More

    ಸಾಲ ತುಂಬಲು ಫೈನಾನ್ಸ್​ಗಳ ಒತ್ತಡ

    ಸಂಶಿ: ಕೋವಿಡ್ ಮಹಾಮಾರಿ ತಡೆಯಲು ರಾಜ್ಯ ಸರ್ಕಾರ ಜನತಾ ಕರ್ಫ್ಯ ಲಾಕ್​ಡೌನ್​ನಂಥ ಹಲವು ಕ್ರಮಗಳನ್ನು ಕೈಗೊಳ್ಳುತ್ತಿದೆ. ಕೆಲಸವಿಲ್ಲದೆ ಆರ್ಥಿಕ ಸಂಕಷ್ಟದಲ್ಲಿರುವ ವಿವಿಧ ವರ್ಗಗಳಿಗೆ ಪ್ರೋತ್ಸಾಹ ಧನವನ್ನೂ ಪ್ರಕಟಿಸಿದೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲೂ ಫೈನಾನ್ಸ್ ಹಾಗೂ ಸಂಘಗಳು ಚಕ್ರಬಡ್ಡಿ ಏರುತ್ತ ಹೋಗುತ್ತದೆ ಎಂಬ ಭಯ ಹುಟ್ಟಿಸಿ ಸಾಲ ವಸೂಲಿಗಿಳಿದಿವೆ.

    ಗ್ರಾಮೀಣ ಪ್ರದೇಶದ ಬಹುತೇಕ ಹಳ್ಳಿಗಳಲ್ಲಿ ಜನರು ಸಾಲ ವಸೂಲಿಗಾರರ ಕಿರುಕುಳಕ್ಕೆ ಬೇಸತ್ತಿದ್ದಾರೆ. ಕೆಲ ಸ್ವಸಹಾಯ ಸಂಘಗಳ ಸದಸ್ಯರಿಂದಲೂ ಸಾಲದ ಹಣ ಕೇಳಲಾಗುತ್ತಿದೆ. ನಿರಂತರ ಒತ್ತಾಯಕ್ಕೆ ಕಟ್ಟುಬಿದ್ದ ಬಡವರು ತಮ್ಮಲ್ಲಿನ ಹಣವನ್ನೆಲ್ಲ ಒಂದುಗೂಡಿಸಿ ಸಾಲಕ್ಕೆ ತುಂಬಿ ಇದೀಗ ಸಂಕಷ್ಟಕ್ಕೆ ಸಿಲುಕಿದ್ದಾರೆ.

    ಲಾಕ್​ಡೌನ್​ನಿಂದಾಗಿ ಬಡವರು, ರೈತಾಪಿ ಜನರು, ಕಾರ್ವಿುಕರು, ಮಧ್ಯಮ ವರ್ಗದವರು ಕೆಲಸವಿಲ್ಲದೆ ಆರ್ಥಿಕ ತೊಂದರೆಗೆ ಈಡಾಗಿದ್ದಾರೆ. ಹಾಗಾಗಿ, ಸರ್ಕಾರ ರೈತರು ಮತ್ತು ಸ್ವಸಹಾಯ ಸಂಘಗಳು, ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳು, ಭೂ ಅಭಿವೃದ್ಧಿ ಬ್ಯಾಂಕ್​ಗಳಿಂದ ಪಡೆದಿರುವ ಸಣ್ಣ, ಮಧ್ಯಮ ಹಾಗೂ ದೀರ್ಘಾವಧಿಯ ಸಾಲಗಳ ಮರುಪಾವತಿ ಅವಧಿಯನ್ನು ಜು. 31ರವರೆಗೆ ವಿಸ್ತರಿಸಿದೆ. ಜತೆಗೆ, ಈ ಅವಧಿಯ ಬಡ್ಡಿಯನ್ನು ಸರ್ಕಾರವೇ ಭರಿಸುವುದಾಗಿ ತಿಳಿಸಿದೆ. ಆದರೂ ಸಾಲ ವಸೂಲಾತಿ ಮಾತ್ರ ನಿಂತಿಲ್ಲ.

    ಮೈಕ್ರೋ ಫೈನಾನ್ಸ್ ಸಿಬ್ಬಂದಿಯು ಸಾಲ ಪಡೆದವರ ಮನೆ ಬಾಗಿಲಿಗೆ ಬಂದು ವಸೂಲಿ ಮಾಡುತ್ತಿದ್ದಾರೆ. ಹಣ ಇದ್ದರೆ ಸಾಲದ ಕಂತು ಪಾವತಿಸಿ, ಇಲ್ಲದಿದ್ದರೆ ಬಡ್ಡಿಯ ಹೊರೆ ಬೀಳುತ್ತದೆ ಎಂದು ಸೊಸೈಟಿ ಮತ್ತು ಸಹಕಾರಿ ಬ್ಯಾಂಕ್​ಗಳು ಒತ್ತಡ ಹಾಕುತ್ತಿವೆ.

    ಮಹಿಳೆಯರಿಗೆ ಒತ್ತಡ: ಫೈನಾನ್ಸ್ ಮತ್ತು ಸಂಘಗಳ ಸಿಬ್ಬಂದಿ ಸಾಲ ವಸೂಲಿಗೆ ಹೆಚ್ಚಾಗಿ ಮಹಿಳೆಯರ ಮೇಲೆ ಒತ್ತಡ ಹೇರುತ್ತಿದ್ದಾರೆ. ದಿನದ ಅಲ್ಪಸ್ವಲ್ಪ ದುಡಿಮೆಯಲ್ಲಿ ಪ್ರತಿ ವಾರ ಸಾಲ ತೀರಿಸುತ್ತಿದ್ದ ಮಹಿಳೆಯರು ಕೂಲಿ ಕೆಲಸವಿಲ್ಲದೆ ಕಂಗೆಟ್ಟಿದ್ದಾರೆ. ಈ ಮಧ್ಯೆ ಸಾಲ ವಸೂಲಿ ಗಾಯದ ಮೇಲೆ ಬರೆ ಎಳೆದಂತಾಗುತ್ತಿದೆ. ಎರಡ್ಮೂರು ತಿಂಗಳು ಸಾಲ ಪಾವತಿಸದಿದ್ದಲ್ಲಿ ಬಡ್ಡಿಯ ಮೇಲೆ ಚಕ್ರಬಡ್ಡಿ ಹೊರೆ

    ಬೀಳುತ್ತದೆ. ಲಾಕ್​ಡೌನ್ ಮುಗಿದ ಮೇಲೆ ಒಂದೇ ಸಮಯಕ್ಕೆ ಹಣ ಹೊಂದಿಸುವುದು ಹೇಗೆ ಎಂಬ ಚಿಂತೆ ಬಡ ಜನರನ್ನು ಕಾಡುತ್ತಿದೆ.

    ಸಾಲ ವಸೂಲಿ ಕುರಿತ ಯಾವುದೇ ಪ್ರಕರಣಗಳು ನಮ್ಮ ಗಮನಕ್ಕೆ ಬಂದಿಲ್ಲ. ಈ ವಿಷಯವಾಗಿ ಸ್ಥಳೀಯ ಅಧಿಕಾರಿಗಳ ಸಭೆ ನಡೆಸಿ, ಅಗತ್ಯ ಮಾಹಿತಿ ಪಡೆದು ತಾಲೂಕಿನಲ್ಲಿನ ಬ್ಯಾಂಕ್, ಸೊಸೈಟಿ, ಸಂಘಗಳಿಗೆ ಈ ಸಂದರ್ಭದಲ್ಲಿ ಸಾಲ ವಸೂಲಿ ಮಾಡದಂತೆ ಸೂಚಿಸಲಾಗುವುದು. ಜನರ ಮೇಲೆ ಒತ್ತಡ ಹೇರಿ ಸಾಲ ವಸೂಲಿ ಮಾಡುವ ಪ್ರಕರಣ ಕಂಡು ಬಂದಲ್ಲಿ ಅಂತಹವರ ವಿರುದ್ಧ ಕ್ರಮ ಜರುಗಿಸಲಾಗುವುದು.
    | ಡಾ. ನಯನಾ ತಹಸೀಲ್ದಾರ್ ಕುಂದಗೋಳ

    ಲಾಕ್​ಡೌನ್​ನಿಂದಾಗಿ ಆರೋಗ್ಯ ಕಾಪಾಡಿಕೊಂಡು ತುತ್ತಿನ ಚೀಲ ತುಂಬಿಸಿಕೊಳ್ಳುವುದೇ ಕಷ್ಟಕರವಾಗಿದೆ. ಇದರ ನಡುವೆ ಬ್ಯಾಂಕ್​ನವರು ಸಾಲ ಪಾವತಿಸುವಂತೆ ನಿತ್ಯ ಮನೆಗೆ ಬರುತ್ತಿದ್ದಾರೆ. ಸಮಸ್ಯೆ ವಿವರಿಸಿದರೂ ಲಾಕ್​ಡೌನ್ ನೋಡಿ ನಾವು ಸಾಲ ನೀಡಿಲ್ಲ. ಶನಿವಾರದೊಳಗೆ ಸಾಲದ ಕಂತು ಪಾವತಿಸುವಂತೆ ಹೇಳಿದ್ದಾರೆ.
    | ಹೆಸರು ಹೇಳಲಿಚ್ಛಿಸದ ಸಾಲಗಾರರು

    ಲಾಕ್​ಡೌನ್ ವೇಳೆ ಸಾಲ ವಸೂಲಿ ಮಾಡದಂತೆ ಸರ್ಕಾರ ಹೊರಡಿಸಿದ ಆದೇಶ ಸ್ವಸಹಾಯ ಸಂಘಗಳಿಗಷ್ಟೇ ಸೀಮಿತ. ನಮಗೆ ಅನ್ವಯವಾಗುವುದಿಲ್ಲ. ಜು. 30ರವರೆಗೆ ಸಾಲ ವಸೂಲಿ ಮಾಡಬಾರದೆಂದು ಸರ್ಕಾರದಿಂದ ನಮ್ಮ ಬ್ಯಾಂಕಿಗೆ ಯಾವುದೇ ಆದೇಶ ಬಂದಿಲ್ಲ.
    | ಶ್ರೀಕಾಂತ, ಇಕ್ವಿಟಾಸ್, ಬ್ಯಾಂಕ್ ಆರ್​ಎಂ, ಹುಬ್ಬಳ್ಳಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts