More

    ಸಾಹಿತ್ಯದಲ್ಲಿ ಹೊಸ ಅಲೆ ಸೃಷ್ಟಿಸಿದ ತೇಜಸ್ವಿ

    ಬಣಕಲ್: ಎಲ್ಲರ ಮನಸ್ಸು ತಟ್ಟಬಹುದಾದ ವಿಶಿಷ್ಟ ಬರಹದ ಮೂಲಕ ಕನ್ನಡದಲ್ಲಿ ಹೊಸ ಅಲೆ ಸೃಷ್ಟಿಸಿದವರು ತೇಜಸ್ವಿ ಎಂದು ಶಂಕರಘಟ್ಟದ ಕುವೆಂಪು ವಿಶ್ವವಿದ್ಯಾಲಯದ ನಿವೃತ್ತ ಪ್ರೊ. ಡಾ. ಕೆ.ಕೇಶವಶರ್ಮ ಹೇಳಿದರು. ಕೊಟ್ಟಿಗೆಹಾರದ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಮತ್ತು ಚಿಕ್ಕಮಗಳೂರಿನ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಕೊಟ್ಟಿಗೆಹಾರದ ಪ್ರತಿಷ್ಠಾನದಲ್ಲಿ ಸೋಮವಾರ ಆಯೋಜಿಸಿದ್ದ ತೇಜಸ್ವಿ ಸಾಹಿತ್ಯ ಸಂಭ್ರಮ ಕಾರ್ಯಕ್ರಮದಲ್ಲಿ ಮಾತನಾಡಿದರು.

    ತೇಜಸ್ವಿ ವ್ಯಕ್ತಿ ವಿಶಿಷ್ಟ ಸಿದ್ಧಾಂತ ಕೃತಿಯಲ್ಲಿ ಹೇಳಿದ ಅಂಶಗಳು ಅವರ ಬಹುತೇಕ ಕೃತಿಗಳಲ್ಲಿ ಮತ್ತೆ ಮತ್ತೆ ಕಾಣಸಿಗುತ್ತದೆ. ತೇಜಸ್ವಿ ಅವರ ಕೃತಿಗಳು ಒಂದೇ ಓದುಗ ವರ್ಗಕ್ಕೆ ಸೀಮಿತವಾಗಿಲ್ಲ. ಶಾಲಾ ಮಕ್ಕಳಿಂದ ವೃದ್ಧರವರೆಗೂ ಎಲ್ಲ ವರ್ಗದವರೂ ಓದುವಂತಹ ಕೃತಿಗಳನ್ನು ಬರೆದಿದ್ದಾರೆ ಎಂದರು.

    ಆದರ್ಶ ಪುರುಷರ ಕುರಿತು ಹೇಳುವುದು ಅವರ ಉದ್ದೇಶವಾಗಿರಲಿಲ್ಲ. ಸಾಮಾನ್ಯ ಮನುಷ್ಯರ ಕುರಿತು ತೇಜಸ್ವಿ ಬರೆದರು. ತೇಜಸ್ವಿ ಅವರ ಕೃತಿಗಳನ್ನು ಓದುವಾಗ ಅಲ್ಲಿನ ಪಾತ್ರಗಳು ನಮ್ಮ ನಡುವಿನ ಪಾತ್ರಗಳೇ ಅನ್ನುವಷ್ಟು ಆಪ್ತ ಅನಿಸುತ್ತದೆ. ಲಂಕೇಶ್, ಅನಂತಮೂರ್ತಿ, ಅಡಿಗರು ಬರೆಯುತ್ತಿದ್ದ ಕಾಲಘಟ್ಟದಲ್ಲಿ ಬರೆದ ತೇಜಸ್ವಿ ನವ್ಯದ ಗೀಳಿನಿಂದ ಹೊರಬಂದು ಎಲ್ಲರಿಗೂ ಅರ್ಥವಾಗಬಹುದಾದ ಕಥೆ, ಕಾದಂಬರಿಗಳನ್ನು ಬರೆದರು ಎಂದು ವಿಶ್ಲೇಷಿಸಿದರು.

    ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನದ ಸದಸ್ಯ ಕಾರ್ಯದರ್ಶಿ ಡಾ. ಸಿ.ರಮೇಶ್ ಮಾತನಾಡಿ, ಕನ್ನಡ ತಂತ್ರಜ್ಞಾನ ಸ್ನೇಹಿ ಭಾಷೆಯಾಗಬೇಕು ಎಂಬುದು ತೇಜಸ್ವಿ ಅವರ ಆಸೆಯಾಗಿತ್ತು. ತೇಜಸ್ವಿ ಅವರಿಗೆ ವಿಜ್ಞಾನ, ತಂತ್ರಜ್ಞಾನದ ಬಗ್ಗೆ ವಿಶೇಷ ಆಸಕ್ತಿ ಇತ್ತು. ಬಹುಮುಖ ವ್ಯಕ್ತಿತ್ವದ ತೇಜಸ್ವಿ ಅವರ ಬದುಕು, ಬರಹ ಚಿಂತನೆಗಳ ಅನುಷ್ಠಾನಕ್ಕಾಗಿ ತೇಜಸ್ವಿ ಪ್ರತಿಷ್ಠಾನ ಕಾರ್ಯೋನ್ಮುಖವಾಗಿದೆ ಎಂದರು.

    ತೇಜಸ್ವಿ ಒಡನಾಡಿಯಾದ ರಾಘವೇಂದ್ರ ಮಾತನಾಡಿ, ತೇಜಸ್ವಿ ಅವರಿಗೆ ಎಲ್ಲ ವಿಷಯದ ಬಗ್ಗೆ ವಿಶೇಷ ಕುತೂಹಲವಿತ್ತು. ಕುತೂಹಲದ ಕಣ್ಣಿನಿಂದ ಜಗತ್ತನ್ನು ಕಂಡು ಅದನ್ನೇ ಕೃತಿಗಳಲ್ಲಿ ತಂದರು. ಬದುಕಿನ ಅನುಭವದಿಂದ ಬಂದ ಬರಹವಾಗಿರುವುದರಿಂದ ತೇಜಸ್ವಿ ಅವರ ಕೃತಿಗಳು ಓದುಗರಿಗೆ ಆಪ್ತ್ರಾಗುತ್ತದೆ ಎಂದು ಅಭಿಪ್ರಾಯಪಟ್ಟರು. ಶಾಲಾ ವಿದ್ಯಾರ್ಥಿಗಳಿಗೆ ಪ್ರಬಂಧ ಸ್ಪರ್ಧೆ ಹಾಗೂ ಚಿಕ್ಕಮಗಳೂರಿನ ಶಾಂತಿನಿಕೇತನಾ ಚಿತ್ರಕಲಾ ಮಹಾವಿದ್ಯಾಲಯದಿಂದ ಡಿಜಿಟಲ್ ಚಿತ್ರ ಪ್ರದರ್ಶನ ನಡೆಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts