More

    ಸಾಹಿತ್ಯ ಮಾನವೀಯ ಸಂಬಂಧದ ಸೇತು   -ಶಿವಪ್ರಸಾದ ಕರ್ಜಗಿ ಅಭಿಮತ -ಕೃತಿ ಬಿಡುಗಡೆ 

    ದಾವಣಗೆರೆ: ಸಾಹಿತ್ಯದ ಓದಿನಿಂದ ಮನುಷ್ಯನ ಪರಿವರ್ತನೆ ಆಗಲಿದೆ. ಮಾನವೀಯ ಸಂಬಂಧ ಗಟ್ಟಿಗೊಳ್ಳಲಿದೆ ಎಂದು ಸಾಹಿತಿ ಶಿವಪ್ರಸಾದ ಕರ್ಜಗಿ ಹೇಳಿದರು.
    ವನಿತಾ ಸಮಾಜದಲ್ಲಿ ಶನಿವಾರ, ಕವಿ ರಾಜೇಂದ್ರಪ್ರಸಾದ್ ನೀಲಗುಂದ ಅವರ ‘ಒಡಲೆಂಬೋ ಕಡಲ ಮುತ್ತುಗಳು’ ಹನಿಗವನಗಳ ಸಂಕಲನ ಬಿಡುಗಡೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
    ಇಂದು ಕೃತಿಗಳ ಓದುಗರ ಸಂಖ್ಯೆ ಕಡಿಮೆಯಾಗಿದೆ. ಮೊಬೈಲ್, ಟಿವಿ ಮಾಧ್ಯಮಗಳಿಂದಾಗಿ ಜನರು ಸಾಹಿತ್ಯ ಕ್ಷೇತ್ರದ ಬಗ್ಗೆ ಆಸಕ್ತಿ ವಹಿಸದ ಸ್ಥಿತಿ ಇದೆ. ಮಕ್ಕಳಲ್ಲೂ ಸಾಹಿತ್ಯಕ ವಾತಾವರಣವಿಲ್ಲವಾಗಿದೆ ಎಂದು ವಿಷಾದಿಸಿದರು.
    ಕವನ ಸಂಕಲನ ಬಿಡುಗಡೆಗೊಳಿಸಿದ ಹಿರಿಯ ಕತೆಗಾರ್ತಿ ಸುಶೀಲಾದೇವಿ ಆರ್.ರಾವ್ ಮಾತನಾಡಿ ಹನಿಗವನ ಪ್ರಕಾರದಲ್ಲಿ ಗಂಭೀರ ವಿಚಾರಗಳ ಚಿಂತನೆ ಅಗತ್ಯವಿದೆ ಎಂದು ಹೇಳಿದರು.
    ಸಾಹಿತ್ಯ ಕ್ಷೇತ್ರದಲ್ಲಿ ಹನಿಗವನಗಳು ಅತ್ಯಂತ ಸೂಕ್ಷ್ಮ ಸಂವೇದನೆ ಒಳಗೊಂಡಿದ್ದು ಎಲ್ಲರಿಗೂ ಸರಳವಾಗಿ ಅರ್ಥವಾಗುತ್ತವೆ. ಕಿರಿದಾದ ಪದ್ಯವಾದರೂ ಭಾವಸ್ಪಂದಿಯಾಗಿದ್ದು, ಶಬ್ದಗಳ ಚಮತ್ಕಾರ ಗಮನಾರ್ಹವಾಗಿರುತ್ತವೆ ಎಂದು ತಿಳಿಸಿದರು.
    ಕೃತಿ ಕುರಿತು ಮಾತನಾಡಿದ ಸಾಹಿತಿ ಎಸ್. ಓಂಕಾರಯ್ಯ ತವನಿಧಿ, ಸಮಾಜದಲ್ಲಿ ಕವಿಗೆ ಹೆಚ್ಚಿನ ಜವಾಬ್ದಾರಿ ಇದೆ. ಅದಕ್ಕಾಗಿ ಹೆಚ್ಚು ಅಧ್ಯಯನಶೀಲರಾಗಬೇಕು. ನೂರು ಪುಸ್ತಕಗಳ ಓದು ಒಂದು ಕೃತಿ ರಚನೆಗೆ ನೆರವಾಗಲಿದೆ ಎಂದರು.
    ಸಾಹಿತ್ಯ ಸೃಷ್ಟಿಗೆ ಯಾವುದೇ ಕಾಲೇಜು, ವಿವಿಗಳಲ್ಲಿ ಪಠ್ಯಕ್ರಮವಿಲ್ಲ. ಸ್ವಯಂ ಪ್ರತಿಭೆಯಿಂದಲೇ ಸಾಹಿತ್ಯದ ಅಭಿವ್ಯಕ್ತಿಯಾಗಲಿದೆ. ರಾಜೇಂದ್ರ ಪ್ರಸಾದ್ ಅವರ ಕೆಲ ಕವಿತೆಗಳು ಗಂಭೀರ ಸ್ವರೂಪದಲ್ಲಿದ್ದು ಚಿಂತನೆಗಹೆ ಹಚ್ಚಲಿವೆ ಎಂದು ತಿಳಿಸಿದರು.
    ಹರಪನಹಳ್ಳಿ ಎಸ್‌ಯುಜೆಎಂ ಕಾಲೇಜಿನ ಪ್ರಾಚಾರ್ಯ ಎಚ್. ಮಲ್ಲಿಕಾರ್ಜುನ ಮಾತನಾಡಿ ಶಾಲಾ-ಕಾಲೇಜುಗಳಲ್ಲಿ ಸಾಹಿತ್ಯಕ್ಕೆ ಪೂರಕ ವಾತಾವರಣವಿದೆ. ಕನ್ನಡ ಶಿಕ್ಷಕರು ಸಾಹಿತ್ಯವನ್ನು ಬೆಳೆಸುವ ನಿಟ್ಟಿನಲ್ಲಿ ಹೆಚ್ಚು ಕ್ರಿಯಾಶೀಲರಾಗಬೇಕು. ಆದರೆ ಶಿಕ್ಷಕ ವಲಯದಲ್ಲಿ ಆಸಕ್ತಿ ಮತ್ತು ಯೋಚನೆಯ ಕೊರತೆ ಇದೆ. ಕೃತಿಕಾರರ ಸಂಖ್ಯೆ ಹೆಚ್ಚಿದ್ದರೂ ಓದುಗರ ಸಂಖ್ಯೆ ಕ್ಷೀಣಿಸಿದೆ ಎಂದು ವಿಷಾದಿಸಿದರು.
    ಕೆಲವರು ಮೊಬೈಲ್‌ನಲ್ಲೇ ಓದು ಬರಹ ರೂಢಿಸಿಕೊಂಡಿದ್ಧಾರೆ. ಪುಸ್ತಕಗಳನ್ನು ಕೊಂಡು ಓದುವ ಹವ್ಯಾಸ ಕಡಿಮೆಯಾಗಿದೆ. ಇದು ನಿಲ್ಲಬೇಕು. ಲೇಖಕರನ್ನು ಪ್ರೋತ್ಸಾಹಿಸುವ ಕೆಲಸ ಹೆಚ್ಚಬೇಕಿದೆ ಎಂದು ಆಶಿಸಿದರು.
    ನಗರ ಕೇಂದ್ರ ಗ್ರಂಥಾಲಯದ ಉಪನಿರ್ದೇಶಕ ಪಿ.ಆರ್.ತಿಪ್ಪೇಸ್ವಾಮಿ, ಉಪನ್ಯಾಸಕ ಎಸ್.ಆರ್. ನಯನಜಮೂರ್ತಿ, ಸಂಡೂರಿನ ವಕೀಲ ಬಿ.ಎಸ್.ಮಂಜುನಾಥ, ಕಸಾಪ ತೆಲಗಿ ಹೋಬಳಿ ಘಟಕದ ಅಧ್ಯಕ್ಷ ಕೆ.ಎಸ್.ವೀರಭದ್ರಪ್ಪ, ದಾವಣಗೆರೆ ಜಿಲ್ಲಾ ಕವಿವೃಕ್ಷ ಬಳಗದ ಅಧ್ಯಕ್ಷ ಕೆ.ಎನ್. ರಂಗನಾಥ ಇದ್ದರು.
    ಎಚ್.ಕೆ.ಸತ್ಯಭಾಮಾ ಮಂಜುನಾಥ್ ಪ್ರಾರ್ಥನೆ ಹಾಡಿದರೆ, ಎಸ್.ಉಮಾದೇವಿ ಸ್ವಾಗತಿಸಿದರು. ಕೃತಿಕಾರ ರಾಜೇಂದ್ರಪ್ರಸಾದ್ ನೀಲಗುಂದ ವಂದಿಸಿದರು.
    —-

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts