More

    ಸಿಪಿಐ ಹಿನ್ನಡೆ ಆತ್ಮಾವಲೋಕನ  ಅಗತ್ಯ:ಎಚ್.ಕೆ. ಕೊಟ್ರಪ್ಪ

    ದಾವಣಗೆರೆ :ಚುನಾವಣೆಗಳಲ್ಲಿ ಕಮ್ಯುನಿಸ್ಟ್ ಪಕ್ಷ ಹಿನ್ನಡೆ ಅನುಭವಿಸುತ್ತಿದೆ. ಇದರ ಬಗ್ಗೆ ಆತ್ಮಾವಲೋಕನ ಮಾಡಿಕೊಂಡು ನ್ಯೂನ್ಯತೆ ಸರಿಪಡಿಸಿಕೊಳ್ಳಬೇಕು ಎಂದು ಪಕ್ಷದ ಹರಿಹರ ತಾಲೂಕು ಮಂಡಳಿ ಅಧ್ಯಕ್ಷ ಎಚ್.ಕೆ. ಕೊಟ್ರಪ್ಪ ಹೇಳಿದರು.
    ನಗರದ ಪಂಪಾಪತಿ ಭವನದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಸಿಪಿಐ ಪಕ್ಷದ 98ನೇ ಸಂಸ್ಥಾಪನಾ ದಿನಾಚರಣೆ ಉದ್ಘಾಟಿಸಿ ಮಾತನಾಡಿ, ಇತ್ತೀಚೆಗೆ ಉದಯಿಸಿದ ಪಕ್ಷಗಳು ಮುನ್ನೆಲೆಗೆ ಬಂದಿವೆ. ಆದರೆ, 98 ವರ್ಷ ಹಳೆಯದಾದ ಸಿಪಿಐ ಹಿಂದುಳಿದಿದೆ. ಇದಕ್ಕೆ ಕಾರಣ ಕಂಡುಕೊಂಡು ಸರಿಪಡಿಸಿಕೊಳ್ಳಬೇಕಿದೆ ಎಂದರು.
    ಚುನಾವಣೆ ಸಂದರ್ಭದಲ್ಲಿ ಮತದಾರರು ಭ್ರಷ್ಟರಾಗುತ್ತಿದ್ದಾರೆ. ಅವರ ಹಕ್ಕುಗಳಿಗಾಗಿ ಹೋರಾಟ ಮಾಡಿದ ಪಕ್ಷಗಳನ್ನು ಬಿಟ್ಟು, ಕ್ಷಣಿಕ ಆಸೆಗಾಗಿ ಬಂಡವಾಳಶಾಹಿ ಪಕ್ಷಗಳಿಗೆ ಮತ ನೀಡುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
    ಬಲಪಂಥೀಯ ಪಕ್ಷಗಳು ಅನ್ನ, ವಸತಿ, ವಸ್ತ್ರ ವಿಷಯಗಳನ್ನು ಮರೆ ಮಾಚಿ, ಜಾತಿ-ಧರ್ಮದ ಹೆಸರಿನಲ್ಲಿ ದೇಶದ ಜನರನ್ನು ಛಿದ್ರಗೊಳಿಸುವ ಹುನ್ನಾರ ಮಾಡುತ್ತಿವೆ. ಇದು ಮಾನವೀಯ ಕುಲವನ್ನೇ ಧ್ವಂಸ ಮಾಡುವ ಅಪಾಯಕಾರಿ ಬೆಳವಣಿಗೆಯಾಗಿದೆ. ಜನರನ್ನು ಜಾಗೃತಗೊಳಿಸುವ ಜವಾಬ್ದಾರಿ ಪಕ್ಷದ ಪ್ರತಿ ಕಾರ್ಯಕರ್ತನ ಮೇಲಿದೆ ಎಂದು ಹೇಳಿದರು.
    ಸಿಪಿಐ ಜಿಲ್ಲಾ ಮಂಡಳಿ ಸಹ ಕಾರ್ಯದರ್ಶಿ ಎಚ್.ಜಿ. ಉಮೇಶ್ ಮಾತನಾಡಿ, ಜನರು ಆಸೆ-ಆಮಿಷ ಧಿಕ್ಕರಿಸಿ, ಯೋಗ್ಯರಿಗೆ ಮತ ಚಲಾಯಿಸಿದಾಗ ಮಾತ್ರ ದೇಶದಲ್ಲಿ ಸಮಾನತೆ ಬರಲಿದೆ. ನಮ್ಮನ್ನಾಳುವ ಸರಕಾರಗಳು ರೈತರ ಸಮಸ್ಯೆ ಆಲಿಸುತ್ತಿಲ್ಲ. ಕರ್ನಾಟಕದಲ್ಲಿ ಖಾಲಿ ಇರುವ 9 ಲಕ್ಷಕ್ಕೂ ಹೆಚ್ಚು ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳುತ್ತಿಲ್ಲ ಎಂದು ಆರೋಪಿಸಿದರು.
    ಪುಣ್ಯಕ್ಷೇತ್ರಗಳನ್ನು ಹೊಂದಿರುವ ಮಂಗಳೂರು, ಕಾರವಾರ ಜಿಲ್ಲೆಗಳಲ್ಲಿ ಕೋಮು ದಳ್ಳುರಿ ನಡೆಯುತ್ತಿದೆ.ಯುವಕ-ಯುವತಿ ಜತೆಗೆ ಹೋದರೆ ತಡೆಯುವುದಲ್ಲದೆ ಅವರ ಜಾತಿಯ ವಿಚಾರಣೆ ನಡೆಸಲಾಗುತ್ತಿದೆ. ಹತ್ಯೆಗಳಯ ಹೆಚ್ಚುತ್ತಿವೆ ಎಂದು ಆತಂಕ ವ್ಯಕ್ತಪಡಿಸಿದರು.
    ಪಕ್ಷದ ಜಿಲ್ಲಾ ಮಂಡಳಿ ಖಜಾಂಚಿ ಆನಂದರಾಜ್ ಮಾತನಾಡಿ ದೇಶದ ಸ್ವಾತಂತ್ರ್ಯಕ್ಕಾಗಿ ಸಿಪಿಐ ಹೋರಾಟ ನಡೆಸಿ ಬಲಿದಾನ ಮಾಡಿದೆ. ಸ್ವಾತಂತ್ರ್ಯದ ಬಳಿಕವೂ ರೈತ-ಕಾರ್ಮಿಕರ ಪರ ಹೋರಾಟ ನಡೆಸಿ ಅವರ ಹಕ್ಕುಗಳನ್ನು ಕೊಡಿಸುತ್ತಿದೆ ಎಂದರು.
    ಕಾರ್ಯಕ್ರಮದಲ್ಲಿ ಪಕ್ಷದ ಜಿಲ್ಲಾ ಕಾರ್ಯದರ್ಶಿ ಆವರಗೆರೆ ಚಂದ್ರು, ತಾಲೂಕು ಕಾರ್ಯದರ್ಶಿ ಆವರಗೆರೆ ವಾಸು, ಟಿ.ಎಸ್. ನಾಗರಾಜ್, ಕೆ.ಜಿ. ಶಿವಮೂರ್ತಿ, ಎಂ.ಬಿ. ಶಾರದಮ್ಮ, ಮೊಹಮ್ಮದ್ ರಫಿಕ್, ಯಲ್ಲಮ್ಮ ಇದ್ದರು. ಐರಣಿ ಚಂದ್ರು, ಪಿ.ಷಣ್ಮುಖಸ್ವಾಮಿ ಜಾಗೃತಿ ಗೀತೆಗಳನ್ನು ಹಾಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts