More

    ಸಾವಿರ ಕೋಟಿ ರೂ. ಬೆಳೆ ನಷ್ಟ

    ಜಯತೀರ್ಥ ಪಾಟೀಲ ಕಲಬುರಗಿ
    ಅಬ್ಬರದ ಮಳೆ ಮತ್ತು ಪ್ರವಾಹಕ್ಕೆ ತೊಗರಿ ಕಣಜ ಅಕ್ಷರಶಃ ನಲುಗಿದ್ದು, ಜಿಲ್ಲೆಯ 10.70 ಲಕ್ಷ ಎಕರೆ (4.28 ಲಕ್ಷ ಹೆಕ್ಟೇರ್) ಭೂಮಿ ವರುಣಾಪೋಷನವಾಗಿದೆ. ಈ ಮೂಲಕ ಎಲ್ಲ ಪ್ರಮುಖ ವಾಣಿಜ್ಯ ಬೆಳೆಗಳು ಹಾಳಾಗಿದ್ದು, ರೈತ ತಲೆ ಮೇಲೆ ಕೈಹೊತ್ತು ಕುಳಿತುಕೊಳ್ಳುವಂತಾಗಿದೆ.
    ಕೃಷಿ ಮತ್ತು ಕಂದಾಯ ಇಲಾಖೆ ಜಂಟಿಯಾಗಿ ಮೂರು ಹಂತದ ಸಮೀಕ್ಷೆ ಕೈಗೊಂಡಿವೆ. ಮೊದಲ ಹಂತದಲ್ಲಿ 89 ಸಾವಿರ ಹೆಕ್ಟೇರ್, 2ನೇ ಹಂತದಲ್ಲಿ 1.89 ಲಕ್ಷ ಮತ್ತು 3ನೇ ಹಂತದ ಸಮೀಕ್ಷೆಯಲ್ಲಿ 1.50 ಲಕ್ಷ ಹೆಕ್ಟೇರ್ ಬೆಳೆ ಸಂಪೂರ್ಣ ಹಾಳಾಗಿದೆ. ಉದ್ದು-ಹೆಸರು ಕಳೆದುಕೊಂಡು ತೊಗರಿ ಬೆಳೆಯಿಂದಾದರೂ ಕೊಂಚ ಉಸಿರಾಡಬೇಕು ಎಂದುಕೊಂಡಿದ್ದ ರೈತನ ಕನಸು ನೆರೆ ಅಬ್ಬರದಲ್ಲಿ ಕೊಚ್ಚಿ ಹೋಗಿದೆ.
    ಮೊದಲ ಹಂತದಲ್ಲಿ 89 ಸಾವಿರ ಹೆಕ್ಟೇರ್ನಿಂದ 61 ಕೋಟಿ ರು. ನಷ್ಟವಾಗಿದೆ ಎಂದು ಕೃಷಿ ಇಲಾಖೆಯೇ ಹೇಳಿತ್ತು. ಇದನ್ನೇ ಆಧಾರವಾಗಿ ಇಟ್ಟುಕೊಂಡರೂ 4.28 ಲಕ್ಷ ಹೆಕ್ಟೇರ್ನಿಂದ ಸುಮಾರು 350 ಕೋಟಿ ರೂ. ಹಾನಿಯಾಗಿದೆ. ಆದರೆ ಎಕರೆಗೆ ಕನಿಷ್ಠ 1000 ರು. ನಷ್ಟ ಎಂದುಕೊಂಡರೂ 1000 ಕೋಟಿಗೂ ಮಿಕ್ಕಿ ಹಾಳಾಗಿರುವುದಂತೂ ಸ್ಪಷ್ಟ. ವಿಚಿತ್ರವೆಂದರೆ, ಕೃಷಿ ಮತ್ತು ಕಂದಾಯ ಇಲಾಖೆಗಳು ಇಷ್ಟು ಹೆಕ್ಟೇರ್ ನಷ್ಟವಾಗಿದೆ ಎಂದು ವರದಿ ಸಲ್ಲಿಸಿವೆಯೇ ಹೊರತು, ಎಷ್ಟು ಕೋಟಿ ರೂಪಾಯಿ ಎಂಬುದನ್ನು ಸ್ಪಷ್ಟಪಡಿಸದೆ ಜಾಣತನ ಮೆರೆದಿವೆ.

    ಇನ್ನೂ ನಡೆಯಬೇಕಿದೆ ಸಮೀಕ್ಷೆ
    ಮಳೆಗೆ ಬೆಳೆ ಕೊಚ್ಚಿ ಹೋಗಿರುವುದು ಒಂದೆಡೆಯಾದರೆ, ಭೀಮಾ ಮತ್ತು ಕಾಗಿಣಾ ಪ್ರವಾಹ ಅಬ್ಬರಕ್ಕೂ ಅಪಾರ ಪ್ರಮಾಣದ ಬೆಳೆ ಹಾಳಾಗಿದೆ. ಜೇವಗರ್ಿ, ಅಫಜಲಪುರ, ಚಿತ್ತಾಪುರ ಹೀಗೆ ಜಿಲ್ಲೆಯ ಅನೇಕ ಗ್ರಾಮಗಳಲ್ಲಿನ ಜಮೀನುಗಳಲ್ಲಿ ಬೆಳೆ ಸಮೀಕ್ಷೆ ಮಾಡುವುದು ಬಾಕಿ ಇದೆ. 4ನೇ ಹಂತದಲ್ಲಿ ಈ ಸಮೀಕ್ಷೆ ಕೈಗೊಳ್ಳುವ ಮೂಲಕ ಒಟ್ಟಾರೆ ಹಾನಿ ನಿಖರವಾಗಿ ಗೊತ್ತಾಗಲಿದೆ.

    ಹಿಂಗಾರು ಬಿತ್ತನೆ
    ಹಿಂಗಾರು ಶೇಂಗಾ, ಕಡಲೆ, ಜೋಳ, ಕುಸುಬೆ ಬಿತ್ತನೆಗೆ ರೈತರು ಕಾತರರಾಗಿದ್ದಾರೆ. ಕೆಲವೆಡೆ ಬಿತ್ತನೆ ಶುರುವಾಗಿದ್ದರೂ ಅಪಾರ ಮಳೆಯಿಂದಾಗಿ ಭೂಮಿ ಹಸಿ ಇರುವುದು ಅಡ್ಡಿಯಾಗಿ ಪರಿಣಮಿಸಿದೆ. 8-10 ಮಳೆ ಬಾರದಿದ್ದಲ್ಲಿ ಭೂಮಿ ಕೊಂಚ ಆರಲಿದೆ. ಆ ನಂತರವೇ ಪೂರ್ಣ ಪ್ರಮಾಣದ ಬಿತ್ತನೆ ಸಾಧ್ಯವಾಗಲಿದೆ.

    ಅತಿಯಾದ ಮಳೆಯಿಂದ ಬೆಳೆ ಹಾನಿ ಹೆಚ್ಚಾಗಿದ್ದು, ವರದಿ ಸಲ್ಲಿಸಲಾಗಿದೆ. ಮಳೆ ಇಲ್ಲಿಗೆ ಸ್ಟಾಪ್ ಆದರೆ ಮುಂದಿನ ಬೆಳೆ ಚಳಿ ಆಧರಿಸಿ ಬರಲಿವೆ. ನ.15ರವರೆಗೂ ಕಡಲೆ, ಜೋಳ, ಗೋಧಿ ಬಿತ್ತನೆ ಮಾಡಬಹುದು. ಕೋಟ್ಯಂತರ ರೂಪಾಯಿ ಬೆಳೆ ಹಾನಿಗೀಡಾಗಿದ್ದು, ರೈತ ಸಂಕಷ್ಟದಲ್ಲಿದ್ದಾನೆ.
    | ಡಾ.ರಿತೇಂದ್ರನಾಥ ಸುಗೂರ
    ಜಂಟಿ ಕೃಷಿ ನಿರ್ದೇಶಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts