More

    ಸಾಹಸಪ್ರಿಯರ ಬದುಕು ದುಸ್ತರ

    ಸುಭಾಸ ಧೂಪದಹೊಂಡ ಕಾರವಾರ

    ಅವರು ಬಾವಿಯಲ್ಲಿ ಬೈಕ್ ಓಡಿಸುವ ಗಟ್ಟಿ ಗುಂಡಿಗೆ ಇರುವವರು. ಒಂಟಿ ಹಗ್ಗದ ಮೇಲೆ, ತಿರುಗುವ ಚಕ್ರದ ಮೇಲೆ ನಡೆಯುವಷ್ಟು ಸಮತೋಲನ ಹೊಂದಿದವರು. ಇಂತಹ ಸಾಹಸಿಗರನ್ನು ಕರೊನಾ ಕಂಗಾಲು ಮಾಡಿದೆ. ಅವರ ಜೀವನದ ಸಮತೋಲನ ತಪ್ಪಿಸಿಬಿಟ್ಟಿದೆ.

    ಶಿರಸಿ ಮಾರಿಕಾಂಬಾ ಜಾತ್ರೆಗೆ ಬಂದ ಅಪೊಲೊ ಸರ್ಕಸ್ ಕಂಪನಿಯ 52 ಜನರು ಲಾಕ್​ಡೌನ್​ನಿಂದ ಪ್ರದರ್ಶನವಿಲ್ಲದೆ ಇಲ್ಲಿಯೇ ಸಿಕ್ಕಿಹಾಕಿಕೊಂಡಿದ್ದಾರೆ. ದಿನದಿಂದ ದಿನಕ್ಕೆ ಕಂಪನಿಯ ಪರಿಸ್ಥಿತಿ ಹದಗೆಡುತ್ತಿದ್ದು, ಊಟಕ್ಕೂ ತತ್ವಾರ ಉಂಟಾಗುತ್ತಿದೆ. ವಿಧ ವಿಧದ ಸರ್ಕಸ್ ಮಾಡಿ ಲಕ್ಷಾಂತರ ಜನರನ್ನು ನಗಿಸಿದವರು, ಚಪ್ಪಾಳೆ ಗಿಟ್ಟಿಸಿದವರು ಇಂದು ಕಣ್ಣೀರಿಡುತ್ತಿದ್ದಾರೆ. ಅನ್ನ, ಆಶ್ರಯಕ್ಕೆ ಅಂಗಲಾಚುತ್ತಿದ್ದಾರೆ.

    ಕೇರಳ ತಿರುಚಿ ಮೂಲದ ಸನಿಲ್ ಜಾರ್ಜ್ ಅವರ ಮಾಲೀಕತ್ವದ ಅಪೊಲೊ ಸರ್ಕಸ್ ಮಾ. 6ರಂದು ಶಿರಸಿ ಕೋಟೆಕೆರೆಯಲ್ಲಿ ಟೆಂಟ್ ಹಾಕಿತು. ಮಾ. 11ಕ್ಕೆ ಪ್ರದರ್ಶನವನ್ನು ಕರೊನಾ ಕಾರಣದಿಂದ ಬಂದ್ ಮಾಡಲಾಯಿತು. ಬೇರೆಡೆ ಪ್ರದರ್ಶನಕ್ಕೂ ಅವಕಾಶವಿಲ್ಲದ ಕಾರಣ ಕಂಪನಿಯು ಅಂದಿನಿಂದ ಇಂದಿನವರೆಗೂ ಇಲ್ಲೇ ನೆಲೆಯೂರಿದೆ.

    ಕಂಪನಿಯಲ್ಲಿ ಒಟ್ಟು 12 ಲಾರಿಯಷ್ಟು ಸಾಮಗ್ರಿಗಳಿದ್ದು, ಈಗ ಮಳೆಯಾಗುತ್ತಿರುವುದರಿಂದ ಕೋಟೆಕೆರೆಯಲ್ಲಿ ನೀರು ಬರಲಾರಂಭಿಸಿದೆ. ಜತೆಗೆ ಹಾವುಗಳೂ ಬರುತ್ತಿವೆ. ಪ್ರಾಣಿಗಳಿಗೂ ಹೆದರದೇ ಅವುಗಳನ್ನೇ ಆಟವಾಡಿಸಿ, ಎತ್ತರದಿಂದ ಬಿದ್ದು, ದೇಹವನ್ನು ಬಗ್ಗಿಸಿ ಜನರ ಎದೆ ಝುಲ್ಲೆನಿಸುವ ಸಾಹಸ ಮಾಡುತ್ತಿದ್ದ ಸರ್ಕಸ್​ವಾಲಾಗಳು ಅಕ್ಷರಶಃ ಅಧೀರರಾಗಿದ್ದಾರೆ.

    ಹಲವರಿಗೆ ಮನೆಯೇ ಇಲ್ಲ. ನನ್ನನ್ನೇ ನಂಬಿದ್ದಾರೆ. ಅವರನ್ನು ನಾನು ಎಲ್ಲಿಗೆ ಕಳಿಸಿಕೊಡಲಿ. ನೇಪಾಳದವರನ್ನು ಸದ್ಯ ಕಳಿಸಿಕೊಡಲು ಸಾಧ್ಯವಿಲ್ಲ. ಇದುವರೆಗೆ ಇಷ್ಟೊಂದು ಜನರಿಗೆ ಅನ್ನ ನೀಡುತ್ತಿದ್ದ ನಾನು ಬೇಡುವ ಪರಿಸ್ಥಿತಿ ಬಂದಿದೆ. ಇದುವರೆಗೆ ಶಿರಸಿಯ ಕೆಲ ಸ್ಥಳೀಯರು, ಸರ್ಕಾರ ನಮಗೆ ಊಟ, ತಿಂಡಿಗೆ ಸಹಾಯ ಮಾಡಿದೆ. ನಮಗೆ ಸರ್ಕಾರ ಅಥವಾ ಉಳ್ಳವರು ಇನ್ನಷ್ಟು ನೆರವಾಗಬೇಕು.
    | ಸನಿಲ್ ಜಾರ್ಜ್ ಅಪೊಲೊ ಸರ್ಕಸ್ ಕಂಪನಿ ಮಾಲೀಕ

    ಹಲವರಿಗೆ ಮನೆಯೇ ಇಲ್ಲ
    ನೇಪಾಳದ 12 ಮಹಿಳೆಯರು, ಕೋಲ್ಕತ, ಬಿಹಾರ, ಒರಿಸ್ಸಾ, ಪಂಜಾಬ್ ಸೇರಿ ವಿವಿಧ ರಾಜ್ಯಗಳ ಜನರಿದ್ದಾರೆ. ಇದರಲ್ಲಿ 15 ಕ್ಕೂ ಹೆಚ್ಚು ಜನರಿಗೆ ಮನೆಯೇ ಇಲ್ಲ. ಈ ಸರ್ಕಸ್ಸೇ ಜೀವನ. ಇಡೀ ದೇಶ ಸುತ್ತಿ ವರ್ಷದ 12 ತಿಂಗಳೂ ಸರ್ಕಸ್ ಮಾಡುತ್ತಲೇ ಬದುಕು ಕಟ್ಟಿಕೊಂಡಿದ್ದಾರೆ. ತಿಂಗಳಲ್ಲಿ ಐದು ದಿನ ಒಂದೆಡೆಯಿಂದ ಇನ್ನೊಂದೆಡೆಗೆ ಕಂಪನಿಯನ್ನು ಸ್ಥಳಾಂತರ ಮಾಡುತ್ತೇವೆ. ಇದೇ ಮೊದಲ ಬಾರಿಗೆ ಎರಡು ತಿಂಗಳಿಂದ ಯಾವುದೇ ಪ್ರದರ್ಶನವಿಲ್ಲ. ಗಳಿಕೆಯೂ ಇಲ್ಲ. ಸದ್ಯಕ್ಕೆ ಸರ್ಕಸ್ ಪ್ರದರ್ಶನಕ್ಕೆ ಅವಕಾಶ ಸಿಗುವ ಯಾವುದೇ ಲಕ್ಷಣವಿಲ್ಲ. ಇದರಿಂದ ಸರ್ಕಸ್​ವಾಲಾಗಳು ದಿಕ್ಕು ತೋಚದಂತಾಗಿದ್ದಾರೆ. ತಮ್ಮನ್ನು ನಂಬಿದವರನ್ನು ಏನು ಮಾಡಬೇಕು ಎಂದು ತಿಳಿಯದೇ ಕಂಪನಿ ಮಾಲೀಕ ಪರಿತಪಿಸುತ್ತಿದ್ದಾರೆ. ಎಲ್ಲರ ಊಟ, ತಿಂಡಿ, ಜನರೇಟರ್ ಖರ್ಚು ಎಲ್ಲ ಸೇರಿ ಪ್ರತಿ ದಿನ ಅಂದಾಜು 8 ಸಾವಿರ ರೂ. ವ್ಯಯವಾಗುತ್ತಿದೆ. ಕೂಡಿಟ್ಟ ಹಣವೆಲ್ಲ ಖರ್ಚಾಗಿದೆ. ಸಾಲವೂ ಸಿಗದಂತಾಗಿದೆ. ಇನ್ನು ಮೇಲೆ ನೌಕರರಿಗೆ ಊಟ ಹಾಕುವುದೂ ಕಷ್ಟವಿದೆ ಎನ್ನುತ್ತಾರೆ ಕಂಪನಿ ಮಾಲೀಕ ಸನಿಲ್ (ಮೊ: 9895051815).

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts