More

    ಸಿಡಿ ರೋಗದಿಂದ ಮುದುಡಿದ ಕಡಲೆ

    ಶಿವು ಶಶಿಮಠ ಗಜೇಂದ್ರಗಡ

    ಹಿಂಗಾರಿನಲ್ಲಿ ಹುಲುಸಾಗಿ ಬೆಳೆದ ಕಡಲೆ ಬೆಳೆಗೆ ಸಿಡಿ ರೋಗ (ಗಿಡ ಬೇರುಸಮೇತ ಒಣಗುವುದು) ತಗುಲಿದೆ. ಇದರಿಂದಾಗಿ ತಾಲೂಕಿನ ರೈತರ ಬದುಕು ತತ್ತರಗೊಂಡಿದೆ. ಇದರಿಂದಾಗಿ ಉತ್ತಮ ಫಸಲಿನ ನಿರೀಕ್ಷೆಯಲ್ಲಿದ್ದ ರೈತಾಪಿ ವರ್ಗಕ್ಕೆ ದಿಕ್ಕು ತೋಚದಂತಾಗಿದೆ.

    ಮುಂಗಾರಿನಲ್ಲಿ ತೇವಾಂಶ ಹೆಚ್ಚಿ ಬೆಳೆ ಹಾನಿಗೀಡಾದರೆ, ಹಿಂಗಾರಿನಲ್ಲಿ ಬೆಳೆಗಳಿಗೆ ತೇವಾಂಶ ಕೊರತೆ ಉಂಟಾಗಿದೆ. ಬೆಳೆದು ನಿಂತ ಪೈರುಗಳಿಗೆ ಕೀಟಬಾಧೆ ತಗುಲಿ ನಲುಗುತ್ತಿದೆ. ಕಡಲೆ ಫಸಲು ಸಿಡಿ ರೋಗಕ್ಕೆ ತುತ್ತಾಗುತ್ತಿದ್ದು, ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ.

    ಕಳೆದ ವರ್ಷಕ್ಕೆ ಹೋಲಿಕೆ ಮಾಡಿದಲ್ಲಿ ಪ್ರಸಕ್ತ ವರ್ಷ ಕಡಲೆ ಬೀಜ ಬಿತ್ತನೆ ಪ್ರದೇಶ ಹೆಚ್ಚಿದೆ. ತಾಲೂಕಿನಲ್ಲಿ 18 ಸಾವಿರ ಹೆಕ್ಟೇರ್ ಪ್ರದೇಶಕ್ಕೆ ಸೀಮಿತವಾಗಿದ್ದ ಕಡಲೆ ಬೀಜ ಬಿತ್ತನೆ, ಪ್ರಸಕ್ತ ವರ್ಷ 20 ಸಾವಿರ ಹೆಕ್ಟೇರ್ ದಾಟಿದೆ. ತಾಲೂಕಿನಲ್ಲಿ ಶೇ. 25ರಷ್ಟು ಕಡಲೆ ಬೆಳೆ ಈಗ ಸಿಡಿ ರೋಗದಿಂದ ಒಣಗಿದೆ. ಇದು ಇನ್ನೂ ಹೆಚ್ಚಾಗುವ ಭೀತಿ ರೈತರನ್ನು ಚಿಂತೆಗೀಡು ಮಾಡಿದೆ.

    ನಿಯಂತ್ರಣಕ್ಕೆ ಹೆಣಗಾಟ: ಮುಂಗಾರಿನಲ್ಲಿ ಮಾಡಿದ ಸಾಲ ತೀರಿಸಿದರಾಯಿತು ಎಂದು ವಾಣಿಜ್ಯ ಬೆಳೆ ಕಡಲೆ ಬೆಳೆದರೆ ಅದಕ್ಕೀಗ ಸಿಡಿ ರೋಗ ತಗುಲಿದೆ. ರೋಗಬಾಧೆ ನಿಯಂತ್ರಿಸಲು ರೈತರು ಹೆಣಗಾಡುತ್ತಿದ್ದಾರೆ. ದುಬಾರಿ ಬೆಲೆಯ ಕೀಟನಾಶಕ ಖರೀದಿಸಿ ಸಿಂಪಡಣೆ ಮಾಡಿದರೂ ರೋಗ ನಿಯಂತ್ರಣಕ್ಕೆ ಬರುತ್ತಿಲ್ಲ. ಗಜೇಂದ್ರಗಡ, ನರೇಗಲ್ಲ, ಹೊಳೆಆಲೂರ ಭಾಗದಲ್ಲಿ ಸಿಡಿ ರೋಗ ಹೆಚ್ಚಾಗಿ ಕಂಡು ಬಂದಿದೆ. ಹೊಲದಲ್ಲಿ ಅಲ್ಲಲ್ಲಿ ಬೆಳೆ ಸಂಪೂರ್ಣ ಒಣಗಿದೆ. ರೋಗ ದಿನದಿಂದ ದಿನಕ್ಕೆ ವ್ಯಾಪಿಸುತ್ತಿದೆ. ಇದರಿಂದ ಆತಂಕಗೊಂಡ ಕೆಲ ರೈತರು ರೋಗಕ್ಕೆ ತುತ್ತಾದ ಕಡಲೆ ಬೆಳೆ ತೆಗೆದು ಜೋಳ ಬಿತ್ತನೆ ಮಾಡಿದ್ದಾರೆ. ಆದರೆ, ತೇವಾಂಶ ಇಲ್ಲದ್ದರಿಂದ ಜೋಳ ಫಸಲು ಕೂಡ ಕೈಗೆ ಬರುವ ನಿರೀಕ್ಷೆ ಇಲ್ಲ.

    ಸಿಡಿ ರೋಗ ಹತೋಟಿಗೆ ಯಾವುದೇ ಶಾಶ್ವತ ಪರಿಹಾರ ಇಲ್ಲ. ಬಯೋಸ್ಟಿನ್, ಕಾರ್ಬಂಡೈಜಿಮ್ ಔಷಧವನ್ನು ಒಂದು ಲೀಟರ್ ನೀರಿಗೆ 2 ಗ್ರಾಂನಷ್ಟು ಬೆರೆಸಿ ರೋಗ ತಗುಲಿದ ಗಿಡಗಳ ಸುತ್ತ ಮಣ್ಣಿಗೆ ಹಾಕಿದರೆ ರೋಗ ಹರಡದಂತೆ ತಡೆಗಟ್ಟಬಹುದು. ಆದರೆ, ಇದಕ್ಕೆ ಹೆಚ್ಚು ವೆಚ್ಚ ತಗುಲುತ್ತದೆ. ಆದ್ದರಿಂದ ರೈತರು ಪ್ರತಿ ವರ್ಷ ಬೆಳೆ ಪರಿವರ್ತನೆ ಮಾಡುವ ಮೂಲಕ ಮುಂಜಾಗ್ರತೆ ಕ್ರಮ ಕೈಗೊಳ್ಳುವುದು ಅವಶ್ಯವಾಗಿದೆ.
    | ಸಾವಿತ್ರಿ ಶಿವನಗೌಡ್ರ ಕೃಷಿ ಅಧಿಕಾರಿ ನರೇಗಲ್ಲ

    ಸಾಲ- ಸೋಲ ಮಾಡಿ, ಬೀಜ, ಗೊಬ್ಬರ ತಂದು ಬಿತ್ತೇವಿ. ಆದ್ರ ಭೂಮಿ ಹಸಿ ಇಲ್ಲ. ಮಾಡಿದ್ದೆಲ್ಲ ಹೊಳ್ಯಾಗ ಹುಣಸೀಹಣ್ಣು ತೊಳೆದಂಗ ಆಗೇತಿ. ಸಿಡಿ ರೋಗ ಕಡ್ಲಿ ಬೆಳಿ ನಾಶ ಮಾಡೇತಿ. ಔಷಧ ಹೊಡದ್ರೂ ಉಪಯೋಗ ಆಗ್ತಿಲ್ಲ. ನಮ್ಮ ಬದುಕ ಭಾರ ಆಗೇತಿ.
    | ಮಹಾಂತಯ್ಯ ಕಪ್ಲಿಮಠ ಕೊಡಗಾನೂರ ಗ್ರಾಮದ ರೈತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts