More

    ಸಾರ್ವಜನಿಕರ ಕುಂದುಕೊರತೆ ಆಲಿಸಿದ ಡಿಸಿ

    ಕ್ರಮ ವಹಿಸುವುದಾಗಿ ಜಿಲ್ಲಾಧಿಕಾರಿ ಭರವಸೆ

    ಗುಂಡ್ಲುಪೇಟೆ: ಪಟ್ಟಣದ ತಾಲೂಕು ಕಚೇರಿಯಲ್ಲಿ ಜಿಲ್ಲಾಧಿಕಾರಿಯನ್ನು ಭೇಟಿ ಮಾಡಿದ ಸಾರ್ವಜನಿಕರು, ತಮ್ಮ ಕುಂದುಕೊರತೆಗಳ ಕುರಿತು ಮನವಿ ಸಲ್ಲಿಸಿದರು.


    ಬಂಡೀಪುರ ಕಾಡಂಚಿನ ಗ್ರಾಮಗಳಲ್ಲಿ ಮದ್ಯ ಮಾರಾಟ ಮಿತಿಮೀರಿದ್ದರೂ ಅಬಕಾರಿ ಇಲಾಖೆಯಾಗಲಿ ಅಥವಾ ಪೊಲೀಸರಾಗಲಿ ತಡೆಗಟ್ಟುತ್ತಿಲ್ಲ. ಇದರಿಂದ ಅಮಾಯಕ ಗಿರಿಜನರು ತಮ್ಮ ದುಡಿತದ ಹಣವನ್ನು ವ್ಯಸನಕ್ಕೆ ಖರ್ಚು ಮಾಡುತ್ತಿದ್ದಾರೆ. ಇದನ್ನು ತಡೆಗಟ್ಟುವಂತೆ ಮೂರು ತಿಂಗಳ ಹಿಂದೆ ಜಿಲ್ಲಾಧಿಕಾರಿಗಳ ನಡೆ ಗ್ರಾಮಗಳ ಕಡೆ ಕಾರ್ಯಕ್ರಮದಲ್ಲಿ ಮನವಿ ಮಾಡಿದ್ದರೂ ಯಾವುದೇ ಉಪಯೋಗವಾಗಿಲ್ಲ. ಇನ್ನಾದರೂ ಇದನ್ನು ತಡೆಗಟ್ಟಲು ಕ್ರಮಕೈಗೊಳ್ಳಬೇಕು ಎಂದು ತಾಲೂಕಿನ ಮಂಗಲ ಗ್ರಾಮದ ಆನಂದ್ ಎಂಬುವರು ಮನವಿ ಮಾಡಿದರು.


    ಈ ಬಗ್ಗೆ ಪೊಲೀಸ್ ಹಾಗೂ ಅಬಕಾರಿ ಅಧಿಕಾರಿಗಳಿಗೆ ನಿರ್ದೇಶನ ನೀಡುವುದಾಗಿ ಚಾರುಲತಾ ಸೋಮಲ್ ಭರವಸೆ ನೀಡಿದರು. ದಾರಿಯಿಲ್ಲದೆ ತಮ್ಮ ಜಮೀನಿಗೆ ಹೋಗಲಾಗುತ್ತಿಲ್ಲ. ಹಲವಾರು ಬಾರಿ ಅರ್ಜಿ ಸಲ್ಲಿಸಿದ್ದರೂ ಸರ್ವೇ ಮಾಡುತ್ತಿಲ್ಲ ಎಂದು ಕೊಡಗಾಪುರ ಗ್ರಾಮದ ಮಹದೇವಪ್ಪ ದೂರಿದರೆ, ಹುಂಡೀಪುರ ಗ್ರಾಮ ಪಂಚಾಯಿತಿಯು 74 ಕುಟುಂಬಗಳಿಗೆ ಹತ್ತು ವರ್ಷಗಳಿಂದಲೂ ನಿವೇಶನ ನೀಡಿಲ್ಲ ಎಂದು ಚೌಡಹಳ್ಳಿ ಗ್ರಾಮಸ್ಥರು ಆರೋಪಿಸಿದರು. ಈ ಬಗ್ಗೆ ಕ್ರಮಕೈಗೊಳ್ಳುವಂತೆ ಸರ್ವೇ ಇಲಾಖೆ ಮತ್ತು ತಾಲೂಕು ಪಂಚಾಯಿತಿ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗುವುದು ಎಂದು ಡಿಸಿ ತಿಳಿಸಿದರು.


    ಮೂರು ವರ್ಷಗಳಿಂದ ತಮಗೆ ನ್ಯಾಯಬೆಲೆ ಅಂಗಡಿಯಲ್ಲಿ ಕಡಿಮೆ ರೇಷನ್ ವಿತರಿಸಲಾಗುತ್ತಿದೆ. ಅಲ್ಲದೆ ಪ್ರತಿ ತಿಂಗಳೂ ನಿಯಮಬಾಹಿರವಾಗಿ ಹಣ ವಸೂಲಿ ಮಾಡುತ್ತಿದ್ದಾರೆ. ಈ ಬಗ್ಗೆ ಆಹಾರ ಇಲಾಖೆ ಹಾಗೂ ತಹಸೀಲ್ದಾರ್ ಗಮನಕ್ಕೆ ತಂದಿದ್ದರೂ ಯಾವುದೇ ಕ್ರಮಕೈಗೊಂಡಿಲ್ಲ. ಆದ್ದರಿಂದ ಸಂಬಂಧಿಸಿದ ನ್ಯಾಯಬೆಲೆ ಅಂಗಡಿ ಲೈಸೆನ್ಸ್ ರದ್ದುಪಡಿಸಿ ಎಂದು ಮಳವಳ್ಳಿ ಗ್ರಾಮದ ಬಸವರಾಜು ಒತ್ತಾಯಿಸಿದರು. ಈ ಬಗ್ಗೆ ಆಹಾರ ಇಲಾಖೆ ಅಧಿಕಾರಿಗಳು ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಲಿದ್ದಾರೆ ಎಂದಿ ಡಿಸಿ ಉತ್ತರಿಸಿದರು.


    ತಮ್ಮ ವಾರ್ಡ್‌ನ ಅಭಿವೃದ್ಧಿಗೆ ಅಗತ್ಯ ಅನುದಾನ ನೀಡದೆ ತಾರತಮ್ಯ ಮಾಡಲಾಗುತ್ತಿದ್ದು, ತಾವು ಈ ಬಗ್ಗೆ ಅಧಿಕಾರಿಗಳಿಗೆ ನಿರ್ದೇಶನ ನೀಡಬೇಕು ಎಂದು ಪುರಸಭೆ ಸದಸ್ಯ ಕುಮಾರ್ ಕೋರಿದರು. ಮತ್ತೊಬ್ಬ ಸದಸ್ಯ ರಾಜಗೋಪಾಲ್ ಹಾಗೂ ಸದಸ್ಯೆ ಪತಿ ನವೀದ್ ಮಾತನಾಡಿ, ಪಟ್ಟಣದ ಹಲವಾರು ವಾರ್ಡ್‌ಗಳಿಗೆ ಕೊಳವೆಬಾವಿಯಿಂದಲೇ ನೀರು ಸರಬರಾಜು ಮಾಡಲಾಗುತ್ತಿದೆ. ಕುಡಿಯಲು ಶುದ್ಧ ನೀರು ಪೂರೈಸಲು ಕ್ರಮಕೈಗೊಳ್ಳಬೇಕು ಎಂದು ಮನವಿ ಮಾಡಿದರು.


    ಮೈಸೂರು ಕ್ಲೀನ್ ಫೌಂಡೇಷನ್ ಸದಸ್ಯೆ ಲೀಲಾವತಿ ಮಾತನಾಡಿ, ಪಟ್ಟಣದಲ್ಲಿ ಪುರಸಭೆ ಶುಚಿತ್ವ ನಿರ್ವಹಣೆ ಮಾಡುತ್ತಿಲ್ಲ. ಅಲ್ಲದೇ, ಎಲ್ಲ ಚರಂಡಿಗಳಲ್ಲಿ ಪ್ಲಾಸ್ಟಿಕ್ ತುಂಬಿಕೊಂಡು ಮಳೆನೀರು ಹಾಗೂ ಕೊಳಚೆ ನೀರು ರಸ್ತೆಯಲ್ಲಿಯೇ ಹರಿಯುತ್ತಿದೆ. ಆದ್ದರಿಂದ ಪ್ಲಾಸ್ಟಿಕ್ ಬಳಕೆಯನ್ನು ಸಂಪೂರ್ಣ ಬಂದ್ ಮಾಡಿಸಲು ಕ್ರಮಕೈಗೊಳ್ಳಬೇಕು ಎಂದು ಮನವಿ ಮಾಡಿದರು.


    ಎಲ್ಲ ದೂರುಗಳನ್ನು ಸಂಬಂಧಪಟ್ಟ ಇಲಾಖೆಗಳಿಗೆ ಕಳುಹಿಸಿ ಸಮಸ್ಯೆಗಳ ಪರಿಹಾರಕ್ಕೆ ಕ್ರಮಕೈಗೊಳ್ಳುವಂತಗೆ ಸೂಚಿಸಲಾಗುವುದು ಎಂದು ಜಿಲ್ಲಾಧಿಕಾರಿ ಹೇಳಿದರು.
    ಇದೇ ವೇಳೆ ಸ್ಥಳದಲ್ಲಿ ಹಾಜರಿದ್ದ ಪತ್ರಕರ್ತರು, ತಾಲೂಕು ಮಟ್ಟದ ಅಧಿಕಾರಿಗಳ ನಿರ್ಲಕ್ಷ್ಯದ ಬಗ್ಗೆ ದೂರಿದರು. ನೀವು ಸಾರ್ವಜನಿ ಕರಿಂದ ಮನವಿ ಮಾತ್ರ ಸ್ವೀಕರಿಸುತ್ತೀರಿ. ಆದರೆ ಮಾಧ್ಯಮದ ವರದಿಗಳನ್ನು ಪರಿಗಣಿಸುತ್ತಿಲ್ಲ. ತಾಲೂಕು ಪಂಚಾಯಿತಿ ಇಒ ಕರೆ ಸ್ವೀಕರಿಸುವುದಿಲ್ಲ. ಅಲ್ಲದೆ ಯಾವುದೇ ಕೆಲಸಗಳನ್ನು ಮಾಡುತ್ತಿಲ್ಲ. ತಾಲೂಕಿನ ಕಂದಾಯ ಭೂಮಿಗಳಲ್ಲಿ ಅಕ್ರಮವಾಗಿ ರೆಸಾರ್ಟ್ ನಿರ್ಮಾಣ ಮಾಡುತ್ತಿದ್ದರೂ ಅಧಿಕಾರಿಗಳು ಕ್ರಮಕೈಗೊಳ್ಳುತ್ತಿಲ್ಲ. ಪಟ್ಟಣದ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ಕೋಟ್ಯಾಂತರ ರೂ.ವೆಚ್ಚದಲ್ಲಿ ಚರಂಡಿ ನಿರ್ಮಿಸಿದ್ದರೂ ಸಣ್ಣಪುಟ್ಟ ವಾಹನಗಳ ಭಾರಕ್ಕೆ ಡೆಕ್ ಕುಸಿದಿದೆ. ಇದರಿಂದ ಸಾರ್ವಜನಿಕರು, ಪಾದಚಾರಿ ಮಾರ್ಗಬಿಟ್ಟು ಹೆದ್ದಾರಿಯಲ್ಲಿಯೇ ನಡೆಯುವಂತಾಗಿದೆ. ಈ ಬಗ್ಗೆ ಯಾರೊಬ್ಬರೂ ಕ್ರಮಕೈಗೊಳ್ಳುತ್ತಿಲ್ಲ. ಸಾರ್ವಜನಿಕರ ಸಮಸ್ಯೆಗಳ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾದರೂ ಲೆಕ್ಕಕ್ಕೆ ತೆಗೆದುಕೊಳ್ಳುವುದಿಲ್ಲ. ನೀವಾದರೂ ಈ ಬಗ್ಗೆ ಗಮನಹರಿಸಿ ಎಂದು ಒತ್ತಾಯಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts