More

    ಸಾರ್ವಜನಿಕ ಸಮಸ್ಯೆಗಳಿಗೆ ಸ್ಪಂದಿಸುವ ಜವಾಬ್ದಾರಿ ಇರಲಿ ; ಪೊಲೀಸ್ ಧ್ವಜ ದಿನಾಚರಣೆಯಲ್ಲಿ ನಿವೃತ್ತ ಡಿವೈಎಸ್ಪಿ ವೆಂಕಟಸ್ವಾಮಿ ಸಲಹೆ

    ತುಮಕೂರು: ಪೊಲೀಸರು ವೃತ್ತಿಯುದ್ದಕ್ಕೂ ಒತ್ತಡದಲ್ಲಿಯೇ ಕೆಲಸ ಮಾಡುವುದು ಅನಿವಾರ್ಯ, ವೈಯಕ್ತಿಕ ಸಮಸ್ಯೆಗಳ ನಡುವೆಯೂ ಸಾರ್ವಜನಿಕ ಸಮಸ್ಯೆಗಳಿಗೆ ಸ್ಪಂದಿಸುವ ಜವಾಬ್ದಾರಿ ಇರಬೇಕು ಎಂದು ನಿವೃತ್ತ ಡಿವೈಎಸ್ಪಿ ವೆಂಕಟಸ್ವಾಮಿ ಹೇಳಿದರು.

    ನಗರದ ಜಿಲ್ಲಾ ಶಸಸ್ತ್ರ ಮೀಸಲು ಪಡೆ ಕವಾಯತು ಮೈದಾನದಲ್ಲಿ ಪೊಲೀಸ್ ಇಲಾಖೆ ವತಿಯಿಂದ ಶುಕ್ರವಾರ ಏರ್ಪಡಿಸಿದ್ದ ಪೊಲೀಸ್ ಧ್ವಜ ದಿನಾಚರಣೆಯಲ್ಲಿ ಪೊಲೀಸ್ ಧ್ವಜ ಬಿಡುಗಡೆ ಮಾಡಿ ಮಾತನಾಡಿದರು.

    ಪೊಲೀಸರು ದೈಹಿಕ ಮತ್ತು ಮಾನಸಿಕವಾಗಿ ಒತ್ತಡದಲ್ಲಿತ್ತಾರೆ, ಜತೆಗೆ ವೈಯಕ್ತಿಕ ಸಮಸ್ಯೆಗಳು ಇರುತ್ತವೆ. ನಮ್ಮ ಒತ್ತಡ, ಸಮಸ್ಯೆಗಳನ್ನು ಬದಿಗಿಟ್ಟು ಸಮಾಜದ ರಕ್ಷಣೆ ಜತೆಗೆ ನಾಗರಿಕರ ಸಮಸ್ಯೆಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸುವ ಕೆಲಸವನ್ನು ಪೊಲೀಸರು ಮಾಡಬೇಕಾಗಿದೆ ಎಂದರು.

    ಸಮಾಜದ ಎಲ್ಲರಿಗೂ ಎಲ್ಲ ವಿಧದಲ್ಲಿಯೂ ಪೊಲೀಸರ ಸೇವೆ ಬೇಕು. ಆದರೂ, ಅಡುಗೆಯಲ್ಲಿ ಕರಿಬೇವು ಸೊಪ್ಪು ಇದ್ದಂತೆ ಆಗಿದ್ದಾರೆ. ಅಡುಗೆಗೆ ಒಗ್ಗರಣೆ ಹಾಕಲು ಕರಿಬೇವು ಮುಖ್ಯವಾಗಿ ಬೇಕು. ಆದರೆ, ಊಟ ಮಾಡುವಾಗ ಕರಿಬೇವು ಸೊಪ್ಪನ್ನು ತಟ್ಟೆಯಿಂದ ಹೊರಗೆ ತೆಗೆದು ಹಾಕುತ್ತೇವೆ. ಅದೇ ರೀತಿ ಪೊಲೀಸರ ಪರಿಸ್ಥಿತಿಯೂ ಆಗಿದೆ ಎಂದರು.

    60 ವರ್ಷಕ್ಕೆ ಅರುಳೋ ಮರುಳೋ ಎನ್ನುತ್ತಾರೆ. ಆದರೆ ಪೊಲೀಸು ವೃತ್ತಿಯಿಂದ 60 ವರ್ಷಕ್ಕೆ ನಿವೃತ್ತರಾದ ಬಳಿಕವೇ ಮರಳು ಅರಳಾಗುತ್ತದೆ. 60ರ ನಂತರ ನಮ್ಮ ಬದುಕು ಕಟ್ಟಿಕೊಳ್ಳಲು ಮುಂದಾಗುತ್ತೇವೆ, 1965 ರಲ್ಲಿ ಪೊಲೀಸ್ ಧ್ವಜ ದಿನಾಚರಣೆ ಜಾರಿಗೆ ಬಂತು. ಪೊಲೀಸ್ ಇಲಾಖೆಯಲ್ಲಿ ಒತ್ತಡದಲ್ಲಿ ಕೆಲಸ ಮಾಡಿ ನಿವೃತ್ತಿ ಹೊಂದಿದವರಿಗೆ ಕಲ್ಯಾಣ ಕಾರ್ಯಕ್ರಮ ಇದಾಗಿದೆ ಎಂದರು.

    2019-20, 2020-21ನೇ ಸಾಲಿನಲ್ಲಿ ನಿವೃತ್ತರಾಗಿರುವ 82 ಮಂದಿ ನಿವೃತ್ತ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳು, 10 ಮಂದಿ ಮರಣ ಹೊಂದಿರುವ ಪೊಲೀಸ್ ಅಧಿಕಾರಿ, ಸಿಬ್ಬಂದಿಯ ಕುಟುಂಬದವರನ್ನು ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಗೌರವಿಸಲಾಯಿತು. ನಿವೃತ್ತ ಪೊಲೀಸ್ ಅಧಿಕಾರಿಗಳಾದ ಎಲ್.ಜಗದೀಶ್, ಲಿಂಗದೇವರು, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಟಿ.ಜೆ.ಉದೇಶ್ ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ.ಕೆ.ವಂಶಿಕೃಷ್ಣ ಪ್ರಾಸ್ತಾವಿಕ ನುಡಿಗಳ್ನಾಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts