More

    ಸಿಪಿಐನಿಂದ ಕಾರ್ಮಿಕರ ದಿನಾಚರಣೆ- ಗುಲಾಮಿ ಸರ್ಕಾರಗಳನ್ನು ತೊಲಗಿಸಿ- ಸಿದ್ದನಗೌಡ ಪಾಟೀಲ್

    ದಾವಣಗೆರೆ: ಅಂಬಾನಿ, ಅದಾನಿ ಮೊದಲಾದ ಬಂಡವಾಳಶಾಹಿಗಳ ಗುಲಾಮರಾಗಿರುವ ಬಿಜೆಪಿ ಸರ್ಕಾರಗಳನ್ನು ಕಿತ್ತೊಗೆಯಲು ಕಾರ್ಮಿಕರು ಒಂದಾಗಬೇಕಿದೆ ಎಂದು ಸಿಪಿಐನ ರಾಜ್ಯ ಮಂಡಳಿ ಸದಸ್ಯ ಸಿದ್ದನಗೌಡ ಪಾಟೀಲ್ ಹೇಳಿದರು.
    ಭಾರತ ಕಮ್ಯುನಿಸ್ಟ್ ಪಕ್ಷ ಮತ್ತು ಎಐಟಿಯುಸಿ ಜಿಲ್ಲಾ ಮಂಡಳಿ ಸಹಯೋಗದಲ್ಲಿ ಜಯದೇವ ವೃತ್ತದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಕಾರ್ಮಿಕರ ದಿನಾಚರಣೆ ಹಾಗೂ ಹುತಾತ್ಮರ 53ನೇ ವಾರ್ಷಿಕೋತ್ಸವ ಉದ್ಘಾಟಿಸಿ ಮಾತನಾಡಿದರು.
    ಕೇಂದ್ರ ಸರ್ಕಾರವು ಲೂಟಿಕೋರರ ಪರವಾಗಿ ಕೆಲಸ ಮಾಡುತ್ತಿದ್ದು, ಇದು ಕಾರ್ಮಿಕರ ಬದುಕನ್ನು ನಾಶ ಮಾಡುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಸರ್ಕಾರಿ ಸ್ವಾಮ್ಯದ ಕಂಪನಿಗಳನ್ನು ಖಾಸಗೀಕರಣಗೊಳಿಸಿ, ಸರ್ಕಾರಿ ಸಂಸ್ಥೆಗಳು ಗಳಿಸಿದ ಲಾಭ ಖಾಸಗಿಯವರಿಗೆ ಸಿಗುವಂತೆ ಮಾಡಿದ್ದಾರೆ. ಒಂದೆಡೆ ಅಂಬಾನಿ ಅವರ ಜಿಯೊ ಕಂಪನಿಗೆ ಲಾಭ ಆಗುತ್ತಿದ್ದರೆ ಇನ್ನೊಂದೆಡೆ ಸರ್ಕಾರಿ ಸ್ವಾಮ್ಯದ ಬಿಎಸ್ಸೆನ್ನೆಲ್ ಸಂಸ್ಥೆ ಅವಸಾನದತ್ತ ತಲುಪಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
    ಕಾರ್ಮಿಕ ಕಾಯ್ದೆಗಳನ್ನು ಬದಲಿಸಿದರೆ ಕರ್ನಾಟಕದಲ್ಲಿ ಉದ್ಯಮ ಆರಂಭಿಸುವುದಾಗಿ ಖಾಸಗಿ ಕಂಪನಿಯೊಂದರ ಸಿಇಒ ಷರತ್ತು ವಿಧಿಸಿದ್ದಾರೆ. , ಅವರಿಗೆ ಅನುಕೂಲ ಮಾಡಿಕೊಡಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕಾರ್ಮಿಕ ಕಾಯ್ದೆಗೆ ತಿದ್ದುಪಡಿ ತಂದರು.
    8 ತಾಸು ಸೀಮಿತವಿದ್ದ ದುಡಿಮೆ ಅವಧಿಯನ್ನು 12 ಗಂಟೆಗೆ ಹೆಚ್ಚಿಸಿ, ರಾತ್ರಿ ಪಾಳಯದಲ್ಲೂ ಮಹಿಳೆಯರು ದುಡಿಯುವಂತೆ ಮಾಡಿದ್ದಾರೆ. ಇಂದು ಎಲ್ಲೆಡೆ ಕಾಯಂ ನೌಕರರನ್ನು ವಜಾಗೊಳಿಸಿ ಗುತ್ತಿಗೆ ಆಧಾರಿತವಾಗಿ ನೇಮಕ ಮಾಡಿಕೊಳ್ಳುವ ಮೂಲಕ ಕಾರ್ಮಿಕರ ಹಿತವನ್ನು ಬಲಿಕೊಡಲಾಗುತ್ತಿದೆ ಎಂದು ವಿಷಾಧ ವ್ಯಕ್ತಪಡಿಸಿದರು.
    ನಾನು ಯಾರಿಗೂ ತಿನ್ನಲು ಬಿಡುವುದಿಲ್ಲ ಎಂದಿದ್ದ ನರೇಂದ್ರ ಮೋದಿ, ಕೋಟ್ಯಂತರ ರೂ. ಸಾಲ ಮಾಡಿ ವಿದೇಶಕ್ಕೆ ಹೋದ ನೀರವ್ ಮೋದಿ, ರಾಜ್ಯದಲ್ಲಿ ಕೋಟ್ಯಂತರ ರೂ. ಇರಿಸಿಕೊಂಡಿದ್ದ ಮಾಡಾಳು ವಿರೂಪಾಕ್ಷಪ್ಪ ಅವರ ವಿಚಾರಗಳ ಕುರಿತು ಲೋಕಸಭೆ, ವಿಧಾನಸಭೆಗಳಲ್ಲಿ ಚರ್ಚೆಗೆ ಆಸ್ಪದ ನೀಡಲಿಲ್ಲ ಎಂದು ಹೇಳಿದರು.
    ದಾವಣಗೆರೆಯಲ್ಲಿ ಒಂದು ಕಾಲದಲ್ಲಿ ಕಾರ್ಮಿಕ ಚಳವಳಿ ಉತ್ತುಂಗದಲ್ಲಿತ್ತು. ಹೋರಾಟದಲ್ಲಿ ಗಾಯಗೊಂಡ ಪಂಪಾಪತಿ ಜೈಲು ಸೇರಿದರು. ಸುರೇಶ್, ಶೇಖರಪ್ಪ ಹತ್ಯೆಯಾದರು. ಆ ನಂತರ ರಾಜ್ಯದಲ್ಲಿ ದಾವಣಗೆರೆಯ ಹೋರಾಟ ಮುಂಚೂಣಿಗೆ ಬಂದಿತು ಎಂದು ಹಳೆಯ ದಿನಗಳನ್ನು ಮೆಲುಕು ಹಾಕಿದರು.
    ಎಐಟಿಯುಸಿ ಜಿಲ್ಲಾಧ್ಯಕ್ಷ ಕೆ.ರಾಘವೇಂದ್ರ ನಾಯರಿ ಮಾತನಾಡಿ ಆಡಳಿತ ಪಕ್ಷದ ಬದಲಾವಣೆಗಿಂತ ಆಡಳಿತ ನಡೆಸುವವರ ಕಾರ್ಮಿಕ ವಿರೋಧಿ ಮನಸ್ಥಿತಿಯನ್ನು ಬದಲಾವಣೆಯ ಗುರಿಯಾಗಿಸಿ ಈ ಬಾರಿಯ ಕಾರ್ಮಿಕ ದಿನವನ್ನು ಆಚರಿಸಬೇಕು ಎಂದರು.
    ಕಾರ್ಮಿಕ ವಿರೋಧಿ ಮನಸ್ಥಿತಿಯುಳ್ಳ ರಾಜಕಾರಣಿ ಹಾಗೂ ರಾಜಕೀಯ ಪಕ್ಷಗಳೂ ನಮ್ಮ ವಿರೋಧಿಗಳು. ವಿರೋಧ ಪಕ್ಷದಲ್ಲಿದ್ದಾಗ ನಮ್ಮ ಹಿತೈಷಿಗಳಂತೆ ನಟಿಸಿ ಅಧಿಕಾರಕ್ಕೇರಿದಾಗ ನಮ್ಮ ಮೇಲೆಯೇ ಗದಾ ಪ್ರಹಾರ ಮಾಡಿರುವ ರಾಜಕೀಯ ಪಕ್ಷಗಳನ್ನು ನಾವು ಕಂಡಿದ್ದೇವೆ. ಇವೆಲ್ಲವೂ ನಮಗೆ ಪಾಠವಾಗಬೇಕು. ಕಾರ್ಮಿಕರು ರಾಜಕೀಯ ಶಕ್ತಿಯಾಗಿ ಬೆಳೆಯಬೇಕು ಎಂದು ಆಶಿಸಿದರು.
    ಪಕ್ಷದ ಜಿಲ್ಲಾ ಮಂಡಳಿ ಕಾರ್ಯದರ್ಶಿ ಆವರಗೆರೆ ಚಂದ್ರು ಪ್ರಾಸ್ತಾವಿಕ ಮಾತನಾಡಿದರು. ಎಐಟಿಯುಸಿ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಆನಂದರಾಜ್ ಅಧ್ಯಕ್ಷತೆ ವಹಿಸಿದ್ದರು. ಎಐಟಿಯುಸಿ ಜಿಲ್ಲಾ ಸಮಿತಿ ಪ್ರಧಾನ ಕಾರ್ಯದರ್ಶಿ ಎಚ್.ಜಿ. ಉಮೇಶ್, ಮುಖಂಡರಾದ ಟಿ.ಎಸ್.ನಾಗರಾಜ, ಎಂ.ಬಿ. ಶಾರದಮ್ಮ, ರುದ್ರಮ್ಮ ಬೆಳಲಗೆರೆ, ಜಯಪ್ಪ, ವಿ.ಲಕ್ಷ್ಮಣ್, ಟಿ.ಎಚ್. ನಾಗರಾಜ್, ಮಹಮದ್ ಬಾಷಾ, ಮಹ್ಮದ್ ರಫೀಕ್, ಆವರಗೆರೆ ವಾಸು, ಐರಣಿ ಚಂದ್ರು, ಸುಶೀಲಮ್ಮ ಇದ್ದರು. ಕಾರ್ಯಕ್ರಮಕ್ಕೂ ಮುನ್ನ ಪಿ.ಬಸವನಗೌಡ ರಸ್ತೆಯಿಂದ ಜಯದೇವ ವೃತ್ತದವರೆಗೆ ಕಾರ್ಮಿಕ ಸಂಘಟನೆಗಳ ಮುಖಂಡರು, ಕಾರ್ಮಿಕರು ಮೆರವಣಿಗೆ ನಡೆಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts