More

    ಸುಗಮ ಚುನಾವಣೆಗೆ ಬೇಕು ಆಂಧ್ರದ ಸಹಕಾರ

    ಚಿತ್ರದುರ್ಗ: ಲೋಕಸಭಾ ಚುನಾವಣೆ ಸಂದರ್ಭ ಅಕ್ರಮ ಮದ್ಯ ಸಾಗಾಣಿಕೆ ತಡೆ ಸೇರಿ ವಿವಿಧ ಅಕ್ರಮಗಳನ್ನು ನಿಯಂತ್ರಿಸಿ, ಮುಕ್ತ, ನ್ಯಾಯಸಮ್ಮತ ಹಾಗೂ ಶಾಂತಿಯುತ ಚುನಾವಣೆಗೆ ಸಹಕರಿಸುವಂತೆ ಆಂಧ್ರಪ್ರದೇಶದ ಅನಂತಪುರ, ಶ್ರೀಸತ್ಯಸಾಯಿ ಜಿಲ್ಲೆಯ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಮನವಿ ಮಾಡಿದರು.
    ಪ್ರಾಥಮಿಕ ಹಂತದ ಮುಂಜಾಗ್ರತಾ ಕ್ರಮಗಳ ಕುರಿತಂತೆ ತುಮಕೂರು, ಆಂಧ್ರಪ್ರದೇಶದ ಅನಂತಪುರ, ಶ್ರೀಸತ್ಯಸಾಯಿ ಜಿಲ್ಲೆಗಳ ಜಿಲ್ಲಾಧಿಕಾರಿ, ಪೊಲೀಸ್ ವರಿಷ್ಠಾಧಿಕಾರಿಗಳು ಹಾಗೂ ಅಬಕಾರಿ ಇಲಾಖೆ ಮತ್ತಿತರ ಅಧಿಕಾರಿಗಳೊಂದಿಗೆ ಸೋಮವಾರ ನಡೆಸಿದ ವಿಡಿಯೋ ಸಂವಾದದಲ್ಲಿ ಮಾತನಾಡಿದರು.
    ಶೀಘ್ರದಲ್ಲೇ ಚುನಾವಣೆ ಘೋಷಣೆಯಾಗಲಿದ್ದು, ಅಕ್ರಮಗಳ ತಡೆಗೆ ಜಿಲ್ಲಾದ್ಯಂತ 35ಕ್ಕೂ ಹೆಚ್ಚು ಚೆಕ್‌ಪೋಸ್ಟ್ ಸ್ಥಾಪಿಸಲಾಗುವುದು. ಆಂಧ್ರಪ್ರದೇಶದೊಂದಿಗೆ ಮೊಳಕಾಲ್ಮೂರು, ಚಳ್ಳಕೆರೆ ಹಾಗೂ ಹಿರಿಯೂರು ತಾಲೂಕುಗಳ ವ್ಯಾಪ್ತಿ ಅಂದಾಜು 150 ಕಿ.ಮೀ. ಗಡಿಪ್ರದೇಶವಿದೆ. ನೆರೆಯ ರಾಜ್ಯಗಳಿಂದ ಚಿತ್ರದುರ್ಗಕ್ಕೆ ಅಕ್ರಮವಾಗಿ ಮದ್ಯ, ವಿವಿಧ ಬಗೆಯ ಸಾಮಗ್ರಿಗಳ ಸಾಗಾಣಿಕೆ ಮಾಡುವುದು, ಕೆಲ ವ್ಯಕ್ತಿಗಳು ಬಂದು ಚುನಾವಣೆ ಮೇಲೆ ಪ್ರಭಾವ ಬೀರುವಂತಹ ಸಾಧ್ಯತೆಗಳಿರುತ್ತವೆ ಎಂದರು.
    ಆದ್ದರಿಂದ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಮೊಳಕಾಲ್ಮೂರು ತಾಲೂಕಿನ ಉಡೇವು, ಮಲ್ಲಸಮುದ್ರ, ಯದ್ದಲುಬೊಮ್ಮನಹಟ್ಟಿ, ಪಾತಪ್ಪನಗುಡಿ, ಕಣಪುಪ್ಪೆ, ಚಳ್ಳಕೆರೆ ತಾಲೂಕಿನ ನಾಗಪ್ಪನಹಳ್ಳಿ ಗೇಟ್, ಹಿರಿಯೂರು ತಾಲೂಕಿನ ಖಂಡೇನಹಳ್ಳಿ, ಪಿ.ಡಿ.ಕೋಟೆ ಕ್ರಾಸ್ ಸೇರಿ 8 ಚೆಕ್‌ಪೋಸ್ಟ್‌ಗಳನ್ನು ಸ್ಥಾಪಿಸಿಸಲಾಗುವುದು. ಆಂಧ್ರಪ್ರದೇಶ ವ್ಯಾಪ್ತಿಯಲ್ಲೂ ಚೆಕ್‌ಪೋಸ್ಟ್‌ಗಳನ್ನು ನಿರ್ಮಿಸಿ,ನಿಗಾ ವಹಿಸಬೇಕು. ಮದ್ಯದ ಹೆಚ್ಚುವರಿ ಮಾರಾಟದೆಡೆಯೂ ಗಮನಹರಿಸುವಂತೆ ನೆರೆ ರಾಜ್ಯದ ಅಧಿಕಾರಿಗಳಿಗೆ ಡಿಸಿ ಸಲಹೆ ನೀಡಿದರು.
    ಅನಂತಪುರ ಜಿಲ್ಲಾಧಿಕಾರಿ ಎಂ.ಗೌತಮಿ ಮಾತನಾಡಿ, ಆಂಧ್ರಪ್ರದೇಶದ ಗಡಿಭಾಗದಲ್ಲಿ 10 ಚೆಕ್‌ಪೋಸ್ಟ್‌ಗಳನ್ನು ಸ್ಥಾಪಿಸಲಾಗುವುದು ಎಂದರು.
    ಎಸ್‌ಪಿ ಧರ್ಮೇಂದ್ರಕುಮಾರ್ ಮೀನಾ, ಅನಂತಪುರ ಜಿಲ್ಲಾ ರಕ್ಷಣಾಧಿಕಾರಿ ಕೆ.ಕೆ.ಎನ್.ಅನ್ಬುರಾಜನ್ ಮಾತನಾಡಿದರು.
    ಜಿಪಂ ಸಿಇಒ ಎಸ್.ಜೆ. ಸೋಮಶೇಖರ್, ಎಡಿಸಿ ಬಿ.ಟಿ.ಕುಮಾರಸ್ವಾಮಿ, ಎಸಿ ಎಂ.ಕಾರ್ತಿಕ್, ಅಬಕಾರಿ ಉಪ ಆಯುಕ್ತ ಡಾ.ಬಿ.ಮಾದೇಶ್, ಶ್ರೀಸತ್ಯಸಾಯಿ ಜಿಲ್ಲೆ ಡಿಸಿ ಪಿ.ಅರುಣ್‌ಬಾಬು ಮತ್ತಿತರರು ವಿಡಿಯೋ ಸಂವಾದದಲ್ಲಿ ಪಾಲ್ಗೊಂಡಿದ್ದರು.

    *ಮುದ್ರಣ ಮಾಹಿತಿ ಕಡ್ಡಾಯ
    ಜಿಲ್ಲೆಯ ಪ್ರತಿಯೊಂದು ಮುದ್ರಣಾಲಯಗಳ ಮಾಲೀಕರು, ಚುನಾವಣಾ ಪ್ರಚಾರ ಸಾಮಾಗ್ರಿಗಳ ಮುದ್ರಣದ ಕುರಿತು ನಿಗದಿತ ನಮೂನೆಯಲ್ಲಿ ಮಾಹಿತಿ ನೀಡುವುದು ಕಡ್ಡಾಯವೆಂದು ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಹೇಳಿದರು.
    ಡಿಸಿ ಕಚೇರಿಯಲ್ಲಿ ಸೋಮವಾರ ಲೋಕಸಭಾ ಚುನಾವಣೆ ಸಂಬಂಧ ಮುದ್ರಣಾಲಯ ಮಾಲೀಕರು ಹಾಗೂ ದೂರ ಸಂಪರ್ಕ ಸಂಸ್ಥೆ ಪ್ರತಿನಿಧಿಗಳೊಂದಿಗೆ ನೀತಿ ಸಂಹಿತೆ ಅನುಷ್ಠಾನ ಕುರಿತ ಸಭೆಯಲ್ಲಿ ಮಾತನಾಡಿ, ಎಲ್ಲ ಮುದ್ರಕರು ತಪ್ಪದೆ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಬೇಕು ಎಂದರು.
    ಪ್ರತಿ ಕರಪತ್ರ, ಭಿತ್ತಿಪತ್ರದಲ್ಲಿ ಮುದ್ರಕರ ಹೆಸರು, ಮುದ್ರಣಾಲಯದ ಹೆಸರು ವಿಳಾಸ, ಮುದ್ರಿತ ಪ್ರತಿಗಳ ಸಂಖ್ಯೆ ವಿವರವಿರಬೇಕು. ಕಡಿಮೆ ದರ, ವೆಚ್ಚ ಕಡಿಮೆ ತೋರಿಸುವುದು, ಹೆಚ್ಚು ಪ್ರತಿಗಳನ್ನು ಮುದ್ರಿಸಿ, ಕಡಿಮೆ ಸಂಖ್ಯೆ ನಮೂದಿಸುವುದು ಅಪರಾಧವಾಗುತ್ತದೆ ಎಂದು ಎಚ್ಚರಿಸಿದರು.
    ಈಗಾಗಲೇ ಚುನಾವಣಾ ಆಯೋಗಕ್ಕೆ ಮುದ್ರಣ ವೆಚ್ಚದ ಪಟ್ಟಿ ಸಲ್ಲಿಸಲಾಗಿದೆ. ನಿಯಮಗಳ ಬಗ್ಗೆ ರಾಜಕೀಯ ಪಕ್ಷಗಳೊಂದಿಗೆ ಸಭೆ ನಡೆಸಿ, ಅರಿವು ಮೂಡಿಸಲಾಗಿದೆ ಎಂದು ತಿಳಿಸಿದರು. ಜಿಲ್ಲಾ ಮಾಸ್ಟರ್ ತರಬೇತುದಾರ ಎಸ್.ನಾಗಭೂಷಣ್ ಮಾತನಾಡಿದರು.

    *ನೆಟ್‌ವರ್ಕ್
    ಮೊಳಕಾಲ್ಮೂರು, ಚಳ್ಳಕೆರೆ, ಹೊಸದುರ್ಗ ಹಾಗೂ ಹಿರಿಯೂರು ಭಾಗದ ಕೆಲ ಪ್ರದೇಶಗಳಲ್ಲಿ ಮೊಬೈಲ್ ನೆಟ್‌ವರ್ಕ್ ಸಮಸ್ಯೆ ಇದೆ. ಈ ಪ್ರದೇಶಗಳಲ್ಲಿ ಸಮರ್ಪಕ ನೆಟ್‌ವರ್ಕ್‌ಗೆ ಅಗತ್ಯ ಕ್ರಮವಹಿಸಬೇಕು ಎಡಿಸಿ ಕುಮಾರಸ್ವಾಮಿ ದೂರಸಂಪರ್ಕ ಕಂಪನಿಗಳ ಪ್ರತಿನಿಧಿಗಳಿಗೆ ಸೂಚಿಸಿದರು. ನೆಟ್‌ವರ್ಕ್ ಸಮಸ್ಯೆ ಇರುವ ಮತಗಟ್ಟೆವಾರು ಗ್ರಾಮಗಳ ಪಟ್ಟಿಯನ್ನು ದೂರಸಂಪರ್ಕ ಪ್ರತಿನಿಧಿಗಳು ಪಡೆದು, ಮುಂದಿನ ವಾರದೊಳಗೆ ಬಗೆಹರಿಸಬೇಕು ಎಂದರು. ಚುನಾವಣಾ ತರಬೇತಿ ನಿರ್ವಹಣಾ ಕೋಶದ ನೋಡಲ್ ಅಧಿಕಾರಿ ಜಗದೀಶ್ ಹೆಬ್ಬಳ್ಳಿ, ಕಮ್ಯೂನಿಕೇಷನ್ ಪ್ಲಾನ್ ಜಿಲ್ಲಾ ನೋಡಲ್ ಅಧಿಕಾರಿ ಬಸವನಗೌಡ ಮೇಟಿ ಪಾಟೀಲ್ ಮತ್ತಿತರ ಅಧಿಕಾರಿಗಳಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts