More

    ಸಾಲಮನ್ನಾ ಹಣ ಬಿಡುಗಡೆಗೆ ಆಗ್ರಹ- ರೈತರ ನಿಯೋಗದಿಂದ ಸಚಿವರಿಗೆ ಮನವಿ

    ದಾವಣಗೆರೆ: ಹಿಂದಿನ ಸರ್ಕಾರ ಮಾಡಿದ್ದ ರೈತರ ಸಾಲಮನ್ನಾ ಹಣ ಬಿಡುಗಡೆಗೆ ಒತ್ತಾಯಿಸಿ ಮಾಯಕೊಂಡ ಶಾಸಕ ಕೆ.ಎಸ್. ಬಸವಂತಪ್ಪ ನೇತೃತ್ವದಲ್ಲಿ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕರು ಹಾಗೂ ರೈತರ ನಿಯೋಗ ಬೆಂಗಳೂರಿನಲ್ಲಿ ಸಹಕಾರ ಸಚಿವ ಕೆ.ಎನ್. ರಾಜಣ್ಣ ಅವರಿಗೆ ಮನವಿ ಸಲ್ಲಿಸಿತು.
    ಮಾಯಕೊಂಡ ಕ್ಷೇತ್ರ ವ್ಯಾಪ್ತಿಯ ಕೊಡಗನೂರು ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ರೈತರು ಸಾಲ ತೆಗೆದುಕೊಂಡಿದ್ದರು. ಹಿಂದಿನ ಸರ್ಕಾರ ಮಾಡಿದ್ದ ಸಾಲಮನ್ನಾ ಯೋಜನೆಯಡಿ 54 ಲಕ್ಷ ರೂ. ಸಾಲಮನ್ನಾ ಆಗಬೇಕಿತ್ತು. ಆದರೆ, ಆಡಿಟ್ ಸಮಸ್ಯೆಯಿಂದ ಸಾಲಮನ್ನಾ ಆಗಿರಲಿಲ್ಲ. ಹೀಗಾಗಿ, ಅಂದು ಸಾಲ ಪಡೆದಿದ್ದ ರೈತರು ಇತ್ತ ಸಾಲಮನ್ನಾ ಆಗದೆ, ಅತ್ತ ಸಾಲ ಮರುಪಾವತಿ ಮಾಡಲು ಆಗದೆ ತೊಂದರೆಯಲ್ಲಿ ಸಿಲುಕುವಂತಾಗಿದೆ ಎಂದಿದ್ದಾರೆ.
    ಇನ್ನು ಹೊಸ ಸಾಲ ಕೊಡುವಂತೆ ಅರ್ಜಿ ಸಲ್ಲಿಸಿದರೆ, ನೀವು ಹಳೆಯ ಸಾಲ ತೀರಿಸಿದರೆ ಮಾತ್ರ ಹೊಸ ಸಾಲ ಕೊಡುತ್ತೇವೆ ಎಂದು ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಹೇಳಲಾಗುತ್ತಿದೆ. ಇದರಿಂದಾಗಿ ನಮಗೆ ಬಹಳ ತೊಂದರೆ ಆಗಿದೆ ಎಂದು ರೈತರು ಸಹಕಾರ ಸಚಿವರಿಗೆ ಮನವರಿಕೆ ಮಾಡಿದರು.
    ಮಾಯಕೊಂಡ ಶಾಸಕ ಕೆ.ಎಸ್. ಬಸವಂತಪ್ಪ ಮಾತನಾಡಿ, ಸಾಲಮನ್ನಾ ಯೋಜನೆಯಡಿ ಜಿಲ್ಲೆಯ ಕೃಷಿ ಪತ್ತಿನ ಸಹಕಾರ ಸಂಘಗಳಲ್ಲಿ ಅಂದಾಜು 1 ಕೋಟಿ ರೂ. ಹಣ ಬಿಡುಗಡೆಯಾಗಬೇಕಿದೆ. ಇದರಲ್ಲಿ ಮಾಯಕೊಂಡ ಕ್ಷೇತ್ರದ ವ್ಯಾಪ್ತಿಯ ಕೊಡಗನೂರು ಕೃಷಿ ಪತ್ತಿನ ಸಹಕಾರ ಸಂಘಕ್ಕೆ 54 ಲಕ್ಷ ರೂ. ಹಣ ಬಿಡುಗಡೆ ಆಗಬೇಕು. ಹಣ ಬಿಡುಗಡೆ ಆಗದ ಪರಿಣಾಮ ಈ ಭಾಗದ ರೈತರು ಹೊಸ ಸಾಲ ಪಡೆಯಲು ಆಗದೆ ಕೃಷಿ ಚಟುವಟಿಕೆ ನಡೆಸಲೂ ತೊಂದರೆ ಅನುಭವಿಸುವಂತಾಗಿದೆ. ಕೂಡಲೇ ಸಾಲಮನ್ನಾದ ಹಣ ಬಿಡುಗಡೆ ಮಾಡುವಂತೆ ಸಚಿವರಲ್ಲಿ ಮನವಿ ಮಾಡಿದರು.
    ಕೊಡಗನೂರು ಸಹಕಾರ ಸಂಘದ ಅಧ್ಯಕ್ಷ ಶಂಕರಮೂರ್ತಿ, ಉಪಾಧ್ಯಕ್ಷ ಫಾರೂಕ್ ಅಹ್ಮದ್, ನಿರ್ದೇಶಕರಾದ ಕೆ. ಶಿವಮೂರ್ತಿ, ಬಿ.ಎಂ. ಜಯದೇವಪ್ಪ, ಕೆ.ಜಿ.ಜಯಣ್ಣ, ಮಾಣಿಕ್‌ರಾವ್, ತಿಪ್ಪಣ್ಣ, ಶಕೀಲ ಬಾನು, ಸುರೇಶ್, ರತ್ನಮ್ಮ, ರಾಜಶೇಖರ್, ರೈತ ಮುಖಂಡ ರೇವಣ್ಣ ನಿಯೋಗದಲ್ಲಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts