More

    ಸುಪಾರಿ ಹಂತಕರು ಸಿಬಿಐ ವಶಕ್ಕೆ

    ಧಾರವಾಡ: ಜಿ.ಪಂ. ಸದಸ್ಯನಾಗಿದ್ದ ಯೋಗೀಶಗೌಡ ಗೌಡರ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಬಂಧಿತರಾಗಿ, ಭಾನುವಾರ ನ್ಯಾಯಾಂಗ ವಶಕ್ಕೆ ನೀಡಲಾಗಿದ್ದ 6 ಆರೋಪಿಗಳನ್ನು ಸಿಬಿಐ ಅಧಿಕಾರಿಗಳು ಸೋಮವಾರ ಇಲ್ಲಿಯ ಪ್ರಧಾನ ಜೆಎಂಎಫ್​ಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದರು. ಆರೋಪಿಗಳನ್ನು ಮಾ. 7ರವರೆಗೆ ಸಿಬಿಐ ವಶಕ್ಕೆ ನೀಡಿ ನ್ಯಾಯಾಲಯ ಆದೇಶಿಸಿತು.

    ಕೆಲ ದಿನಗಳಿಂದ ನಡೆಸಿದ್ದ ವಿಚಾರಣೆ ವೇಳೆ ಸಿಕ್ಕ ಮಾಹಿತಿಯಯನ್ವಯ ಹತ್ಯೆಗೆ ಸುಪಾರಿ ಪಡೆದಿದ್ದ ಬೆಂಗಳೂರಿನ ದಿನೇಶ, ಸುನೀಲಕುಮಾರ, ನೂತನ, ಅಶ್ವತ್ಥ್, ಶಾನವಾಜ್, ನಜೀರ ಅಹ್ಮದ್ ಎಂಬುವರನ್ನು ಸಿಬಿಐ ಅಧಿಕಾರಿಗಳು ಬೆಂಗಳೂರಿನಲ್ಲಿ ಬಂಧಿಸಿದ್ದರು. ಅವರನ್ನು ಭಾನುವಾರ ರಾತ್ರಿ ನ್ಯಾಯಾಧೀಶರ ಗೃಹಕಚೇರಿಗೆ ಹಾಜರುಪಡಿಸಲಾಗಿತ್ತು. ನ್ಯಾಯಾಧೀಶರು ಒಂದು ದಿನ ನ್ಯಾಯಾಂಗ ಬಂಧನಕ್ಕೆ ನೀಡಿದ್ದರು. ಆರೋಪಿಗಳನ್ನು ಸೋಮವಾರ ಭಾರಿ ಬಂದೋಬಸ್ತ್​ನಲ್ಲಿ ಪ್ರಧಾನ ಜೆಎಂಎಫ್​ಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಹೆಚ್ಚಿನ ವಿಚಾರಣೆ ಅಗತ್ಯವಿದ್ದು, ತಮ್ಮ ವಶಕ್ಕೆ ನೀಡುವಂತೆ ಸಿಬಿಐ ಅಧಿಕಾರಿಗಳು ಕೋರಿದರು.

    ಅದನ್ನು ಪುರಸ್ಕರಿಸಿದ ನ್ಯಾ. ವಿಜಯಲಕ್ಷ್ಮೀ ಘಾನಾಪುರ ಅವರು ಆರೋಪಿಗಳನ್ನು ಮಾ. 7ರವರೆಗೆ ಸಿಬಿಐ ವಶಕ್ಕೆ ನೀಡಿ ಆದೇಶ ಹೊರಡಿಸಿದರು. ಸಿಬಿಐ ಅಧಿಕಾರಿಗಳು ಅವರನ್ನು ಅಜ್ಞಾತ ಸ್ಥಳಕ್ಕೆ ಕರೆದೊಯ್ದರು.

    ಸುಪ್ರೀಂ ಆದೇಶಿಸಿತ್ತು: 2016ರ ಜೂ. 15ರಂದು ಯೋಗೀಶಗೌಡ ಗೌಡರನನ್ನು ಧಾರವಾಡದ ಸಪ್ತಾಪುರದಲ್ಲಿರುವ ಅವರದೇ ಜಿಮ್ಲ್ಲಿ ಬರ್ಬರವಾಗಿ ಕೊಲೆ ಮಾಡಲಾಗಿತ್ತು. ಸ್ಥಳೀಯ ಪೊಲೀಸರು ತನಿಖೆ ನಡೆಸಿ ಬಸವರಾಜ ಮುತ್ತಗಿ ಸೇರಿ 6 ಜನರನ್ನು ಬಂಧಿಸಿದ್ದರು. ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕು ಎಂದು ಕೋರಿ ಮೃತನ ತಾಯಿ ತುಂಗಮ್ಮ ಹಾಗೂ ಸಹೋದರ ಗುರುನಾಥಗೌಡ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು. ಅವರ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾ ಮಾಡಿತ್ತು. ಕಳೆದ ಸೆಪ್ಟೆಂಬರ್​ನಲ್ಲಿ ಬಿಜೆಪಿ ಸರ್ಕಾರ ಪ್ರಕರಣವನ್ನು ಸಿಬಿಐಗೆ ವಹಿಸಿತ್ತು. ಮೊದಲ ಆರೋಪಿ ಬಸವರಾಜ ಮುತ್ತಗಿ ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆ ನಡೆಸಿದ್ದ ಹೈಕೋರ್ಟ್, ನ. 21ರಂದು ತನಿಖೆಗೆ ತಡೆಯಾಜ್ಞೆ ನೀಡಿತ್ತು. ಹೈಕೋರ್ಟ್ ಆದೇಶ ಪ್ರಶ್ನಿಸಿ ಸಿಬಿಐ ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್, ಸಿಬಿಐ ತನಿಖೆ ಪೂರ್ಣಗೊಳಿಸಲಿ ಎಂದು ಅಭಿಪ್ರಾಯಪಟ್ಟು ರಾಜ್ಯ ಹೈಕೋರ್ಟ್ ಆದೇಶಕ್ಕೆ ತಡೆ ನೀಡಿತ್ತು.

    ಭರವಸೆ ಬಂದಿದೆ: ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಯೋಗೀಶಗೌಡ ಸಹೋದರ ಗುರುನಾಥಗೌಡ, ಸಿಬಿಐ ಅಧಿಕಾರಿಗಳು 6 ಆರೋಪಿಗಳನ್ನು ಬಂಧಿಸಿದ್ದಾರೆ. ಕೊಲೆಯ ಹಿಂದೆ ಪ್ರಭಾವಿ ವ್ಯಕ್ತಿಗಳಿದ್ದು, ಸಿಬಿಐ ತನಿಖೆಯಿಂದ ತನ್ನ ಸಹೋದರನ ಸಾವಿಗೆ ನ್ಯಾಯ ಸಿಗುವ ಭರವಸೆ ಇದೆ ಎಂದರು.

    ಗುರುನಾಥಗೌಡ ಆಪ್ತ ಬಸವರಾಜ ಕೊರವರ ಮಾತನಾಡಿ, ಹೊಸದಾಗಿ 6 ಆರೋಪಿಗಳ ಬಂಧನವಾಗಿದೆ. ಕೊಲೆಯ ಹಿಂದೆ ರಾಜಕಾರಣಿಗಳು, ಕಾಣದ ಕೈಗಳ ಕೈವಾಡ ಇದೆ. ತನಿಖೆಯಿಂದ ಇನ್ನಷ್ಟು ಹೊಸ ಹೆಸರು ಬಯಲಿಗೆ ಬರಲಿವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts