More

    ಸೆ.28ರಂದು ಐಕ್ಯ ಹೋರಾಟ ಸಮಿತಿ ನೇತೃತ್ವದಲ್ಲಿ ಬಂದ್ ನಡೆಸಲು ತೀರ್ಮಾನ

    ಚಿಕ್ಕಬಳ್ಳಾಪುರ: ಭೂ ಸುಧಾರಣೆ, ಎಪಿಎಂಸಿ, ಕಾರ್ಮಿಕ, ದಲಿತ ಕಾಯ್ದೆಗಳ ತಿದ್ದುಪಡಿ, ಸುಗ್ರೀವಾಜ್ಞೆ ಜಾರಿ ವಿರೋಧಿಸಿ ಅಖಿಲ ಭಾರತ ಕಿಸಾಸ್ ಸಂಘರ್ಷ ಸಮನ್ವಯ ಸಮಿತಿಯ ರಾಜ್ಯ ಸಂಘಟನೆ ಕರೆ ನೀಡಿರುವ ಸೆ.28ರ ‘ಕರ್ನಾಟಕ ಬಂದ್’ಗೆ ಜಿಲ್ಲೆಯಲ್ಲಿನ ರೈತಪರ, ಕಾರ್ಮಿಕ, ದಲಿತ, ಹಾಗೂ ಪ್ರಗತಿಪರ ಸಂಘಟನೆಗಳು ಬೆಂಬಲ ಸೂಚಿಸಿವೆ.

    ಪ್ರಾಂತ ರೈತಸಂಘ, ರೈತಸಂಘ ಮತ್ತು ಹಸಿರುಸೇನೆ (ಪುಟ್ಟಣ್ಣಯ್ಯ ಮತ್ತು ಕೋಡಿಹಳ್ಳಿ ಚಂದ್ರಶೇಖರ್ ಬಣ), ಪ್ರಾಂತ ಕೃಷಿ ಕೂಲಿಕಾರರ ಸಂಘ, ಸಿಐಟಿಯು, ಜೀವಿಕ, ಡಿವೈಎಫ್‌ಐ, ಎಸ್‌ಎಫ್‌ಐ, ಜೆಎಂಎಸ್, ದಲಿತ ಮತ್ತು ಕನ್ನಡಪರ ಸೇರಿ ಹಲವು ಸಂಘಟನೆಗಳು ಐಕ್ಯ ಹೋರಾಟ ಸಮಿತಿ ನೇತೃತ್ವದಲ್ಲಿ ಬಂದ್ ನಡೆಸಲು ಶುಕ್ರವಾರ ಇಲ್ಲಿನ ಅಂಬೇಡ್ಕರ್ ಭವನದಲ್ಲಿ ಹಮ್ಮಿಕೊಂಡಿದ್ದ ಸಮಾವೇಶದಲ್ಲಿ ಮುಖಂಡರು ತೀರ್ಮಾನಿಸಿದರು.

    ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರ್ಕಾರವು ವಿಧೇಯಕಗಳ ಸಾಧಕ ಬಾಧಕಗಳ ಬಗ್ಗೆ ಚರ್ಚೆಗೆ ಅವಕಾಶ ನೀಡದೇ ಜಾರಿಗೊಳಿಸಿದೆ. ಸುಗ್ರೀವಾಜ್ಞೆಯ ಮೂಲಕ ಕಾರ್ಪೋರೇಟ್ ಕಂಪನಿಗಳಿಗೆ ಅನುಕೂಲ ಮಾಡಿಕೊಡುತ್ತಿದೆ ಎಂದು ಪ್ರಾಂತ ರೈತಸಂಘದ ಪ್ರಧಾನ ಕಾರ್ಯದರ್ಶಿ ಯು.ಬಸವರಾಜ್ ಆರೋಪಿಸಿದರು.

    ತಿದ್ದುಪಡಿ ಕಾಯ್ದೆಗಳ ಜಾರಿಯ ವಿರುದ್ಧ ಈಗಲೇ ಎಚ್ಚೆತ್ತುಕೊಳ್ಳಬೇಕು. ಇಲ್ಲದಿದ್ದಲ್ಲಿ ಬಂಡವಾಳಶಾಹಿ ಹಿಡಿತಕ್ಕೆ ಸಿಲುಕಿ, ಸಾಮಾನ್ಯ ಜನರು ನಲುಗಬೇಕಾಗುತ್ತದೆ ಎಂದು ಮುಖಂಡ ಡಾ.ಅನಿಲ್ ಎಚ್ಚರಿಸಿದರು.

    ರಾಜ್ಯ ದಸಂಸ ಸಂಚಾಲಕ ಮುನಿಸ್ವಾಮಿ, ಎನ್.ವೆಂಕಟೇಶ್, ಜೀವಿಕ ಸಂಚಾಲಕ ವಿ.ಗೋಪಾಲ್, ಸಿದ್ದಗಂಗಪ್ಪ, ಸಮತಾ ಸೈನಿಕ ದಳದ ಮಂಜುನಾಥ್, ಜಿಲ್ಲಾ ರೈತಸಂಘದ ಅಧ್ಯಕ್ಷ ಟಿ.ಲಕ್ಷ್ಮೀನಾರಾಯಣಸ್ವಾಮಿ, ಜಿಲ್ಲಾ ಪ್ರಾಂತ ರೈತ ಸಂಘದ ಅಧ್ಯಕ್ಷ ಬಿ.ಎನ್.ಮುನಿಕೃಷ್ಣಪ್ಪ, ಮುಖಂಡರಾದ ಎಂ.ಪಿ.ಮುನಿವೆಂಕಟಪ್ಪ, ವೆಂಕಟಸ್ವಾಮಿ ಮತ್ತಿತರರು ಇದ್ದರು.

    ತಾಲೂಕು ಮಟ್ಟದಲ್ಲೂ ಸಿದ್ಧತೆ: ಜಿಲ್ಲೆಯ ಎಲ್ಲ ತಾಲೂಕುಗಳಲ್ಲೂ ವಿವಿಧ ಸಂಘಟನೆಗಳ ಮುಖಂಡರ ಸಭೆ ನಡೆಸಿ, ಸ್ಥಳೀಯವಾಗಿ ರಸ್ತೆ ಸಂಚಾರ ತಡೆ, ರ‌್ಯಾಲಿ, ಧರಣಿ ಮೂಲಕ ಹೋರಾಟ ನಡೆಸಲು ಜಿಲ್ಲಾಮಟ್ಟದ ಸಮಾವೇಶದಲ್ಲಿ ಸಲಹೆಗಳು ಕೇಳಿ ಬಂದವು. ವಿವಿಧ ಸಂಘಟನೆಗಳು ಸಾಮೂಹಿಕ ನಾಯಕತ್ವದಲ್ಲಿ ಹೋರಾಟಕ್ಕೆ ಕೈ ಜೋಡಿಸಬೇಕು. ಆದಷ್ಟು ಹೆಚ್ಚಿನ ಜನರನ್ನು ಸೇರಿಸಿ, ಆಯಾ ವ್ಯಾಪ್ತಿಯಲ್ಲಿ ಪ್ರತಿಭಟನೆಯನ್ನು ಯಶಸ್ವಿಗೊಳಿಸಲು ಸರ್ವಾನುಮತದ ತೀರ್ಮಾನ ಕೈಗೊಳ್ಳಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts