More

    ಸೀಲ್​ಡೌನ್ ಮೊರೆಹೋದ ಗ್ರಾಮ ಪಂಚಾಯಿತಿಗಳು

    ಯಲ್ಲಾಪುರ: ತಾಲೂಕಿನಲ್ಲಿ ದಿನೇದಿನೆ ಕರೊನಾ ಪ್ರಕರಣಗಳ ಹೆಚ್ಚುತ್ತಿದ್ದು, ಗ್ರಾಮೀಣ ಭಾಗಗಳಲ್ಲೇ ಹೆಚ್ಚು ಪ್ರಕರಣಗಳು ಕಂಡು ಬರುತ್ತಿವೆ. ಇದರ ನಿಯಂತ್ರಣಕ್ಕಾಗಿ ಬಹುತೇಕ ಗ್ರಾಮ ಪಂಚಾಯಿತಿಗಳು ಸೀಲ್​ಡೌನ್ ಮೊರೆ ಹೋಗುತ್ತಿವೆ.
    ಸದ್ಯ ತಾಲೂಕಿನಲ್ಲಿ 500 ಹೆಚ್ಚು ಕರೊನಾ ಪ್ರಕರಣಗಳಿದ್ದು, ಇವುಗಳಲ್ಲಿ 350 ಕ್ಕೂ ಹೆಚ್ಚು ಪ್ರಕರಣಗಳು ಗ್ರಾಮೀಣ ಭಾಗದ್ದಾಗಿವೆ. ಕರೊನಾ ನಿಯಂತ್ರಣಕ್ಕಾಗಿ ಎಷ್ಟೇ ಪ್ರಯತ್ನಿಸಿದರೂ ಸಾಧ್ಯವಾಗದ ಹಿನ್ನೆಲೆಯಲ್ಲಿ ಈಗಾಗಲೇ ತಾಲೂಕಿನ 5 ಗ್ರಾಮ ಪಂಚಾಯಿತಿಗಳು ಸೀಲ್​ಡೌನ್ ನಿರ್ಧಾರ ಕೈಗೊಂಡಿವೆ.
    ಪಟ್ಟಣ ವ್ಯಾಪ್ತಿಯಲ್ಲಿ ಕರೊನಾ ಪ್ರಕರಣ ಹೆಚ್ಚಾದ ನಂತರ ಮೇ 21ರಿಂದ ಕಂಟೇನ್ಮೆಂಟ್ ವಲಯವಾಗಿ ತಾಲೂಕಾಡಳಿತ ಘೊಷಿಸಿದೆ.
    ಮಾವಿನಮನೆ, ಉಮ್ಮಚಗಿ, ನಂದೊಳ್ಳಿ ಗ್ರಾಮ ಪಂಚಾಯಿತಿಗಳನ್ನು ಜಿಲ್ಲಾಡಳಿತವೇ ಕಂಟೇನ್ಮೆಂಟ್ ವಲಯವನ್ನಾಗಿ ಘೊಷಿಸಿದ್ದು, ಮೇ 31ರವರೆಗೂ ಅದು ಮುಂದುವರಿಯಲಿದೆ.
    ಮಾವಿನಮನೆ ಗ್ರಾಮ ಪಂಚಾಯಿತಿಯಲ್ಲಿ ಕಂಟೇನ್ಮೆಂಟ್ ವಲಯವಾದ ನಂತರ ಕರೊನಾ ಪ್ರಕರಣಗಳು ನಿಯಂತ್ರಣಕ್ಕೆ ಬಂದಿದ್ದು, ಅದಕ್ಕಾಗಿ ಇದೇ ಮಾದರಿಯನ್ನು ಇತರ ಪಂಚಾಯಿತಿಗಳು ಅನುಸರಿಸಲು ಮುಂದಾಗಿವೆ.
    ಚಂದಗುಳಿ ಪಂಚಾಯಿತಿ ಸೀಲ್​ಡೌನ್ ನಿರ್ಧಾರ ಕೈಗೊಂಡಿದ್ದು, ಇಡಗುಂದಿ ಪಂಚಾಯಿತಿಯನ್ನೂ ಮೇ 31 ರವರೆಗೆ ಸೀಲ್​ಡೌನ್ ಮಾಡಲಾಗಿದೆ. ಮಾವಿನಮನೆಯಲ್ಲಿ ಮಾಡಿದಂತೆ ಅಗತ್ಯ ವಸ್ತುಗಳನ್ನು ಮನೆಗಳಿಗೇ ಪೂರೈಸುವ ಕ್ರಮವನ್ನು ವಜ್ರಳ್ಳಿಯಲ್ಲೂ ಗ್ರಾ.ಪಂ. ಅನುಸರಿಸುತ್ತಿದೆ.
    ವಜ್ರಳ್ಳಿ ಗ್ರಾ.ಪಂ ವ್ಯಾಪ್ತಿಯಲ್ಲಿ ಬಾಗಿನಕಟ್ಟಾ ಗ್ರಾಮಸ್ಥರು ಸ್ವತಃ ಊರಿನ ರಸ್ತೆಯನ್ನು ಬಂದ್ ಮಾಡಿದ್ದಾರೆ. ಅನಗತ್ಯವಾಗಿ ಊರಿನ ಜನ ಹೊರ ಹೋಗದಂತೆ ಗ್ರಾಮಸ್ಥರೇ ನಿಂತು ತಡೆಯುತ್ತಿದ್ದಾರೆ. ಹೊರ ಊರಿನವರು ತಮ್ಮ ಗ್ರಾಮಕ್ಕೆ ಬರುತ್ತಿದ್ದರೂ ಅವರನ್ನು ತಡೆದು ಮರಳಿ ಕಳುಹಿಸುತ್ತಿದ್ದಾರೆ.
    ಮದುವೆ, ಉಪನಯನ, ಅಂತ್ಯ ಸಂಸ್ಕಾರ, ತಿಥಿಯಂತಹ ಕಾರ್ಯಕ್ರಮಗಳ ಮೂಲಕ ತಾಲೂಕಿನ ಗ್ರಾಮೀಣ ಭಾಗಗಳಲ್ಲಿ ಕರೊನಾ ಪ್ರಕರಣಗಳು ಹೆಚ್ಚಿದ್ದು, ಅದರ ನಿಯಂತ್ರಣಕ್ಕಾಗಿ ಗ್ರಾಮ ಪಂಚಾಯಿತಿಗಳು ಇದೀಗ ಹೆಣಗಾಡುತ್ತಿವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts