More

    ಸಾಲ ಮರುಪಾವತಿಗೆ ರೈತರ ಪರದಾಟ

    ಶಿರಸಿ: ಸಹಕಾರಿ ಸಂಘ ಹಾಗೂ ಕ್ರಿಡಿಟ್ ಸಹಕಾರಿ ಸಂಘಗಳಲ್ಲಿ ಮಾಡಿದ ಸಾಲ ಮರುಪಾವತಿಗೆ ಮಾ. 31 ಕೊನೆಯ ದಿನವಾಗಿದ್ದು, ಕರೊನಾ ಹಾಗೂ ಮಂಗನ ಕಾಯಿಲೆಯ ಕಾರಣ ಮಾರುಕಟ್ಟೆಯ ತಲ್ಲಣಕ್ಕೆ ಸಿಕ್ಕ ಸಾವಿರಾರು ಸಾಲಗಾರ ರೈತರು ದಿಕ್ಕು ಕಾಣದಂತಾಗಿದ್ದಾರೆ.

    ಪ್ರತಿ ವರ್ಷ ಮಾರ್ಚ್ ಅಂತ್ಯದೊಳಗೆ ರೈತರು ತಾವು ಬೆಳೆದ ಬೆಳೆಯನ್ನು ಸಂಬಂಧಪಟ್ಟ ಸಹಕಾರಿ ಸಂಘದ ಖಾತೆಗೆ ಹಾಕಿ, ಅದರಿಂದ ಬರುವ ಆದಾಯದಲ್ಲಿ ಸಾಲ ಮರುಪಾವತಿ ಮಾಡುತ್ತಿದ್ದರು. ಆದರೆ, ಪ್ರಸ್ತುತ ಜಿಲ್ಲೆಯಲ್ಲಿ ಮಂಗನ ಕಾಯಿಲೆ ಜತೆಗೆ ಕರೊನಾ ಸೃಷ್ಟಿಸಿರುವ ಆತಂಕದಿಂದ ರೈತರ ಮಹಸೂಲು (ಕೃಷಿ ಉತ್ಪನ್ನ) ಸಹಕಾರಿ ಸಂಘಗಳು ಹಾಗೂ ವ್ಯಾಪಾರಸ್ಥರಲ್ಲಿ ಮಾರಾಟವಾಗದೆ ಹಾಗೆಯೇ ಉಳಿದಿದೆ. ಜತೆಗೆ, ಆರ್ಥಿಕ ವರ್ಷದ ಕೊನೆಯ ದಿನಗಳಾದ್ದರಿಂದ ಬಹುತೇಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳು ವ್ಯಾಪಾರವನ್ನು ಸದ್ಯಕ್ಕೆ ಸ್ಥಗಿತಗೊಳಿಸಿ, ಲೆಕ್ಕಪತ್ರದಲ್ಲಿ ಮುಳುಗಿವೆ. ಇದು ಕೂಡ ರೈತರ ಮಹಸೂಲು ವಿಕ್ರಿಯಾಗದಿರುವುದಕ್ಕೆ ಕಾರಣವಾಗಿದೆ. ಹೀಗಾಗಿ, ರೈತರ ಜೇಬು ಖಾಲಿಯಾಗಿದ್ದು, ಸಾಲ ಮರುಪಾವತಿಯೇ ಸವಾಲಾಗಿ ಮಾರ್ಪಟ್ಟಿದೆ.

    ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳು ಹಾಗೂ ಕ್ರೆಡಿಟ್ ಸಹಕಾರಿ ಸಂಘಗಳಲ್ಲಿ ಅಡಕೆ, ಬಾಳೆ, ತೆಂಗು, ಕಾಳುಮೆಣಸು, ಭತ್ತ ಸೇರಿದಂತೆ ವಿವಿಧ ಕೃಷಿ ಹಾಗೂ ತೋಟಗಾರಿಕಾ ಬೆಳೆ ಬೆಳೆಯಲು, ಜಮೀನು ಅಭಿವೃದ್ಧಿ, ನೀರಾವರಿ, ಬೀಜ-ಗೊಬ್ಬರ ಖರೀದಿ ಸಂಬಂಧ ರೈತರು ಸಾಕಷ್ಟು ಸಾಲ ಮಾಡಿದ್ದರು. ಮಾರ್ಚ್ ವೇಳೆಗಾಗಲೇ ಸಾಲದ ಕಂತು ತೀರಿಸಲು ಕೂಡ ತಯಾರಿ ನಡೆಸಿದ್ದರು. ಆದರೆ, ಏಕಾಏಕಿ ಕೃಷಿ, ತೋಟಗಾರಿಕೆ ಸೇರಿದಂತೆ ಎಲ್ಲ ಮಾರುಕಟ್ಟೆ ಸ್ತಬ್ಧ್ಧಾಗಿದೆ. ಮಹಸೂಲು ಕೈಲಿದ್ದರೂ ಸಾಲದ ಮೊತ್ತವನ್ನು ಸಾಲದ ಖಾತೆಗೆ ಹಾಕಲು ಆಗುತ್ತಿಲ್ಲ. ಪ್ರಸ್ತುತ ಆಯಾ ಆರ್ಥಿಕ ವರ್ಷದಲ್ಲಿ ಸಾಲ ಮರುಪಾವತಿಯಾಗದೆ ಸುಸ್ತಿ ಸಾಲಗಾರರಾದರೆ ಮತ್ತೆ ಸಾಲ ಸಿಗುವುದು ಕಷ್ಟವಾಗಲಿದೆ. ಹೀಗಾದರೆ, ಮುಂದಿನ ಜೀವನ ನಡೆಸುವುದು ದುಸ್ತರ. ಕೃಷಿ ಚಟುವಟಿಕೆ ನಡೆಸಲು ಸಾಲದ ಅಗತ್ಯವಿದ್ದು, ಸಾಲ ಮರುಪಾವತಿಯಾಗದೆ ನೂತನ ಸಾಲ ಮಂಜೂರಾತಿ ಆಗುವುದಿಲ್ಲ. ಹೀಗಾಗಿ, ಸಾಲಗಾರ ರೈತರು ಕಂಗಾಲಾಗಿದ್ದಾರೆ.

    ಜಿಲ್ಲೆಯಲ್ಲಿ ಒಟ್ಟು 173 ಪ್ರಾಥಮಿಕ ಪತ್ತಿನ ಸಹಕಾರಿ ಸಂಘಗಳು ಕಾರ್ಯನಿರ್ವಹಿಸುತ್ತಿವೆ. ಇವುಗಳಲ್ಲಿ 169 ಸಂಘಗಳಲ್ಲಿ 25 ಸಾವಿರಕ್ಕೂ ಹೆಚ್ಚಿನ ರೈತರು 95 ಕೋಟಿ ರೂಪಾಯಿಗೂ ಅಧಿಕ ಸಾಲ ಮಾಡಿದ್ದಾರೆ. ಪ್ರಸ್ತುತ ಕಂತು ತುಂಬುವ ಅವಧಿ ಹತ್ತಿರವೇ ಇದ್ದು, ಬೆಳೆ ಸಾಲ ಮಾದರಿಯಲ್ಲಿ ಮೇ. 31ರವರೆಗೆ ಈ ಅವಧಿ ವಿಸ್ತರಣೆ ಮಾಡುವಂತೆ ಒತ್ತಾಯಿಸುತ್ತಿದ್ದಾರೆ.

    ಕರೊನಾ ಆತಂಕದಿಂದ ಇಡೀ ಮಾರುಕಟ್ಟೆ ಸ್ಥಗಿತವಾಗಿದೆ. ಪ್ರಸಕ್ತ ವರ್ಷ ಬಹುತೇಕ ರೈತರಿಗೆ ಬೆಳೆದ ಬೆಳೆ ಮಾರಾಟ ಮಾಡಲು ಸಾಧ್ಯವಾಗಿಲ್ಲ. ಹಲವು ರೈತರು ಸಾಲ ಮರುಪಾವತಿಯ ಅಂತಿಮ ಘಟ್ಟದಲ್ಲಿ ಮಹಸೂಲು ಮಾರಾಟ ಮಾಡಿ ಸಾಲ ಮರುಪಾವತಿ ಮಾಡುತ್ತಿದ್ದರು. ಆದರೆ, ಈ ಬಾರಿ ಇದಕ್ಕೆ ಅವಕಾಶವೇ ಇಲ್ಲವಾಗಿದೆ. ಸಹಕಾರಿ ಸಂಘ ಬಿಟ್ಟು ಬೇರೆಲ್ಲಾದರೂ ಉತ್ಪನ್ನ ಮಾರಾಟ ಮಾಡಬೇಕೆಂದರೂ ಸಾಧ್ಯವಾಗುತ್ತಿಲ್ಲ. ಸಾಲ ತುಂಬುವ ಮನಸ್ಸಿದ್ದರೂ ತುಂಬಲಾಗದ ಅಸಹಾಯಕ ಸ್ಥಿತಿಯಲ್ಲಿ ರೈತರಿದ್ದಾರೆ. ಹೀಗಾಗಿ, ಸಾಲ ಶೂಲವಾಗುತ್ತಿದೆ. | ವಸುಂಧರ ನಾಯ್ಕ ಸಾಲಗಾರ ರೈತ

    ಸಹಕಾರಿ ಸಂಘಗಳಿಂದ ಪಡೆದ ಮಾಧ್ಯಮಿಕ ಸಾಲವನ್ನು ಭರಣ ಮಾಡಲು ಮಾರ್ಚ್ 31 ಕೊನೆಯ ದಿನವಾಗಿದೆ. ಈ ವರ್ಷ ಕರೊನಾ ಮತ್ತು ಮಂಗನ ಕಾಯಿಲೆಯಿಂದಾಗಿ ರೈತರು ಹಾಗೂ ಸಣ್ಣ ವ್ಯಾಪಾರಸ್ಥರು ನಿಗದಿತ ದಿನಾಂಕದೊಳಗೆ ಹಣ ಭರಣ ಮಾಡುವುದು ಕಷ್ಟಸಾಧ್ಯವಾಗಿರುವುದರಿಂದ ಈ ಸಹಕಾರಿ ಸಂಘಗಳಿಗೆ ಸಾಲ ಭರಣ ಮಾಡುವ ಅವಧಿಯನ್ನು ಮೇ 31ರವರೆಗೆ ವಿಸ್ತರಿಸಿ ಆದೇಶ ಮಾಡಬೇಕು.

    | ಜಿ.ಎನ್.ಹೆಗಡೆ ಜಿಲ್ಲಾ ಪಂಚಾಯಿತಿ ಸದಸ್ಯ

    ತಾಳಮದ್ದಲೆ ಸಪ್ತಾಹ ಮುಂದಕ್ಕ: ಶಿರಸಿ: ತಾಳಮದ್ದಲೆ ಇತಿಹಾಸದಲ್ಲೇ ವಿಶಿಷ್ಟ ಮಾದರಿಯಲ್ಲಿ ಸಂಘಟಿಸಲಾಗಿದ್ದ ಶ್ರೀರಾಮಾನುಭವ ತಾಳಮದ್ದಲೆ ಸರಣಿ ಸಪ್ತಾಹವನ್ನು ಕರೋನಾ ವೈರಸ್ ಕಾರಣದಿಂದ ಮುಂದೂಡಲಾಗಿದೆ. ಸ್ವರ್ಣವಲ್ಲೀಯ ಯಕ್ಷ ಶಾಲ್ಮಲಾ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಟಿಎಂಎಸ್ ಶಿರಸಿ, ವಿಶ್ವಶಾಂತಿ ಸೇವಾ ಟ್ರಸ್ಟ್, ಶಬರ ಸಂಸ್ಥೆ ಸಹಕಾರದಲ್ಲಿ ಹಮ್ಮಿಕೊಳ್ಳಲಾಗಿದ್ದ ತಾಳಮದ್ದಲೆ ಸಪ್ತಾಹ ಇದಾಗಿದ್ದು, ಮಾ.21ರಿಂದ 27ರ ತನಕ ನಗರದ ಟಿಎಂಎಸ್ ಸಭಾಂಗಣದಲ್ಲಿ ಏರ್ಪಡಿಸಲಾಗಿತ್ತು. ಸರಣಿ ತಾಳಮದ್ದಲೆಯ ಮುಂದಿನ ದಿನಾಂಕವನ್ನು ನಂತರ ಪ್ರಕಟಿಸಲಾಗುತ್ತದೆ ಎಂದು ಉಭಯ ಸಂಸ್ಥೆಗಳ ಪರವಾಗಿ ನಾಗರಾಜ್ ಜೊಶಿ ಸೋಂದಾ ತಿಳಿಸಿದ್ದಾರೆ.

    ನಗರಸಭೆಯಿಂದ ವ್ಯಾಪಕ ಜಾಗೃತಿ: ಶಿರಸಿ ನಗರಸಭೆಯಿಂದ ಕರೊನಾ ತಡೆಗೆ ಬಗ್ಗೆ ವ್ಯಾಪಕ ಜಾಗೃತಿ ಆರಂಭಿಸಲಾಗಿದೆ. ನಗರಸಭೆಯ ಸಹಾಯವಾಣಿಗೆ ಬರುವ ಜನರಿಗೆ ಸ್ಯಾನಿಟೈಸರ್ ಡ್ರಾಪ್ ಹಾಕಿ ಕೈ ಸ್ವಚ್ಛಗೊಳಿಸಲಾಗುತ್ತದೆ. ಆದರೆ, ಯಾವುದೇ ರೀತಿ ಮಾಸ್ಕ್ ವಿತರಣೆಯಿಲ್ಲವೆಂದು ಪೌರಾಯುಕ್ತ ರಮೇಶ ನಾಯಕ ತಿಳಿಸಿದ್ದಾರೆ. ಕರೊನಾ ಸಂಬಂಧ ಮನೆ ಮನೆ ಜಾಗೃತಿ, ವಿವಿಧ ವೃತ್ತಗಳಲ್ಲಿ ಮಾಹಿತಿ ಫಲಕ, ಅಂಗಡಿಗಳ ಮಾಲೀಕರಿಗೆ, ಧಾರ್ವಿುಕ ಸಂಸ್ಥೆಗಳು, ಸಂಘ ಸಂಸ್ಥೆಗಳಿಗೆ ಜಾಗೃತಿಯನ್ನು ಮೂಡಿಸಲಾಗುತ್ತಿದೆ. ನಗರಸಭೆ ಕಚೇರಿಯಲ್ಲೂ ಹೆಲ್ಪ್ ಡೆಸ್ಕ್ ಮಾಡಿ ಮಾಹಿತಿ ನೀಡಲಾಗುತ್ತಿದೆ ಎಂದಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts