More

    ಸಿದ್ಧಗಂಗಾ ಮಠದ ವಿದ್ಯಾರ್ಥಿಗೆ ಸೋಂಕು ; ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಸುವ ಜಿಲ್ಲಾಡಳಿತಕ್ಕೆ ಆತಂಕ

    ತುಮಕೂರು: ಸಿದ್ಧಗಂಗಾ ಮಠದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗೆ ಕರೊನಾ ತಗುಲಿರುವುದರಿಂದ ಸುಸೂತ್ರವಾಗಿ ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಸುವ ಜಿಲ್ಲಾಡಳಿತಕ್ಕೆ ದೊಡ್ಡ ಹಿನ್ನೆಡೆಯಾದಂತಾಗಿದೆ.

    ಶ್ರೀಮಠದ 1235 ವಿದ್ಯಾರ್ಥಿಗಳು ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯಲಿದ್ದು, ಜಿಲ್ಲಾಡಳಿತ ಸಾಕಷ್ಟು ಮುಂಜಾಗ್ರತಾ ಕ್ರಮವಹಿಸಿತ್ತು. ಹೊರರಾಜ್ಯದಿಂದ ಬಂದಿದ್ದ ವಿದ್ಯಾರ್ಥಿಗೆ ಸೋಂಕು ಕಾಣಿಸಿಕೊಂಡ ವಿಷಯ ತಿಳಿಯುತ್ತಿದ್ದಂತೆ ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್ ಕುಮಾರ್, ಎಸ್ಪಿ ಡಾ.ಕೆ.ವಂಶಿಕೃಷ್ಣ, ಜಿಲ್ಲಾ ಆರೋಗ್ಯಾಧಿಕಾರಿ ಡಾ.ನಾಗೇಂದ್ರಪ್ಪ, ಡಿಡಿಪಿಐ ಎಂ.ಆರ್.ಕಾಮಾಕ್ಷಿ ಮಠಕ್ಕೆ ಭೇಟಿ ಮಾಹಿತಿ ಪಡೆದಿದ್ದಾರೆ. ಕ್ವಾರಂಟೈನ್‌ನಲ್ಲಿದ್ದ ಮಕ್ಕಳ ಉಸ್ತುವಾರಿ ನೋಡಿಕೊಳ್ಳುತ್ತಿದ್ದ ವಾರ್ಡನ್‌ಗಳು, ಶಿಕ್ಷಕರು ಪ್ರತಿನಿತ್ಯ ಶ್ರೀಗಳ ದರ್ಶನ ಪಡೆದು, ಆಶೀರ್ವಾದ ಪಡೆಯುತ್ತಿದ್ದರು. ಸಹಜವಾಗಿ ಎಲ್ಲರಲ್ಲೂ ಆತಂಕ, ಗಾಬರಿ ಹುಟ್ಟುಹಾಕಿದೆ.

    ಡಿಡಿಪಿಐ ಹೊಣೆ ?: ಲಾಕ್‌ಡೌನ್ ಜಾರಿಯಾಗುತ್ತಿದ್ದಂತೆ ಮಠದಲ್ಲಿದ್ದ ಬಹುತೇಕ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು ಅವರವರ ಊರುಗಳಿಗೆ ತೆರಳಿದ್ದರು. ಸರ್ಕಾರವು ಮಕ್ಕಳು ಇರುವ ಊರುಗಳಲ್ಲೇ ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಟ್ಟಿತ್ತು. ಪಾಲಕರು, ಮಕ್ಕಳನ್ನು ಮನವೊಲಿಸಿ ತಾವಿದ್ದಲ್ಲೇ ಪರೀಕ್ಷೆ ಬರೆಸಲು ಹೇಳುವಂತೆ ಮಠಾಧ್ಯಕ್ಷ ಸಿದ್ದಲಿಂಗ ಶ್ರೀಗಳು ಸೂಚನೆ ನೀಡಿದ್ದರು. ಆದರೆ, ತುಮಕೂರು ತಾಲೂಕು, ಶೈಕ್ಷಣಿಕ ಜಿಲ್ಲೆ ಫಲಿತಾಂಶವು ಶ್ರೀಮಠದಲ್ಲಿ ಮಕ್ಕಳನ್ನು ಅವಲಂಬಿಸಿರುವ ಕಾರಣ ಡಿಡಿಪಿಐ ಎಂ.ಆರ್.ಕಾಮಾಕ್ಷಿ ಅವರೇ ಮಠದ ಶಿಕ್ಷಕರಿಗೆ ಒತ್ತಡಹೇರಿ ಮಕ್ಕಳನ್ನು ಕರೆಸಿದ್ದಾರೆ ಎನ್ನಲಾಗಿದೆ. ಕರೊನಾ ಪೀಡಿತ ಕಲಬುರಗಿ, ಬೀದರ್, ರಾಯಚೂರು, ಯಾದಗಿರಿ, ಗಂಗಾವತಿ ಸೇರಿ ಉತ್ತರ ಕರ್ನಾಟಕ ಭಾಗದಿಂದ ಬಹುತೇಕ ವಿದ್ಯಾರ್ಥಿಗಳು ಮಠಕ್ಕೆ ಬರುತ್ತಿದ್ದು ಇನ್ನಷ್ಟು ಆತಂಕ ಹೆಚ್ಚಿದೆ.

    ಸಿದ್ಧಗಂಗಾ ಮಠ ಕ್ಲಸ್ಟರ್ : ಎಸ್ಸೆಸ್ಸೆಲ್ಸಿ ಪರೀಕ್ಷೆ ಹಿನ್ನೆಲೆಯಲ್ಲಿ ಸಿದ್ಧಗಂಗಾ ಮಠವನ್ನು ಕ್ಲಸ್ಟರ್ ಆಗಿ ಗುರುತಿಸಿದ್ದು, ಒಟ್ಟು 19 ಶಾಲೆಗಳ ಮಕ್ಕಳು ಶ್ರೀಮಠದ 4 ಹಾಗೂ ಕ್ಯಾತಸಂದ್ರದ 1 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ಬರೆಯಲಿದ್ದಾರೆ. ಒಟ್ಟು 2182 ವಿದ್ಯಾರ್ಥಿಗಳು ಈ ಐದು ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ಬರೆಯಲಿದ್ದು, ಹರಳೂರು, ನೇರಳಾಪುರ, ಹಿರೇಹಳ್ಳಿ, ಮೈದಾಳ, ದೇವರಾಯಪಟ್ಟಣ, ಸತ್ಯಮಂಗಲ ಸೇರಿ ಒಟ್ಟು 19 ಶಾಲೆಗಳ ಮಕ್ಕಳು ಮಠದಲ್ಲಿ ಪರೀಕ್ಷೆ ಬರೆಯಲಿದ್ದಾರೆ. ಪರೀಕ್ಷೆಗೆ 6 ದಿನಗಳು ಬಾಕಿಯಿದ್ದು, ಸಹಜವಾಗಿ ಎಲ್ಲ ಮಕ್ಕಳು ಹಾಗೂ ಪಾಲಕರಲ್ಲಿ ಆತಂಕ ಶುರುವಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts