More

    ಸಿಗಂದೂರಿನಲ್ಲಿ ಜಾತ್ರಾ ಸಂಭ್ರಮ; ದೇವಿಯ ಮೂಲಸ್ಥಾನ ಸೀಗೇಕಣಿವೆಯಲ್ಲಿ ಧಾರ್ಮಿಕ ಕೈಂಕರ್ಯ: ಹರಿದು ಬಂದ ಭಕ್ತಸಾಗರ

    ಬ್ಯಾಕೋಡು: ಸಿಗಂದೂರು ಶ್ರೀ ಚೌಡಮ್ಮ ದೇವಿಯ ಎರಡು ದಿನಗಳ ವಾರ್ಷಿಕ ಜಾತ್ರೋತ್ಸವ ಶನಿವಾರ ಆರಂಭವಾಗಿದ್ದು ಮೊದಲ ದಿನವೇ ಸಾವಿರಾರು ಭಕ್ತರು ದೇವಿಯ ದರ್ಶನಪಡೆದು ಪುನೀತರಾದರು.
    ಮುಂಜಾನೆ ಶ್ರೀ ಚೌಡೇಶ್ವರಿ ದೇವಿಯ ಮೂಲ ಸ್ಥಾನ ಸೀಗೇ ಕಣಿವೆಯಲ್ಲಿ ಧರ್ಮಾಧಿಕಾರಿಗಳ ಕುಟುಂಬ ಸದಸ್ಯರು ಆಗಮಿಸಿ ಶರಾವತಿ ನದಿ ದಂಡೆಯಲ್ಲಿರುವ ಮೂಲ ಸ್ಥಾನದಲ್ಲಿ ಚಂಡಿಕಾ ಹೋಮ, ನವ ಚಂಡಿಕಾ ಹವನ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಅರ್ಚಕರ ಪೌರೋಹಿತ್ಯದಲ್ಲಿ ನೆರವೇರಿಸಿದರು. ಬಳಿಕ ಚಂಡಿಕಾ ಹವನದ ಪೂರ್ಣಾಹುತಿ ನಡೆಯಿತು. ಈ ಮೂಲಕ ದೇವಿಯ ಮೂಲಸ್ಥಾನದಲ್ಲಿ ಕಲ್ಪೋಕ್ತ ಪೂಜೆ ನೇರವೇರಿತು. ದೇವಿ ಮೂಲಸ್ಥಾನದಲ್ಲಿ ಹಳದಿ ಬಂಟಿಂಗ್ಸ್‌ಗಳು ರಾರಾಜಿಸಿದ್ದು ತಳಿರು ತೋರಣ ಕಟ್ಟಲಾಗಿತ್ತು.
    ಕಾರ್ಗಲ್ ಸಮೀಪದ ವಡನ್‌ಬೈಲ್ ಪದ್ಮಾವತಿ ದೇವಸ್ಥಾನ ಧರ್ಮದರ್ಶಿ ವೀರರಾಜಯ್ಯ ಜೈನ್ ಅವರು ದೇವಿಯ ಜ್ಯೋತಿ ರೂಪದ ಮೆರವಣಿಗೆಗೆ ಚಾಲನೆ ನೀಡಿದರು. ಕರೂರು, ಭಾರಂಗಿ ಹೋಬಳಿಯ 1,200ಕ್ಕೂ ಹೆಚ್ಚು ಮಹಿಳೆಯರು ಪೂರ್ಣ ಕುಂಭ ಕಳಶ ಹೊತ್ತು ಸೀಗೆ ಕಣಿವೆಯಿಂದ ಸಿಗಂದೂರಿಗೆ ಮೆರವಣಿಗೆಯಲ್ಲಿ ಬಂದರು. ಮೆರವಣಿಗೆಯ ಉದ್ದಕ್ಕೂ ಚಂಡೆ, ವಾದ್ಯ, ವೀರಗಾಸೆ, ಕಂಸಾಳೆ, ಕೋಲಾಟ, ಗೊಂಬೆಯಾಟಗಳು ಸಾಥ್ ನೀಡಿದ್ದು ಭಕ್ತರಿಗೆ ಹುಮ್ಮಸ್ಸನ್ನು ಇಮ್ಮಡಿಗೊಳಿಸಿತು.
    ಮಕರ ಸಂಕ್ರಾಂತಿ ಹಬ್ಬದ ಹಿನ್ನೆಲೆಯಲ್ಲಿ ಸಿಗಂದೂರು ಚೌಡೇಶ್ವರಿ ದೇವಿಯ ಜಾತ್ರಾ ಮಹೋತ್ಸವದ ಮೊದಲ ದಿನದ ಪ್ರಥಮ ಪೂಜೆಯಲ್ಲಿ ಧರ್ಮಾಧಿಕಾರಿ ಡಾ. ಎಸ್.ರಾಮಪ್ಪ ಅವರು ಭಾಗವಹಿಸಿದರು. ಕರೂರು, ಭಾರಂಗಿ ಸಾಗರ, ಶಿವಮೊಗ್ಗ, ಮೈಸೂರು, ಬೆಂಗಳೂರು, ಉತ್ತರ ಕರ್ನಾಟಕದ ನಾನಾ ಭಾಗಗಳಿಂದ ಆಪಾರ ಪ್ರಮಾಣದ ಭಕ್ತರು ಆಗಮಿಸಿ ದೇವಿಯ ದರ್ಶನ ಪಡೆದರು. ಜಾತ್ರೆಯ ಬೆಳಗಿನ ಜಾವ 4 ಗಂಟೆಯಿಂದ ಸಂಜೆ 7ಗಂಟೆಯ ವರೆಗೆ ನಿರಂತರವಾಗಿ ದೇವಿಯ ದರ್ಶನಕ್ಕೆ ಅವಕಾಶ ಕಲ್ಪಿಸಿದ್ದು ಭಕ್ತರು ತಂಡೋಪ ತಂಡವಾಗಿ ದೇವಿ ದರ್ಶನ ಪಡೆದರು.
    ಕಳೆದೆರಡು ವರ್ಷಗಳಿಂದ ಕರೊನಾ ಸೋಂಕಿನ ಹಿನ್ನೆಲೆಯಲ್ಲಿ ಜಾತ್ರೆ ಸರಳವಾಗಿ ಧಾರ್ಮಿಕ ಕಾರ್ಯಕ್ರಮಗಳಿಗೆ ಮಾತ್ರ ಸೀಮಿತವಾಗಿತ್ತು. ಆದರೆ ಈ ಬಾರಿ ಸಾಕಷ್ಟು ಅಚ್ಚುಕಟ್ಟಾಗಿ, ವೈಭವಯುತವಾಗಿ ಒಂದು ತಿಂಗಳಿನಿಂದ ಉತ್ಸವದ ತಯಾರಿ ಮಾಡಿಕೊಳ್ಳಲಾಗಿತ್ತು. ಎಲ್ಲರಿಗೂ ದಾಸೋಹ ವ್ಯವಸ್ಥೆ ಮಾಡಲಾಗಿತ್ತು.
    ಗಂಗಾರತಿ, ಸಿಡಿಮದ್ದು ಪ್ರದರ್ಶನ: ಸಂಜೆ 4 ಗಂಟೆಯಿಂದ ವೇದಿಕೆ ಕಾರ್ಯಕ್ರಮ ಆರಂಭವಾಗಿದ್ದು ವಡನ್‌ಬೈಲ್ ಪದ್ಮಾವತಿ ದೇವಸ್ಥಾನ ಧರ್ಮದರ್ಶಿ ವೀರರಾಜಯ್ಯ ಜೈನ್ ಮಾತನಾಡಿ, ದೇವಿಯ ಸನ್ನಿಧಿಯಲ್ಲಿ ಧರ್ಮಾಧಿಕಾರಿ ರಾಮಪ್ಪ ಅವರ ನೇತೃತ್ವದಲ್ಲಿ ಉತ್ತಮ ಕೆಲಸ ನೆಡೆಯುತ್ತಿದೆ ಎಂದು ಹೇಳಿದರು. ಕೃಷಿ, ಶಿಕ್ಷಣ, ಧಾರ್ಮಿಕ, ಈ ಭಾಗದ ನಿವೃತ್ತ ಸರ್ಕಾರಿ ನೌಕರರಿಗೆ ಹಾಗೂ ಗೆವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರಿಗೆ ಗೌರವ ಸಮರ್ಪಣೆ ಮಾಡಲಾಯಿತು. ಸಂಜೆ 5ರಿಂದ ಸಾಂಸ್ಕೃತಿಕ ಹಾಗೂ ಗಂಗಾರತಿ, ಸಿಡಿಮದ್ದು ಪ್ರದರ್ಶನ ನೆರವೇರಿತು. ಸಾವಿರಾರು ಜನರು ಕಾರ್ಯಕ್ರಮ ಕಣ್ತುಂಬಿಕೊಂಡರು. ರಾತ್ರಿ ಶ್ರೀ ಕ್ಷೇತ್ರದ ಮೇಳದಿಂದ ಯಕ್ಷಗಾನ ಪ್ರದರ್ಶಿಸಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts