More

    ಸೆಪ್ಟೆಂಬರ್ ಮೊದಲ ವಾರ ಮಳೆಮಯ?

    ಹುಬ್ಬಳ್ಳಿ: ಕೆಲವು ದಿನದಿಂದ ಮರೆಯಾಗಿದ್ದ ಮಳೆರಾಯ ಭಾನುವಾರ ಮತ್ತೆ ಕಾಣಿಸಿಕೊಂಡಿದ್ದಾನೆ. ಧಾರವಾಡ ಜಿಲ್ಲೆಯ ವಿವಿಧೆಡೆ ಹಗುರದಿಂದ ಸಾಧಾರಣ ವೃಷ್ಟಿಯಾಗಿದ್ದು, ತಂಪಾದ ವಾತಾವರಣವನ್ನು ಮರುಸ್ಥಾಪಿಸಿದೆ.

    ಹವಾಮಾನ ಮುನ್ಸೂಚನೆಗಳ ಪ್ರಕಾರ ವರುಣ ಕೃಪೆ ಭಾನುವಾರಕ್ಕಷ್ಟೇ ಸೀಮಿತವಲ್ಲ. ಸೋಮವಾರವೂ ಇದೇ ರೀತಿ ಇದ್ದರೆ, ಆ. 5-6ರವರೆಗೂ ಮಳೆ ಹೆಚ್ಚುತ್ತ ಹೋಗುವ ಸಾಧ್ಯತೆಯಿದೆ.

    ಸದ್ಯ ಮೋಡ ಮುಸುಕಿದ ವಾತಾವರಣ ಇದ್ದು, ಗಾಳಿಯ ವೇಗ ಗಂಟೆಗೆ 6 ಕಿ.ಮೀ. ಇದೆ. ಸಾಂರ್ದಭಿಕವಾಗಿ ಇದು ಗಂಟೆಗೆ 9 ಕಿ.ಮೀ.ವರೆಗೆ ಹೆಚ್ಚಬಹುದು. ಮೇಲ್ಮಟ್ಟದಲ್ಲಿ ಒಂದೆರಡು ಗಂಟೆ ಕಾಲ ಜೋರಾಗಿ ಗಾಳಿ ಬೀಸಿ ಮೋಡಗಳನ್ನು ಮುಂದಕ್ಕೆ ಕಳುಹಿಸಿದರೂ ಒಂದರ ನಂತರ ಒಂದು ಮೋಡ ಬರುವ ಸಾಧ್ಯತೆ ಇರುವುದರಿಂದ ವಾತಾವರಣದಲ್ಲಿ ಹೆಚ್ಚಿನ ಬದಲಾವಣೆಯಾಗುವುದಿಲ್ಲ. ಅಂದರೆ, ಇಡೀ ವಾರ ತಂಪು ತಂಪಾದ, ಒಮ್ಮೊಮ್ಮೆ ಶೀತವೆನಿಸುವ ಹವಾಮಾನವನ್ನು ನಿರೀಕ್ಷಿಸಲಾಗಿದೆ.

    ವಾರದ ಮಧ್ಯಭಾಗದಲ್ಲಿ ಕೆಲವು ಕಡೆಗಳಲ್ಲಿ ಗಂಟೆಗಟ್ಟಲೇ ಸಣ್ಣ ಮಳೆಯಾಗಬಹುದು. ಈಗಾಗಲೇ ಭೂಮಿ ಸಾಕಷ್ಟು ನೀರು ಕುಡಿದಿದ್ದು, ಮತ್ತೆ ಮಳೆ ನೀರು ಅಲ್ಲಲ್ಲೇ ಆರುವುದಿಲ್ಲ. ಕೆರೆ ಕಟ್ಟೆಗಳು ಭರ್ತಿಯಾಗಿರುವುದರಿಂದ ಸಣ್ಣ ಮಳೆ ಸುರಿದರೂ ಹಳ್ಳಗಳಲ್ಲಿ ನೀರಿನ ಪ್ರಮಾಣ ಹೆಚ್ಚಬಹುದಾಗಿದೆ.

    ಬೆಳೆಗಾರರಿಗೆ ಸಂಕಷ್ಟ ಸಾಧ್ಯತೆ: ಜಿಲ್ಲೆಯಲ್ಲಿ ಈಗಾಗಲೇ ಹೆಸರು ಬೆಳೆ ಕೈಗೆ ಬರುತ್ತಿದೆ. ಹಳ್ಳಗಳ ಇಕ್ಕೆಲ ಸೇರಿ ಅನೇಕ ಕಡೆಗೆ ಹೊಲಕ್ಕೆ ಪ್ರವಾಹ ನುಗ್ಗಿದ್ದರಿಂದ ಬೆಳೆ ಹಾನಿಯೂ ಆಗಿದೆ. ಇದರೊಂದಿಗೆ, ಬರುವ ಭಾನುವಾರದವರೆಗೆ ಸೂರ್ಯ ಕಿರಣಗಳನ್ನು ಮೋಡಗಳು ತಡೆಯಲಿದ್ದು, ಆಗಾಗ ಮಳೆ ಸುರಿಯಬಹುದಾಗಿದ್ದರಿಂದ ಫಸಲು ಕಟಾವು ಮತ್ತು ಒಣಗಿಸುವುದು ಹೆಸರು ಬೆಳೆಗಾರರಿಗೆ ಕಷ್ಟವಾಗಬಹುದು ಎನ್ನಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts