More

    ಸಿದ್ದಿ ಸಮುದಾಯಕ್ಕೆ ಮತ್ತೊಂದು ಗರಿ; ಸಾಂಬ್ರಾಣಿಯ ಹುಸೇನಬಿಗೆ ಜಾನಪದ ಅಕಾಡೆಮಿ ಗೌರವ

    ಓರ್ವಿಲ್ ಫರ್ನಾಂಡೀಸ್ ಹಳಿಯಾಳ: ಸಿದ್ದಿ ಸಮುದಾಯಕ್ಕೆ ಸೇರಿದ ಶತಾಯುಷಿ ಹುಸೇನಬಿ ಬುಡನಸಾಬ ಮುಜಾವರ ಸಿದ್ದಿ (103) ಅವರನ್ನು 2019ನೇ ಸಾಲಿನ ರಾಜ್ಯ ಜಾನಪದ ಆಕಾಡೆಮಿಯ ಗೌರವ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

    ಈ ಜಾನಪದ ಅಕಾಡೆಮಿಯ ಪ್ರಶಸ್ತಿಯಿಂದ ಹಳಿಯಾಳ ತಾಲೂಕಿಗೆ ಜಾನಪದ ಅಕಾಡೆಮಿಯಿಂದ ಎರಡನೇ ಪ್ರಶಸ್ತಿ ದೊರಕಿದಂತಾಗಿದೆ. ಈ ಎರಡೂ ಪ್ರಶಸ್ತಿಗಳು ಬುಡಕಟ್ಟು ಸಿದ್ದಿ ಸಮುದಾಯದವರಿಗೆ ಲಭಿಸಿರುವುದು ವಿಶೇಷ. ಜನಪದ ರಂಗದಲ್ಲಿ ಅನುಪಮ ಸೇವೆ ಸಲ್ಲಿಸಿದ ಹಿನ್ನೆಲೆಯಲ್ಲಿ 2015ನೇ ಸಾಲಿನ ರಾಜ್ಯ ಜಾನಪದ ಅಕಾಡೆಮಿಯ ಗೌರವ ಪ್ರಶಸ್ತಿಗೆ ತಾಲೂಕಿನ ಗಾಡಗೇರೆಯ ಸೋಬಿನ್ ಮೊತೆಸ್ ಕಾಂಬ್ರೆಕರ್ ಭಾಜನರಾಗಿದ್ದರು.

    ಕಲಾಸೇವೆ ನಿರಂತರ: ಬಾಲ್ಯದಿಂದಲೇ ಆಫ್ರಿಕನ್ ವಿಶಿಷ್ಟ ಶೈಲಿಯಲ್ಲಿಯೇ ನೃತ್ಯ ಮಾಡುವ ಹುಸೇನಬಿ, ದಮಾಮ ಚರ್ಮವಾದ್ಯ ಬಾರಿಸುವ ಕಲೆಯಲ್ಲಿ ಪರಿಣತಿ ಪಡೆದವರು. ಜತಗಾದ ಬುಡನಸಾಬ್ ಅವರೊಂದಿಗೆ ವಿವಾಹವಾದ ನಂತರವೂ ಸಾಂಪ್ರದಾಯಿಕ ಹಾಡು, ನೃತ್ಯವನ್ನು ನಿಲ್ಲಿಸಲಿಲ್ಲ. ತಮ್ಮ ಸಮುದಾಯದ ಮದುವೆ, ಮುಂಜಿ ಮೊದಲಾದ ಸಾಮಾಜಿಕ, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ತಪ್ಪದೇ ಭಾಗವಹಿಸುತ್ತ ಬಂದಿದ್ದಾರೆ. ತಮ್ಮ ಕಲೆಯನ್ನು ತಮ್ಮ ಕುಡಿಗಳಿಗೂ, ಸಮಾಜದ ಆಸಕ್ತರಿಗೂ ಕಲಿಸಿದರು. ಪತಿ ನಿಧನರಾದ ನಂತರ ಮರಳಿ ಸಾಂಬ್ರಾಣಿಗೆ ಬಂದ ಹುಸೇನಬಿ, ಮಗಳ ಮನೆಯಲ್ಲಿ ವಾಸ ಮಾಡಿ ತಮ್ಮ ಕಲಾಸೇವೆ ಮುಂದುವರಿಸಿಕೊಂಡು ಹೋಗುತ್ತಿದ್ದಾರೆ. ಹಳಿಯಾಳ, ಯಲ್ಲಾಪುರ, ಮುಂಡಗೋಡ ತಾಲೂಕಿನಲ್ಲಿ ನಡೆಯುವ ಸಿದ್ದಿ ಸಮುದಾಯದ ಮದುವೆ ಸಮಾರಂಭಗಳಲ್ಲಿ, ತೊಟ್ಟಿಲು ಕಾರ್ಯಕ್ರಮಗಳಲ್ಲಿ ಹುಸೇನಬಿ ಗಾನಾ, ಬಜಾನಾ, ಸಿದ್ದಿ ಪುಗುಡಿ ನಾಚ್ ನಡೆಯುತ್ತಿವೆ.

    ಹುಸೇನಬಿ ಕುಟುಂಬ: ಹುಸೇನಬಿ ಅವರು ತಾಲೂಕಿನ ಸಾಂಬ್ರಾಣಿ ಗ್ರಾಮದವರು. ಕೃಷಿ ಕುಟುಂಬದಲ್ಲಿ ಹುಟ್ಟಿದವರು. ಗ್ರಾಮದ ಶ್ರೀ ಲಕ್ಷ್ಮಿದೇವಿ ದೇವಸ್ಥಾನದ ಕೆಳಗಿನ ಓಣಿಯ ಮಗಳ ಮನೆಯಲ್ಲಿ ವಾಸವಿದ್ದಾರೆ. ಹುಸೇನಬಿಗೆ ಮೂವರು ಪುತ್ರರಿದ್ದು, ಅದರಲ್ಲಿ ಇಬ್ಬರು ತೀರಿಕೊಂಡಿದ್ದಾರೆ. ನಾಲ್ಕು ಜನ ಪುತ್ರಿಯರಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts