಗಯ್ಯ, ಸೋಮಶೇಖರ್, ರಾಜು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts