More

    ಸೂಕ್ತ ಸಂದರ್ಭದಲ್ಲಿ ತಕ್ಕ ಉತ್ತರ ಕೊಡುವೆ

    ತಿ.ನರಸೀಪುರ: ಕ್ಷೇತ್ರದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳು ಆಗಿಲ್ಲ ಎಂದು ಆರೋಪ ಮಾಡುವವರಿಗೆ ಸೂಕ್ತ ಸಂದರ್ಭದಲ್ಲಿ ತಕ್ಕ ಉತ್ತರ ಕೊಡುತ್ತೇನೆ ಎಂದು ಶಾಸಕ ಎಂ.ಅಶ್ವಿನ್‌ಕುಮಾರ್ ಹೇಳಿದರು.

    ಪಟ್ಟಣದ ಶ್ರೀ ಗುಂಜಾ ನರಸಿಂಹಸ್ವಾಮಿ ದೇವಸ್ಥಾನದ ಆವರಣದಲ್ಲಿ ಶುಕ್ರವಾರ ಆಯೋಜಿಸಿದ್ದ ಜೆಡಿಎಸ್ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಚುನಾವಣೆ ಸಮಯ ಹತ್ತಿರ ಬರುತ್ತಿದ್ದಂತೆ ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸಗಳಾಗಿಲ್ಲ, ಶಾಸಕರಾದ ಮೇಲೆ ಯಾವುದೇ ಅನುದಾನ ತಂದಿಲ್ಲ ಎಂದು ಕೆಲವರು ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿರುವುದು ಗಮನಕ್ಕೆ ಬಂದಿದೆ. ಅಭಿವೃದ್ಧಿ ವಿಚಾರದಲ್ಲಿ ಆಗಿರುವ ಕೆಲಸಗಳು ನನ್ನ ಆತ್ಮ ಸಾಕ್ಷಿಗೆ ಒಪ್ಪುವಂತಿದ್ದು, ಕ್ಷೇತ್ರದ ಜನರಿಗೆ ಗೊತ್ತಿದೆ. ಬೇರೆ ಯಾರಿಗೂ ನನ್ನ ಕೆಲಸದ ಬಗ್ಗೆ ಮಾಹಿತಿ ಕೊಡುವ ಅಗತ್ಯವಿಲ್ಲ. ಸಮಯ ಬಂದಾಗ ಟೀಕಾಕಾರರಿಗೆ ತಕ್ಕ ಉತ್ತರ ನೀಡುತ್ತೇನೆ ಎಂದು ವಾಗ್ದಾಳಿ ನಡೆಸಿದರು.

    ಕ್ಷೇತ್ರದಲ್ಲಿ ಯಾವುದೇ ಸಮುದಾಯಕ್ಕೆ ತಾರತಮ್ಯ ಮಾಡದೇ ಪಕ್ಷಾತೀತ, ಜಾತ್ಯತೀತವಾಗಿ ಕೆಲಸ ಮಾಡಿದ್ದೇನೆ. ತಾಲೂಕಿನಲ್ಲಿ ಜೆಡಿಎಸ್ ಅಭಿವೃದ್ಧಿ ಕಾರ್ಯಗಳನ್ನು ನೋಡಿ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಸೇರ್ಪಡೆಯಾಗುತ್ತಿರುವುದು ಸಂತಸ ತಂದಿದೆ. ನಿಖಿಲ್ ಕುಮಾರಸ್ವಾಮಿ ಪಟ್ಟಣಕ್ಕೆ ಭೇಟಿ ನೀಡಿದ ಬಳಿಕ ಕ್ಷೇತ್ರದಲ್ಲಿ ಜೆಡಿಎಸ್ ಪರ್ವ ಆರಂಭವಾಗಿದೆ. ಸ್ವಾಭಿಮಾನಿ ಯುವಕರು ಪಕ್ಷದ ಕಾರ್ಯಕ್ರಮಗಳನ್ನು ಮೆಚ್ಚಿ ಸೇರ್ಪಡೆಯಾಗಿದ್ದಾರೆ. ಎಲ್ಲರನ್ನೂ ಪಕ್ಷ ಗೌರವಯುತವಾಗಿ ನಡೆಸಿಕೊಳ್ಳಲಿದೆ ಎಂದರು.

    ಮುಂಬರುವ ಚುನಾವಣೆಯಲ್ಲಿ ಜೆಡಿಎಸ್ ಅಧಿಕಾರಕ್ಕೆ ಬರಲು ಮತದಾರರು ಅವಕಾಶ ಕಲ್ಪಿಸಿಕೊಡಬೇಕು. ವಸತಿ, ಶಿಕ್ಷಣ, ಆರೋಗ್ಯ, ಕೃಷಿ, ಉದ್ಯೋಗ ನೀಡುವಂತಹ ಪ್ರಮುಖ ಗುರಿಗಳನ್ನು ಪಂಚರತ್ನ ಯೋಜನೆಯಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಸೇರಿಸಿದ್ದಾರೆ. ಸ್ತ್ರೀ ಶಕ್ತಿ ಸಂಘದ ಸಾಲವನ್ನು ಸಂಪೂರ್ಣವಾಗಿ ಮನ್ನಾ ಮಾಡುವಂತಹ ಉದ್ದೇಶ ಹೊಂದಿದ್ದು, ಮತ್ತೊಮ್ಮೆ ಮುಖ್ಯಮಂತ್ರಿ ಮಾಡಲು ನಾವೆಲ್ಲರೂ ಬದ್ಧರಾಗಿ ಕೆಲಸ ಮಾಡೋಣ ಎಂದು ಕರೆ ನೀಡಿದರು.

    ಉಕ್ಕಲಗೆರೆ ಗ್ರಾಪಂ ಮಾಜಿ ಅಧ್ಯಕ್ಷ ಅಡುಗೆ ಕುಮಾರ್, ಕ್ಷೇತ್ರದ ಜೆಡಿಎಸ್ ಅಧ್ಯಕ್ಷ ಸಿ.ಬಿ.ಹುಂಡಿ ಚಿನ್ನಸ್ವಾಮಿ, ಜಿಪಂ ಮಾಜಿ ಸದಸ್ಯ ಜಯಪಾಲ್ ಭರಣಿ, ಸಂಪತ್, ಗ್ರಾಪಂ ಮಾಜಿ ಅಧ್ಯಕ್ಷ ಶಂಭುದೇವನಪುರ ರಮೇಶ್, ಸದಸ್ಯ ಕೈಯಂಬಳ್ಳಿ ಅಶೋಕ್, ಮಾವಿನಹಳ್ಳಿ ರಾಜೇಶ್, ಹಿರಿಯೂರು ಸೋಮಣ್ಣ, ಚೌಹಳ್ಳಿ ರಾಜಪ್ಪ, ಸೋಸಲೆ ರಾಜೇಶ್, ರಾಜಣ್ಣ ನಿಖಿಲ್, ಮೂಗೂರು ಹೋಬಳಿ ಅಧ್ಯಕ್ಷ ಸೋಮಣ್ಣ, ಮುಖಂಡರಾದ ಶ್ರೀನಿವಾಸ್, ರಾಜು, ಸಿದ್ದಣ್ಣ, ಕೇಶವ, ನಿಲಸೋಗೆ ಮನೋಜ್, ಸಿದ್ಧಾರ್ಥ, ದೊಡ್ಡಪುರ ಚೇತನ್, ಮಾದಾಪುರ ರಾಜು, ಹಿರಿಯೂರು ರಾಚಪ್ಪಾಜಿ, ಸಿದ್ದು ಇತರರು ಇದ್ದರು. ಹಿರಿಯೂರು ಗ್ರಾಮದ ವೀರಶೈವ ಯುವ ಮುಖಂಡ ನಾಗೇಶ್ ಸೇರಿದಂತೆ ಅನೇಕರು ಪಕ್ಷ ಸೇರ್ಪಡೆಗೊಂಡರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts