More

    ಸಿರಿಗೆರೆ ಶ್ರೀಗಳು ಜ್ಞಾನದಾಸೋಹಿಗಳು

    ಹಳೇಬೀಡು: ತರಳಬಾಳು ಹುಣ್ಣಿಮೆ ಕಾರ್ಯಕ್ರಮವು ಅರಿವಿನ ಬೆಳಕನ್ನು ಎಲ್ಲೆಡೆ ಪಸರಿಸಲು ಆಚರಿಸುತ್ತಿರುವ ವಿಶಿಷ್ಟ ಮಹೋತ್ಸವಾಗಿದೆ. ಸಿರಿಗೆರೆ ಶ್ರೀಗಳು ಜ್ಞಾನದಾಸೋಹಿಗಳಾಗಿದ್ದಾರೆ ಎಂದು ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಬಣ್ಣಿಸಿದರು.

    ಭಾನುವಾರ ಸಂಜೆ ದಾವಣಗೆರೆಯ ಸುಶ್ರಾವ್ಯ ತಂಡದವರು ನಡೆಸಿಕೊಟ್ಟ ವಚನಗೀತೆ ಕಾರ್ಯಕ್ರಮದ ಮೂಲಕ ಹುಣ್ಣಿಮೆ ಮಹೋತ್ಸವದ ಎರಡನೇ ದಿನದ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

    ಸುತ್ತೂರು ಮಠಕ್ಕೂ ಸಿರಿಗೆರೆ ಮಠಕ್ಕೂ ಅವಿನಾಭಾವ ಸಂಬಂಧವಿದ್ದು, ಶಿಕ್ಷಣ ಕ್ಷೇತ್ರ ಹಾಗೂ ವೈದ್ಯಕೀಯ ವಲಯದಲ್ಲಿ ಪರಸ್ಪರ ಅನುಭವಗಳನ್ನು ಹಂಚಿಕೊಂಡು ಸಾರ್ವಜನಿಕರ ಉಪಯೋಗಕ್ಕಾಗಿ ಅನೇಕ ಅಂಗಸಂಸ್ಥೆಗಳನ್ನು ಹುಟ್ಟುಹಾಕಲಾಗಿದೆ. ಶಿವಮೂರ್ತಿ ಶಿವಾಚಾರ್ಯ ಶ್ರೀಗಳ ನ್ಯಾಯದಾನದ ವ್ಯವಸ್ಥೆಯು ಎಲ್ಲೆಡೆ ಮನೆಮಾತಾಗಿರುವಂತೆ ಅವರ ಭಾವೈಕ್ಯದ ನಡೆಯು ಇಂದಿನ ಎಲ್ಲ ಮಠಗಳಿಗೆ ಪ್ರೇರಣೆಯಾಗಿದೆ ಎಂದರು.

    ಅತ್ಯಂತ ಶಿಸ್ತಿನಿಂದ ಕಾರ್ಯಕ್ರಮ ಸಂಘಟಿಸುವುದರಲ್ಲಿ ತರಳಬಾಳು ಶ್ರೀಗಳ ಮುಂಜಾಗ್ರತೆ ಅನುಕರಣೀಯವಾಗಿದ್ದು, ಮಠದ ಆಡಳಿತ ಮಂಡಳಿಯೂ ಅಷ್ಟೇ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುತ್ತಿದೆ. ಹಾಗಾಗಿ ತರಳಬಾಳು ಮಹೋತ್ಸವದಲ್ಲಿ ಲೋಪಗಳನ್ನು ಹುಡುಕುವುದು ಕಷ್ಟಕರ ಎಂದು ಹೇಳಿದರು.

    ಕೆರಗೋಡಿ-ರಂಗಾಪುರ ಸುಕ್ಷೇತ್ರದ ಗುರು ಪರದೇಶಿಕೇಂದ್ರ ಸ್ವಾಮೀಜಿ ಮಾತನಾಡಿ, ಧರ್ಮ ಜಿಜ್ಞಾಸೆಗೆ ಇಂತಹ ವೇದಿಕೆ ಅಗತ್ಯವಾಗಿದೆ. ಕೀಳು ಅಭಿರುಚಿಯ ಮನರಂಜನಾ ಕಾರ್ಯಕ್ರಮಗಳು ಜನರ ಮನಸ್ಸನ್ನು ಕೆಡಿಸುವುದಲ್ಲದೆ, ಧಾರ್ಮಿಕ ನಂಬಿಯನ್ನೂ ಹಾಳು ಮಾಡುತ್ತವೆ. ಹುಣ್ಣಿಮೆ ಉತ್ಸವದ ವಾತಾವರಣವೇ ದೈವಸನ್ನಿಧಿಯಂತಿದ್ದು ಮನಃಪರಿವರ್ತನೆಗೆ ದಾರಿದೀಪವಾಗಿದೆ ಎಂದರು.

    ಚಿಕ್ಕಮಗಳೂರು ಆದಿಚುಂಚನಗಿರಿ ಶಾಖಾಮಠದ ಶ್ರೀ ಗುಣನಾಥ ಸ್ವಾಮೀಜಿ ಆಶೀರ್ವಚನ ನೀಡಿದರು.

    ಅರಸೀಕೆರೆ ಕ್ಷೇತ್ರದ ಶಾಸಕ ಕೆ.ಎಂ. ಶಿವಲಿಂಗೇಗೌಡ ಮಾತನಾಡಿ, ಧಾರ್ಮಿಕ ಪರಂಪರೆಯನ್ನು ಎತ್ತಿಹಿಡಿಯುವ ಐತಿಹಾಸಿಕ ಕಾರ್ಯಕ್ರಮವು ನಮ್ಮ ಜೀವಿತಾವಧಿಯಲ್ಲಿ ನಡೆಯುತ್ತಿರುವುದು ಸುಕೃತ. ಹಾಸನ ಜಿಲ್ಲೆಯ ಹಳೇಬೀಡಿನಲ್ಲಿ ಕಾರ್ಯಕ್ರಮ ಆಯೋಜಿಸಿದ್ದಕ್ಕೆ ನಾವು ಧನ್ಯರಾಗಿದ್ದೇವೆ ಎಂದರು.

    ರಣಘಟ್ಟ ನೀರಾವರಿ ಯೋಜನೆ ಬಗ್ಗೆ ಪರೋಕ್ಷವಾಗಿ ಪ್ರಸ್ತಾವಿಸಿ, ಅರಸೀಕೆರೆಯು ನಿರಂತರವಾಗಿ ಬರಗಾಲಕ್ಕೆ ತುತ್ತಾಗುವ ತಾಲೂಕು ಪ್ರದೇಶವಾಗಿದ್ದು, ಈ ಭಾಗದ ನೀರಾವರಿ ಯೋಜನೆಗೆ ಪ್ರಾಮುಖ್ಯ ನೀಡುತ್ತಿರುವಂತೆ ನಮ್ಮ ಕ್ಷೇತ್ರದ ಯೋಜನೆಗಳನ್ನು ಜಾರಿಗೊಳಿಸಲು ಸಿರಿಗೆರೆ ಶ್ರೀಗಳು ಜಾಗೃತಿ ಮೂಡಿಸಬೇಕು. 12,500 ಕೋಟಿ ರೂ. ವೆಚ್ಚದ ಎತ್ತಿನಹೊಳೆ ಯೋಜನೆಯು ಕುಂಟುತ್ತಾ ಸಾಗಿದ್ದು, ಮಠಾಧೀಶರು ಮನಸ್ಸು ಮಾಡಿದರೆ ಶಂಕುಸ್ಥಾಪನೆ ಆಗಿರುವ ಅನೇಕ ಅಭಿವೃದ್ಧಿ ಕಾರ್ಯಗಳಿಗೆ ಮುಕ್ತಿ ಸಿಗುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

    ವಿಧಾನಪರಿಷತ್ ಮಾಜಿ ಸದಸ್ಯೆ ಗಾಯತ್ರಿ ಶಾಂತೇಗೌಡ, ಎಂಎಲ್‌ಸಿ ಗೋಪಾಲಸ್ವಾಮಿ, ನೇರ್ಲಿಗೆ ಬಸವರಾಜಪ್ಪ, ಜಿಲ್ಲಾ ಕಾರ್ಯನಿರತ ಪರ್ತಕರ್ತರ ಸಂಘದ ಅಧ್ಯಕ್ಷ ಉದಯಕುಮಾರ್ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts