More

    ಸಾಗರ ನಗರಸಭೆ ಆಡಳಿತ-ಪ್ರತಿಪಕ್ಷ ಸದಸ್ಯರ ನಡುವೆ ಇಂದಿರಾ ಕ್ಯಾಂಟೀನ್ ಮಾತಿನ ಚಕಮಕಿ

    ಸಾಗರ: ನಗರಸಭೆಯ ಸಾಮಾನ್ಯ ಸಭೆಯಲ್ಲಿ ಗುರುವಾರ ಇಂದಿರಾ ಕ್ಯಾಂಟೀನ್ ವಿಚಾರವಾಗಿ ಆಡಳಿತ ಮತ್ತು ಪ್ರತಿಪಕ್ಷ ಸದಸ್ಯರ ನಡುವೆ ವಾಗ್ವಾದ ನಡೆದು, ಪರಿಸ್ಥಿತಿ ವಿಕೋಪಕ್ಕೆ ತಿರುಗಿತು. ಪ್ರತಿಪಕ್ಷ ಸದಸ್ಯರು ಪ್ರಧಾನಿ ನರೇಂದ್ರ ಮೋದಿ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎಂದು ಆಡಳಿತ ಪಕ್ಷದ ಟಿ.ಡಿ.ಮೇಘರಾಜ್ ಸಭಾತ್ಯಾಗ ಮಾಡಿದರು. ಸಭೆಯಲ್ಲಿ ನಮಗೆ ಮಾತನಾಡಲು ಬಿಡುತ್ತಿಲ್ಲ ಎಂದು ಆರೋಪಿಸಿ ಪ್ರತಿಪಕ್ಷ ಸದಸ್ಯರು ಸಭಾಂಗಣದ ಅಂಗಳಕ್ಕೆ ಇಳಿದು ಪ್ರತಿಭಟಿಸಿದರು.
    ಆಡಳಿತ ಪಕ್ಷದ ಕೆ.ಆರ್.ಗಣೇಶಪ್ರಸಾದ್ ಮಾತನಾಡಿ, ಜೋಗ ರಸ್ತೆಯಲ್ಲಿರುವ ಇಂದಿರಾ ಕ್ಯಾಂಟೀನ್‌ನಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆದಿದ್ದು ಗುತ್ತಿಗೆದಾರರು ಸರ್ಕಾರಕ್ಕೆ ವಂಚನೆ ಮಾಡಿದ್ದಾರೆ. ಇಂದಿರಾ ಕ್ಯಾಂಟೀನ್ ನಡೆಸುವ ಹೆಸರಿನಲ್ಲಿ ಗುತ್ತಿಗೆದಾರ ಲಕ್ಷಾಂತರ ರೂ. ಅವ್ಯವಹಾರ ನಡೆಸಿರುವ ಬಗ್ಗೆ ನಮ್ಮಲ್ಲಿ ದಾಖಲೆಗಳಿದ್ದು ದುರ್ಬಲರಿಗೆ ಅನ್ನ ನೀಡುವ ವಿಚಾರದಲ್ಲಿ ದ್ರೋಹ ಬಗೆದವರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
    ಆಗ ಕಾಂಗ್ರೆಸ್‌ನ ಎನ್.ಲಲಿತಮ್ಮ ಮಾತನಾಡಿ, ಭ್ರಷ್ಟಾಚಾರ ಯಾರೇ ಮಾಡಿದರೂ ಅವರ ವಿರುದ್ಧ ಕ್ರಮ ತೆಗೆದುಕೊಳ್ಳಿ, ನಮ್ಮದೇನೂ ಅಭ್ಯಂತರವಿಲ್ಲ. ಆದರೆ ರಾಜ್ಯ ಸರ್ಕಾರ ಸಹ ಶೇ.40 ಕಮಿಷನ್ ತೆಗೆದುಕೊಳ್ಳುತ್ತಿದೆ ಎನ್ನುವ ದೂರು ಇದೆ ಎಂದು ಹೇಳುತ್ತ ಮಧ್ಯದಲ್ಲಿ ಕೇಂದ್ರ ಸರ್ಕಾರ ಮತ್ತು ಪ್ರಧಾನಿ ನರೇಂದ್ರ ಮೋದಿಯವರ ಹೆಸರು ಎಳೆದು ತಂದರು. ಇದಕ್ಕೆ ಆಡಳಿತ ಪಕ್ಷದ ಸದಸ್ಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಆಡಳಿತ ಮತ್ತು ಪ್ರತಿಪಕ್ಷದ ಸದಸ್ಯರ ನಡುವೆ ಮಾತಿನ ಚಕಮಕಿ ನಡೆದು, ಆಡಳಿತ ಪಕ್ಷದ ಸದಸ್ಯರು ಲಲಿತಮ್ಮ ಅವರಿಗೆ ಸಭೆಯಲ್ಲಿ ಮಾತನಾಡಲು ಅವಕಾಶ ಕೊಡದೆ ಕ್ಷಮಾಪಣೆ ಕೋರುವಂತೆ ಪಟ್ಟು ಹಿಡಿದರು. ಇದಕ್ಕೆ ಜಗ್ಗದ ಲಲಿತಮ್ಮ ಮತ್ತು ಪ್ರತಿಪಕ್ಷ ನಾಯಕ ಗಣಪತಿ ಮಂಡಗಳಲೆ ಸಭೆಯ ಪ್ರತಿಭಟನೆ ನಡೆಸಿದರು.
    ಪ್ರಧಾನಿ ಬಗ್ಗೆ ಮಾತನಾಡಿರುವುದು ಬೇಸರ ಉಂಟು ಮಾಡಿದೆ. ಲಲಿತಮ್ಮ ಕ್ಷಮಾಪಣೆ ಕೋರುವಂತೆ ಸಭೆಯಲ್ಲಿ ನಿರ್ಣಯಕೈಗೊಳ್ಳಬೇಕು ಎಂದು ಆಗ್ರಹಿಸಿ ಟಿ.ಡಿ.ಮೇಘರಾಜ್ ಸಭೆಯಿಂದ ಹೊರ ನಡೆದರು.
    ನಗರಸಭೆ ಅಧ್ಯಕ್ಷೆ ಮಧುರಾ ಶಿವಾನಂದ್ ಮಾತನಾಡಿ, ಇಂದಿರಾ ಕ್ಯಾಂಟೀನ್‌ನಲ್ಲಿ ಅವ್ಯವಹಾರ ನಡೆದಿರುವುದನ್ನು ಸದಸ್ಯರು ಗಮನಕ್ಕೆ ತಂದಿದ್ದು, ಅಧಿಕಾರಿಗಳು ಸಮಗ್ರ ತನಿಖೆ ನಡೆಸಿ ಜಿಲ್ಲಾಧಿಕಾರಿಗಳಿಗೆ ವರದಿ ಸಲ್ಲಿಸಬೇಕು. ಅವ್ಯವಹಾರ ನಡೆಸಿದವರ ವಿರುದ್ಧ ಸೂಕ್ತ ಕ್ರಮಕ್ಕೆ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುತ್ತದೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts