More

    ಸಾರ್ವಜನಿಕ ಶೌಚಗೃಹಗಳ ಕೊರತೆ, ನಿರ್ಮಾಣಕ್ಕೆ ನಗರಸಭೆ ಅಧಿಕಾರಿಗಳ ನಿರ್ಲಕ್ಷ್ಯ, ನೈಸರ್ಗಿಕ ಬಾಧೆ ತೀರಿಸಿಕೊಳ್ಳಲು ಜನರ ಪರದಾಟ

    ಜಿ.ಕೆ.ಸುಗ್ಗರಾಜು ನೆಲಮಂಗಲ
    ನಗರದಲ್ಲಿ ಸಾರ್ವಜನಿಕರ ಅನುಕೂಲಕ್ಕಾಗಿ ಸಮರ್ಪಕವಾಗಿ ಶೌಚಗೃಹಗಳ ವ್ಯವಸ್ಥೆ ಕಲ್ಪಿಸಲು ನಗರಸಭೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ವಿಲರಾಗಿದ್ದಾರೆ.

    ತಾಲೂಕು ಕೇಂದ್ರ ನೆಲಮಂಗಲಕ್ಕೆ ವಿವಿಧ ಕೆಲಸ ಕಾರ್ಯಗಳಿಗಾಗಿ ನಿತ್ಯ ಸಾವಿರಾರು ಸಾರ್ವಜನಿಕರು ಬರುತ್ತಾರೆ. ಶಾಲೆ, ಕಾಲೇಜುಗಳಿಗಾಗಿ ಮಕ್ಕಳು ಬರುತ್ತಾರೆ. ನೈಸರ್ಗಿಕ ಬಾಧೆ ತೀರಿಸಿಕೊಳ್ಳಲು ಶೌಚಗೃಹಗಳು ಇಲ್ಲದೆ, ಮುಜುಗರ ಪಡುವ ಸ್ಥಿತಿ ಇದೆ. ಅದರಲ್ಲೂ ಮಹಿಳೆಯರ ಕಷ್ಟ ಹೇಳತೀರದಾಗಿದೆ.

    ಗಿಜಿಗುಡುವ ಸರ್ಕಾರಿ ಕಚೇರಿಗಳು: ತಾಲೂಕು ಕಚೇರಿ ಸೇರಿ 27ಕ್ಕೂ ಹೆಚ್ಚು ವಿವಿಧ ಇಲಾಖೆಗಳ ಕಚೇರಿಗಳಿವೆ. ಈ ಕಚೇರಿಗಳಲ್ಲಿ ಜನ ಗಿಜಿಗುಡುತ್ತಿರುತ್ತಾರೆ. ಇಂಥ ಪರಿಸ್ಥಿತಿ ಇದ್ದರೂ ತಾಲೂಕು ಕಚೇರಿ, ನಗರದ ಕೆಲವೆಡೆ ಸಾರ್ವಜನಿಕ ಶೌಚಗೃಹಗಳು ಇಲ್ಲದೆ ಜನರು ಪರದಾಡುವ ಸ್ಥಿತಿ ಇದೆ. ನಗರಸಭೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳಿಗೆ ಹಿಡಿಶಾಪ ಹಾಕುವುದು ಸಾಮಾನ್ಯವಾಗಿದೆ.

    ಇದ್ದರೂ ನಿರ್ವಹಣೆ ಕೊರತೆ: ಕೆಲವು ಸ್ಥಳಗಳಲ್ಲಿ ಸಾರ್ವಜನಿಕ ಶೌಚಗೃಹಗಳು ಇವೆಯಾದರೂ, ಗುತ್ತಿಗೆದಾರರು ಸಮರ್ಪಕವಾಗಿ ನಿರ್ವಹಿಸುತ್ತಿಲ್ಲ. ಈ ಬಗ್ಗೆ ನಗರಸಭೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಪರಿಶೀಲಿಸುವ ಗೋಜಿಗೂ ಹೋಗುತ್ತಿಲ್ಲ.

    ಉದ್ಘಾಟನೆ ಆಗದ ಶೌಚಗೃಹ: ನಗರಸಭೆಯಿಂದ ಪಂಪ್‌ಹೌಸ್ 2019-20ನೇ ಸಾಲಿನಲ್ಲಿ ಸಾರ್ವಜನಿಕ ಶೌಚಗೃಹ ನಿರ್ಮಿಸಲಾಗಿದೆ. ಕಾಮಗಾರಿ ಮುಗಿದು ನಾಲ್ಕೈದು ತಿಂಗಳು ಕಳೆದಿವೆ. ಆದರೂ, ಇದನ್ನು ಉದ್ಘಾಟಿಸಲು ನಗರಸಭೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಕ್ರಮ ಕೈಗೊಳ್ಳುತ್ತಿಲ್ಲ.

    ನೇತಾಜಿ ಉದ್ಯಾನ ಶೌಚಗೃಹಕ್ಕೆ ಬೀಗ: ನಗರದ ತಾಲೂಕು ಕಚೇರಿ, ಸಾರ್ವಜನಿಕ ಆಸ್ಪತ್ರೆಗೆ ಬರುವವರ ಅನುಕೂಲಕ್ಕಾಗಿ ನೇತಾಜಿ ಉದ್ಯಾನದಲ್ಲಿ ಶೌಚಗೃಹ ನಿರ್ಮಿಸಲಾಗಿತ್ತು. ಅನೇಕ ವರ್ಷ ನನೆಗುದಿಗೆ ಬಿದ್ದಿದ್ದ ಬಳಿಕ ಅದನ್ನು ಉದ್ಘಾಟಿಸಲಾಗಿತ್ತು. ಆದರೆ, ಕಳೆದೊಂದು ವರ್ಷದಿಂದ ಈ ಶೌಚಗೃಹಕ್ಕೂ ಬೀಗ ಬಿದ್ದಿದೆ. ಇದರಿಂದ ಉದ್ಯಾನಕ್ಕೆ ಬರುವ ವಾಯುವಿಹಾರಿಗಳು ಸೇರಿ ಸಾರ್ವಜನಿಕರಿಗೆ ತೊಂದರೆ ಆಗುತ್ತಿದೆ.

    ತಮಟೆ ಚಳವಳಿಯ ಎಚ್ಚರಿಕೆ: ನಗರದ ಆಯಕಟ್ಟಿನ ಸ್ಥಳಗಳಲ್ಲಿ ಸಾರ್ವಜನಿಕ ಶೌಚಗೃಹಗಳ ನಿರ್ಮಾಣಕ್ಕೆ ನಗರಸಭೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಮುಂದಾಗಬೇಕು. ಇದಕ್ಕಾಗಿ ಸಾಕಷ್ಟು ಬಾರಿ ಮನವಿ ಸಲ್ಲಿಸಿದ್ದರೂ ಅಧಿಕಾರಿಗಳು ಬೇಜವಾಬ್ದಾರಿ ಉತ್ತರ ಕೊಡುತ್ತಾ, ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿದ್ದಾರೆ. ಕೆಲ ದಿನಗಳಲ್ಲೇ ಈ ಸಮಸ್ಯೆ ಪರಿಹಾರ ಆಗದಿದ್ದರೆ, ಕನ್ನಡ ಸಾಂಸ್ಕೃತಿಕ ರಂಗ ಸೇರಿ ನಗರದಲ್ಲಿರುವ ವಿವಿಧ ಸಂಘಟನೆಗಳ ಜತೆಗೂಡಿ, ನಗರಸಭೆ ಕಚೇರಿ ಬಳಿ ಕಸ ಸುರಿದು, ತಮಟೆ ಬಾರಿಸಿ ಚಳವಳಿ ಮಾಡಲಾಗುವುದು ಎಂದು ಸಾಂಸ್ಕೃತಿಕ ರಂಗದ ಅಧ್ಯಕ್ಷ ಡಿ. ಸಿದ್ದರಾಜು ಎಚ್ಚರಿಕೆ ನೀಡಿದರು.

    ನಗರದ ಆಯಕಟ್ಟಿನ ಸ್ಥಳಗಳಲ್ಲಿ ಶೌಚಗೃಹ ನಿರ್ಮಾಣದ ವಿಷಯವನ್ನು ಜನರು ನನ್ನ ಗಮನಕ್ಕೆ ತಂದಿದ್ದಾರೆ. ಸಂಬಂಧಪಟ್ಟ ಸಿಬ್ಬಂದಿಗೆ ಅಗತ್ಯ ಕ್ರಮ ಕೈಗೊಳ್ಳಲು ಸೂಚನೆ ನೀಡಿದ್ದೇನೆ. ನಗರದ ಪಂಪ್‌ಹೌಸ್ ಬಳಿ ನಿರ್ಮಿಸಿರುವ ಶೌಚಗೃಹವನ್ನು ಆದಷ್ಟು ಬೇಗ ಸಾರ್ವಜನಿಕ ಬಳಕೆಗೆ ಮುಕ್ತಗೊಳಿಸಲಾಗುವುದು.
    ಮಂಜುನಾಥ್, ನಗರಸಭೆ ಆಯುಕ್ತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts