More

    ಸಾಮಾಜಿಕ ನ್ಯಾಯದಡಿ ಸಾಮಾಜ್ರೃ ಕಟ್ಟಿದ ನಾಲ್ವಡಿ

    ಕೆ.ಆರ್.ನಗರ: ರಾಜದಂಡಕ್ಕೆ ಬದಲಾಗಿ ಮಾನದಂಡ, ಖಡ್ಗಕ್ಕೆ ಬದಲಾಗಿ ಲೇಖನಿ, ರಾಜ್ಯ ವಿಸ್ತರಣೆಗಿಂತ ರಾಜ್ಯದ ಅಭಿವೃದ್ಧಿಯನ್ನು ಬಯಸಿ ಇಡೀ ಸಮಾಜವನ್ನು ಸಾಮಾಜಿಕ ನ್ಯಾಯದಡಿ ಕಟ್ಟಲು ಶ್ರಮಿಸಿದ ನಾಲ್ವಡಿ ಕೃಷ್ಣರಾಜ ಒಡೆಯರ ದಿಟ್ಟ ಕಾನೂನು ಕ್ರಮಗಳೇ ಅವರ ಸಂಸ್ಥಾನವನ್ನು ಇತರ ಸಂಸ್ಥಾನಕ್ಕಿಂತ ವಿಭಿನ್ನವಾಗಿಸಿದವು ಎಂದು ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು ಅಧ್ಯಕ್ಷ ಡಿಂಡಿಮ ಶಂಕರ್ ಬಣ್ಣಿಸಿದರು.

    ಪಟ್ಟಣದ ರೋಟರಿ ಭವನದಲ್ಲಿ ಶುಕ್ರವಾರ ಆಯೋಜಿಸಿದ್ದ ಕನ್ನಡ ಸಾಹಿತ್ಯ ಪರಿಷತ್ತು ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಾಲ್ವಡಿ ಕೃಷ್ಣರಾಜ ಒಡೆಯರು ನಾಡಿನಾದ್ಯಂತ ಅತ್ಯಂತ ಜನಪ್ರಿಯ. ಶೋಷಿತರ ಪರವಾಗಿ ಜನಪರ, ನ್ಯಾಯ ಮತ್ತು ದೂರದೃಷ್ಟಿಯ ಅಭಿವೃದ್ಧಿ ಕಾರ್ಯಗಳು ಎಂದೆಂದೂ ಅಮರವಾಗಿವೆ ಎಂದರು.

    ಕರ್ನಾಟಕದ ಚರಿತ್ರೆಯಲ್ಲಿ ಮಾತ್ರವಲ್ಲದೆ, ಭಾರತದ ಚರಿತ್ರೆಯಲ್ಲಿಯೇ ಮೈಸೂರು ಸಂಸ್ಥಾನಕ್ಕೆ ಒಂದು ವಿಶಿಷ್ಟ ಸ್ಥಾನ ದೊರಕಿದ್ದು, ನಾಲ್ವಡಿಯವರು ಒಡೆಯರಾದರೂ ಜನಸಾಮಾನ್ಯನ ಸಮಸ್ಯೆಗೆ ಹೊಣೆಗಾರರಾಗಿ ಬದುಕಿದ್ದರು. ಅಂದಿನ ಭಾರತೀಯ ಪರಿಸ್ಥಿತಿಯಲ್ಲಿ ರಾಜನೊಬ್ಬ ತನ್ನ ಸಾಮಾಜ್ಯ ವಿಸ್ತರಣೆಯ ಕನಸಿನೊಂದಿಗೆ ಸಿಂಹಾಸನವೇರುತ್ತಿದ್ದ. ಆದರೆ, ಕೊಲ್ಲಾಪುರದ ಶಾಹು ಮಹಾರಾಜ, ಬರೋಡದ ಸಯ್ಯಜಿರಾವ್ ಗಾಯಕವಾಡ್, ಮೈಸೂರಿನ ನಾಲ್ವಡಿ ಅವರು ಸಾಮಾಜಿಕ ನ್ಯಾಯದಡಿ ಸಾಮ್ರಾಜ್ಯವನ್ನು ನಿರ್ಮಿಸಲು ಹೊರಟರು ಎಂದು ತಿಳಿಸಿದರು.

    ಈ ಮೂವರು ಸಮಕಾಲೀನರೂ ಹಾಗೂ ಸಹಪಾಠಿಗಳೂ ಕೂಡ ಭಾರತದಲ್ಲಿ ಮೊಟ್ಟ ಮೊದಲ ಸಾಮಾಜಿಕ ಕ್ರಾಂತಿ ಸಂಸ್ಥಾನ ಬರೋಡ ಮಹಾರಾಜರದು. ಅದನ್ನು ಆದರ್ಶವಾಗಿಟ್ಟುಕೊಂಡ ಮೈಸೂರಿನ ನಾಲ್ವಡಿಯವರು ಮುಂದೊಂದು ದಿನ ಬರೋಡ ಸಂಸ್ಥಾನಕ್ಕೆ ಆದರ್ಶಪ್ರಾಯರಾದರು. ಇದನ್ನು ಪ್ರಶಂಶಿಸಿದ ಗಾಯಕವಾಡರು ಬರೋಡದ ಮುಖ್ಯರಸ್ತೆಯೊಂದಕ್ಕೆ ನಾಲ್ವಡಿ ಕೃಷ್ಣರಾಜ ಒಡೆಯರ್ ಹೆಸರಿಟ್ಟಿದ್ದು ಅಮರ. ಇದಕ್ಕೆ ಕೃತಜ್ಞರಾಗಿ ಮೈಸೂರಿನ ಮುಖ್ಯರಸ್ತೆಯೊಂದಕ್ಕೆ ಸಯ್ಯಜಿರಾವ್ ರಸ್ತೆ ಎಂದು ನಾಮಕರಣ ಮಾಡಿದ್ದು ಕೂಡ ಅಮರ ಎಂದು ಹೇಳಿದರು.

    ಮೈಸೂರು ಅರಸರು ನಾಡು-ನುಡಿ, ಕನ್ನಡಿಗರ ರಕ್ಷಣೆ, ಕನ್ನಡ ಸಾಹಿತ್ಯದ ಪೋಷಣೆ ಮತ್ತು ಬೆಳವಣಿಗೆಗಾಗಿ ಕನ್ನಡ ಸಾಹಿತ್ಯ ಪರಿಷತ್ತ ನ್ನು ಸ್ಥಾಪಿಸಿ ಕನ್ನಡಿಗರಲ್ಲಿ ಸ್ವಾಭಿಮಾನದ ಕಿಚ್ಚು ಹಚ್ಚಿದರು. ಅಂದು ಅವರು ಸ್ಥಾಪಿಸಿದ ಕಸಾಪ ಇಂದು ಕೂಡ ಕರ್ನಾಟಕದಲ್ಲಿ ಕನ್ನಡಿಗರ ಸಾರ್ವಭೌಮ ಕನ್ನಡ ಸಾಹಿತ್ಯ ಬೆಳವಣಿಗೆ ಮತ್ತು ಪೋಷಣೆಗೆ ಶ್ರಮಿಸುತ್ತಿದೆ ಎಂದರು.

    ಕೃಷಿಕ್ರಾಂತಿ, ಬಡತನ ನಿರ್ಮೂಲನೆ, ಶಿಕ್ಷಣ, ಆರೋಗ್ಯ, ಉದ್ಯೋಗ, ಮಹಿಳೆಯರಿಗೆ ಸ್ಥಾನಮಾನ, ಸಮ ಸಮಾಜದ ನಿರ್ಮಾಣಕ್ಕೆ ಕಾನೂನುಗಳ ರಚನೆ ಸೇರಿದಂತೆ ಹತ್ತು ಹಲವು ಜನಪರ ಯೋಜನೆಗಳನ್ನು ಅನುಷ್ಠಾನ ಮಾಡುವ ಮೂಲಕ ಸಾಮಾಜಿಕ ಕ್ರಾಂತಿಯನ್ನೇ ಮಾಡಿದರು. ಆದ್ದರಿಂದಲೇ ಭಾರತೀಯ ಸಂಸ್ಥಾನ ಅರಸರನ್ನು ಶ್ಲಾಘಿಸದ ಬ್ರಿಟಿಷರು, ನಾಲ್ವಡಿ ಅವರನ್ನು ಮೆಚ್ಚಿಕೊಂಡರು ಎಂದು ಶ್ಲಾಘಿಸಿದರು.

    ರೋಟರಿ ಸಂಸ್ಥೆ ಅಧ್ಯಕ್ಷ ಎ.ಎಸ್.ಶ್ಯಾಮ್, ಕಸಾಪ ತಾಲೂಕು ಗೌರವಾಧ್ಯಕ್ಷ ಡಾ.ಡಿ.ನಟರಾಜು ಮಾತನಾಡಿದರು. ಉಪಾಧ್ಯಕ್ಷ ರಾಮಕೃಷ್ಣ, ಗೌರವ ಕಾರ್ಯದರ್ಶಿ ಸಿ.ಆರ್.ಉದಯ್‌ಕುಮಾರ್, ಕಸಾಪ ತಾಲೂಕು ಮಹಿಳಾ ಘಟಕದ ಅಧ್ಯಕ್ಷೆ ದಾಕ್ಷಾಯಿಣಿ, ನಗರ ಘಟಕದ ಅಧ್ಯಕ್ಷ ಸಿ.ವಿ.ಮೋಹನ್‌ಕುಮಾರ್, ಪದಾಧಿಕಾರಿಗಳಾದ ಸಂಪತ್, ರಾಮಶೆಟ್ಟಿ, ಭಾಸ್ಕರ್ ಸೇರಿದಂತೆ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts