More

    ಸಾಮಾಜಿಕ, ಆರ್ಥಿಕ ಅಭಿವೃದ್ಧಿ ಸಾಧಿಸಿ

    ಚಿತ್ರದುರ್ಗ: ಎಸ್ಸಿ ಭಾಗವಾಗಿರುವ ಬಂಜಾರ ಸಮುದಾಯದವರು ಸಾಮಾಜಿಕ, ಆರ್ಥಿಕವಾಗಿ ಅಭಿವೃದ್ಧಿ ಆಗಬೇಕು ಎಂದು ಮಾಜಿ ಸಚಿವ ಎಚ್.ಆಂಜನೇಯ ಸಲಹೆ ನೀಡಿದರು.

    ಕರ್ನಾಟಕ ಬಂಜಾರ ಜನಜಾಗೃತಿ ಅಭಿಯಾನ ಸಮಿತಿಯಿಂದ ತರಾಸು ರಂಗಮಂದಿರದಲ್ಲಿ ಹಮ್ಮಿಕೊಂಡಿದ್ದ ಸಂತ ಸೇವಾಲಾಲ್‌ರ 285ನೇಯ ಜಯಂತಿ, ಗಣ್ಯರಿಗೆ ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

    ಲಂಬಾಣಿ ಸಮಾಜ ಶೈಕ್ಷಣಿಕ, ರಾಜಕೀಯವಾಗಿಯೂ ಹಿಂದುಳಿದಿದೆ. ದಲಿತರಿಗೂ-ಬಂಜಾರರಿಗೂ ಅಂತಹ ದೊಡ್ಡ ವ್ಯತ್ಯಾಸವೇನೂ ಇಲ್ಲ. ಎರಡೂ ಸಹೋದರ ಸಮಾಜಗಳಾಗಿವೆ. ಜೊತೆ-ಜೊತೆಯಲ್ಲಿ ಬದುಕುವಂತಹ ವಾತಾವರಣ ನಿರ್ಮಾಣವಾಗಬೇಕು. ಆಗ ಎಲ್ಲ ಶೋಷಿತ ಸಮುದಾಯಗಳು ಒಗ್ಗಟ್ಟಾಗಿ ರಾಜಕೀಯ ಶಕ್ತಿ ಪಡೆಯಲು ಸಾಧ್ಯವಿದೆ ಎಂದರು.

    ಸಮುದಾಯದ ಮುಖಂಡರಾದ ಎನ್.ಜಯದೇವನಾಯ್ಕ್, ರಾಘವೇಂದ್ರನಾಯ್ಕ್ ಅವರಿಗೆ ರಾಜಕೀಯ ಸ್ಥಾನ-ಮಾನಗಳ ಅಗತ್ಯವಿದ್ದು, ಸಿಎಂ ಜೊತೆಗೆ ಚರ್ಚಿಸಿ ನಿಗಮ ಮಂಡಳಿಗಳಿಗೆ ನೇಮಕ ಮಾಡಿಕೊಳ್ಳುವಂತೆ ಗಮನ ಸೆಳೆಯುವುದಾಗಿ ಭರವಸೆ ನೀಡಿದರು.

    ಮಾಜಿ ಸಂಸದ ಬಿ.ಎನ್.ಚಂದ್ರಪ್ಪ ಮಾತನಾಡಿ, ಎಸ್ಸಿ-ಎಸ್ಟಿ ಸಮುದಾಯದವರು ಸಮಾಜದಲ್ಲಿ ಎಲ್ಲ ಹಂತದಲ್ಲೂ ಪ್ರಗತಿ ಸಾಧಿಸಿ, ಮುಖ್ಯವಾಹಿನಿಗೆ ಬರಲು ಒಂದಾಗಬೇಕಿದೆ. ಎಸ್ಸಿಯಲ್ಲಿನ 101 ಜಾತಿಗಳು ಶಿಕ್ಷಣ ಪಡೆದು ಉನ್ನತ ಸ್ಥಾನ ಪಡೆಯುವ ಅನಿವಾರ್ಯತೆ ಇದೆ ಎಂದು ಸಲಹೆ ನೀಡಿದರು.

    ಎಸ್ಸಿ ಸಮುದಾಯದವರು ರಾಜಕೀಯವಾಗಿ ಒಗ್ಗಟ್ಟಾಗಿ ಸ್ಪಷ್ಟ ನಿರ್ಧಾರ ಕೈಗೊಳ್ಳಬೇಕಾದ ದಿನಗಳು ಎದುರಾಗಿವೆ. ಈ ನಿಟ್ಟಿನಲ್ಲಿ ನಮ್ಮವರೆಲ್ಲ ಕೈಜೋಡಿಸಿ ಎಂದು ಮನವಿ ಮಾಡಿದರು.

    ಮೆರವಣಿಗೆ: ನೀಲಕಂಠೇಶ್ವರ ಸ್ವಾಮಿ ದೇಗುಲದಿಂದ ಹೊರಟ ಸಂತ ಸೇವಾಲಾಲ್ ಮಹಾರಾಜರ ಭಾವಚಿತ್ರ ಮೆರವಣಿಗೆಗೆ ಭಯಾಗಡ್ ಮಹಾಮಠದ ಮಠ ಸಮಿತಿಯ ಅಧ್ಯಕ್ಷ ಎನ್.ಹನುಮಂತನಾಯ್ಕ್ ಚಾಲನೆ ನೀಡಿದರು. ಚಿತ್ರದುರ್ಗ, ಚಳ್ಳಕೆರೆ, ಹೊಳಲ್ಕೆರೆ ಸೇರಿ ವಿವಿಧೆಡೆಯಿಂದ ಸಮುದಾಯದವರು ಪಾಲ್ಗೊಂಡಿದ್ದರು.

    ಪತ್ರಕರ್ತರಾದ ಟಿ.ಕೆ.ಬಸವರಾಜ್, ತಿಪ್ಪೇಸ್ವಾಮಿ ಸಂಪಿಗೆ, ಎಚ್.ಲಕ್ಷ್ಮಣ್, ಮಹಮ್ಮದ್ ಹನೀಫ್, ಮಹಮ್ಮದಿ ಅವರನ್ನು ಸನ್ಮಾನಿಸಲಾಯಿತು. ಮುಖಂಡರಾದ ನರೇನಹಳ್ಳಿ ಅರುಣ್‌ಕುಮಾರ್, ಆರ್.ವಿಶ್ವಸಾಗರ್, ಕೆ.ಬಿ.ರೂಪಾನಾಯ್ಕ್, ಗೀತಾ ಹನುಮಂತನಾಯ್ಕ್, ಭಾಗ್ಯಾಬಾಯಿ, ಲೋಕೇಶ್‌ನಾಯ್ಕ್, ಶಂಕರನಾಯ್ಕ್, ತಿಪ್ಪೇಶ್‌ನಾಯ್ಕ್, ಅನಿಲ್, ಜಿಎಸ್‌ಟಿ ಚಂದ್ರು, ಗಣೇಶ್‌ನಾಯ್ಕ್, ಡಾ.ಈಶ್ವರ್‌ನಾಯ್ಕ್, ಎಲ್.ರಮೇಶ್‌ನಾಯ್ಕ್, ಆರ್.ನಿಂಗಾನಾಯ್ಕ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts