More

    ಸಿಯುಕೆಯಲ್ಲಿ ಕೋವಿಡ್ ಲ್ಯಾಬ್ ಶುರು

    ಕಲಬುರಗಿ: ಇಲ್ಲಿಗೆ ಸಮೀಪದಲ್ಲಿರುವ ಆಳಂದ ತಾಲೂಕಿನ ಕಡಗಂಚಿಯ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಕರೊನಾ ವೈರಸ್ ಕೋವಿಡ್-19 ಪರೀಕ್ಷಿಸುವ ಪ್ರಯೋಗಾಲಯ ಕಾರ್ಯಾರಂಭ ಮಾಡಿದೆ. ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ರಾಜಶೇಖರ ಮಾಲಿ ಅವರು ಶುಕ್ರವಾರ ಲ್ಯಾಬ್ ಉದ್ಘಾಟಿಸಿ ಸೇವೆಗೆ ಸಮರ್ಪಿಸಿದರು.
    ಪ್ರಯೋಗಾಲಯ ಸ್ಥಾಪಿಸಲು ರಾಜ್ಯ ಸರ್ಕಾರದ 84 ಲಕ್ಷ ರೂ. ಧನ ಸಹಾಯದೊಂದಿಗೆ ಐಸಿಎಂಆರ್ ಮತ್ತು ನಿಮ್ಹಾನ್ಸ್ ಅನುಮೋದನೆಯೊಂದಿಗೆ ಕೋವಿಡ್-19 ಪರೀಕ್ಷಾ ಪ್ರಯೋಗಾಲಯ ಸ್ಥಾಪಿಸಲಾಗಿದೆ. ಇದರಿಂದ ಆಳಂದ, ಅಫಜಲಪುರ ತಾಲೂಕಿನವರಿಗೆ ಕರೊನಾ ಟೆಸ್ಟ್ ಮಾಡಿಸಿಕೊಳ್ಳಲು ಅನುವು ಆಗಲಿದೆ.
    ಡಿಎಚ್ಒ ಡಾ.ಮಾಲಿ ಮಾತನಾಡಿ, ಜಿಲ್ಲೆಯಲ್ಲಿ ಕೋವಿಡ್-19 ಪರೀಕ್ಷಾ ಸಾಮಥ್ರ್ಯವನ್ನು ಬಲಪಡಿಸಲು ಮತ್ತು ಹೆಚ್ಚಿನ ಜನರಿಗೆ ಸೇವೆ ಸಲ್ಲಿಸಲು ಸಿಯುಕೆಯಲ್ಲಿ ಹೊಸದಾಗಿ ಸ್ಥಾಪಿಸಲಾದ ಪ್ರಯೋಗಾಲಯ ಸಹಕಾರಿಯಾಗಲಿದೆ ಎಂದರು.
    ಕುಲಪತಿ ಪ್ರೊ. ಎಚ್.ಎಂ. ಮಹೇಶ್ವರಯ್ಯ ಮಾತನಾಡಿ, ಕರೊನಾ ಸಾಂಕ್ರಾಮಿಕ ಸಂಕಷ್ಟದ ಸಂದರ್ಭದಲ್ಲಿ ಕನರ್ಾಟಕ ಕೇಂದ್ರೀಯ ವಿಶ್ವವಿದ್ಯಾಲಯವು ಲ್ಯಾಬ್ ತೆರೆಯುವ ಮೂಲಕ ರಾಷ್ಟ್ರಕ್ಕಾಗಿ ತನ್ನ ಸೇವೆ ಮುಂದುವರಿಸಿರುವುದು ಸಂತೋಷದ ವಿಷಯ. ಈ ಲ್ಯಾಬ್ ಭವಿಷ್ಯದಲ್ಲಿ ಸುಧಾರಿತ ರೋಗ ನಿರ್ಣಯ ಮತ್ತು ಸಂಶೋಧನಾ ಪ್ರಯೋಗಾಲಯವಾಗಿ ರೂಪಗೊಂಡು ಸುಸ್ಥಿರ ಮಾನವ ಆರೋಗ್ಯಕ್ಕೆ ಸಹಕಾರಿಯಾಗಲಿ ಎಂದು ಆಶಯ ವ್ಯಕ್ತಪಡಿಸಿದರು.
    ಸಮಕುಲಪತಿ ಮತ್ತು ಸ್ಕೂಲ್ ಆಫ್ ಲೈಫ್ ಸೈನ್ಸ್ ವಿಭಾಗದ ಡೀನ್ ಪ್ರೊ. ಜಿ.ಆರ್.ನಾಯಕ್, ಕೋವಿಡ್ ಟೆಸ್ಟಿಂಗ್ ಲ್ಯಾಬ್ ನೋಡಲ್ ಅಧಿಕಾರಿ ಡಾ.ರಾಕೇಶಕುಮಾರ್, ಡಾ.ರಾಸ್ಮಿತಾ ಸಮಲ್ ಮತ್ತು ಡಾ. ಕವಿಶಂಕರ್ ಮತ್ತು ಇತರರರಿದ್ದರು.
    ಜಿಮ್ಸ್ ಮಾದರಿಗಳ ಮಾತ್ರ ಪರೀಕ್ಷೆ
    ಲ್ಯಾಬ್ದಲ್ಲಿ ಐಸಿಎಂಆರ್ ಅನುಮೋದಿತ ಸಾಧನಗಳಾದ ಆರ್ಟಿ-ಪಿಸಿಆರ್, ಟ್ರೂನಾಟ್, ಆರ್ಎನ್ಎ ಐಸೊಲೇಷನ್ ಮೆಷಿನ್, ಬಯೋಸೆಫ್ಟಿ ಕ್ಯಾಬಿನೆಟ್ಗಳು ಇತ್ಯಾದಿ ಅಳವಡಿಸಲಾಗಿದೆ. ಆರಂಭದಲ್ಲಿ ದಿನಕ್ಕೆ 200 ಮಾದರಿಗಳನ್ನು ಪರೀಕ್ಷಿಸುವ ಸಾಮಥ್ರ್ಯವಿದ್ದು, ಬೆಳಿಗ್ಗೆ 10 ರಿಂದ ಸಂಜೆ 5ರವರೆಗೆ ಕಾರ್ಯನಿರ್ವಹಿಸಲಿದೆ. ವಿಶ್ವವಿದ್ಯಾಲಯದ 3 ಸಂಶೋಧನಾ ಸಹಾಯಕರು ಮತ್ತು 3 ಸಹಾಯಕ ಪ್ರಾಧ್ಯಾಪಕರು ಲ್ಯಾಬ್ಗಾಗಿ ಕಾರ್ಯನಿರ್ವಹಿಸಲಿದ್ದಾರೆ. ಪ್ರಸ್ತುತ ವಿಶ್ವವಿದ್ಯಾನಿಲಯವು ತನ್ನ ಆವರಣದಲ್ಲಿ ಯಾವುದೇ ಕೋವಿಡ್-19 ಮಾದರಿಗಳನ್ನು ಸಂಗ್ರಹಿಸುವುದಿಲ್ಲ. ಜಿಲ್ಲಾ ಸರ್ಕಾರಿ ಜಿಮ್ಸ್ ಆಸ್ಪತ್ರೆಯಿಂದ ಕಳುಹಿಸುವ ಮಾದರಿಗಳನ್ನು ಮಾತ್ರ ಇಲ್ಲಿ ಪರೀಕ್ಷಿಸಿ ಫಲಿತಾಂಶವನ್ನು ಮರಳಿ ಆಸ್ಪತ್ರೆಗೆ ನೀಡಲಾಗುತ್ತದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts